ADVERTISEMENT

ಈ ಹಳ್ಳಿಯಲ್ಲಿದೆ ‘ಸೂಪರ್‌ ಮಾರ್ಕೆಟ್‌’

ಮೈಸೂರು–ಮಂಡ್ಯ ಗಡಿಯಲ್ಲಿರುವ ಯಾಚೇನಹಳ್ಳಿಯಲ್ಲಿ ಮಾದರಿ ಕಾರ್ಯ

ಎಂ.ಮಹೇಶ
Published 12 ಆಗಸ್ಟ್ 2024, 7:31 IST
Last Updated 12 ಆಗಸ್ಟ್ 2024, 7:31 IST
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿಯ ಯಾಚೇನಹಳ್ಳಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಮಿಸಿರುವ ‘ಸಹಕಾರಿ ಜನತಾ ಬಜಾರ್‌’ – ‍ಪ್ರಜಾವಾಣಿ ಚಿತ್ರ
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿಯ ಯಾಚೇನಹಳ್ಳಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಮಿಸಿರುವ ‘ಸಹಕಾರಿ ಜನತಾ ಬಜಾರ್‌’ – ‍ಪ್ರಜಾವಾಣಿ ಚಿತ್ರ   

ಮೈಸೂರು: ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಗಡಿಯಲ್ಲಿರುವ ತಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿಯ ಯಾಚೇನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (‍ಪಿಎಸಿಸಿಎಸ್)ದಿಂದ ‘ಸಹಕಾರಿ ಜನತಾ ಬಜಾರ್‌’ ಆರಂಭಿಸಿ, ಗ್ರಾಮಸ್ಥರಿಗೆ ಅಗತ್ಯ ವಸ್ತುಗಳು ದೊರೆಯುವಂತೆ ಮಾಡಲಾಗಿದೆ.

ಸಂಘಕ್ಕೆ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಸಹಕಾರ ಬ್ಯಾಂಕ್‌, ಗೋದಾಮು, ರೈತರು ಹಾಗೂ ಹೈನುಗಾರರ ನೆರವಿಗೆಂದು ಪಶು ಆಹಾರ ಸ್ಟೋರೇಜ್, ಸೋಲಾರ್ ಘಟಕ, ಜನೌಷಧಿ ಅಂಗಡಿ, ನಂದಿನಿ ಉತ್ಪನ್ನಗಳ ಮಾರಾಟ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಸಹಕಾರಿ ಜನತಾ ಬಜಾರ್‌ಗೆಂದು ಪ್ರತ್ಯೇಕವಾಗಿ ಕಟ್ಟಡ ನಿರ್ಮಿಸಿ ಮಳಿಗೆ ಮಾಡಲಾಗಿದೆ. ಅದನ್ನು ಅಲ್ಲಿನ ಜನರು ‘ಸೂಪರ್‌ ಮಾರ್ಕೆಟ್‌’ ಎಂದೇ ಕರೆಯುತ್ತಾರೆ.

ಸಂಘದ ಕಟ್ಟಡದ ಮೇಲೆ 40 ಕೆ.ವಿ. ಸಾಮರ್ಥ್ಯದ ಸೌರವಿದ್ಯುತ್‌ ಘಟಕ ಸ್ಥಾಪಿಸಲಾಗಿದ್ದು, ಅಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಇಂಧನ ಇಲಾಖೆಗೆ ಮಾರಲಾಗುತ್ತಿದೆ. ಗ್ರಾಮದ ವಿದ್ಯಾರ್ಥಿಗಳು, ಯುವಕರು ಹಾಗೂ ಆಸಕ್ತರಿಗೆ ಜ್ಞಾನ ಸಂಪಾದನೆಗೆಂದು ಗ್ರಂಥಾಲಯ ಸ್ಥಾಪಿಸಲಾಗಿದೆ. ಅಲ್ಲಿ ಬಹಳಷ್ಟು ಪುಸ್ತಕಗಳ ಸಂಗ್ರಹವಿದ್ದು, ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಲೆಂದು ದಿನಪತ್ರಿಕೆಗಳನ್ನೂ ತರಿಸಲಾಗುತ್ತಿದೆ.

ADVERTISEMENT

ತಗ್ಗಿದ ಪಟ್ಟಣ, ನಗರದ ಮೇಲಿನ ಅವಲಂಬನೆ:

ದಿ.ಎಚ್‌.ಎಸ್.ಮಹದೇವಪ್ರಸಾದ್ ಹೆಸರಿನ ಸಭಾಂಗಣವನ್ನು ಅಲ್ಲಿ ನಿರ್ಮಿಸಲಾಗಿದ್ದು, ಸಂಘದ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ವಿವಿಧ ತರಬೇತಿಗೆ ಸಭಾಂಗಣವನ್ನು ಉಚಿತವಾಗಿ ಕೊಡಲಾಗುತ್ತಿದೆ. ರೈತರಿಗೆ ಅಗತ್ಯವಾದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲು ಹಾಗೂ ವಿತರಿಸುವುದಕ್ಕಾಗಿ ಗೋದಾಮನ್ನು ನಿರ್ಮಿಸಲಾಗಿದೆ.

ಇದರೊಂದಿಗೆ, ಈ ಹಳ್ಳಿಯ  ಜನರ ಹಲವು ಕೆಲಸಗಳಿಗಾಗಿ ಬನ್ನೂರು, ತಿ.ನರಸೀಪುರ ಪಟ್ಟಣಕ್ಕೋ ಅಥವಾ ಜಿಲ್ಲಾ ಕೇಂದ್ರವಾದ ಮೈಸೂರಿಗೂ ಅಥವಾ ನೆರೆಯ ಮಂಡ್ಯ ನಗರಕ್ಕೋ ಹೋಗಬೇಕಾದ ಅನಿವಾರ್ಯತೆಯನ್ನು ತಪ್ಪಿಸುವ ಕೆಲಸವನ್ನು ಸಂಘದಿಂದ ಮಾಡಲಾಗಿದೆ. ಏಕೆಂದರೆ, ಬಹಳಷ್ಟು ಅಗತ್ಯ ವಸ್ತುಗಳು ಹಾಗೂ ಸೇವೆ ಊರಲ್ಲೇ ದೊರೆಯುವಂತೆ ಮಾಡಲಾಗಿದೆ.

ಸಂಸ್ಥಾಪಕ ಅಧ್ಯಕ್ಷರಾದ ವೈ.ಎನ್. ಶಂಕರೇಗೌಡ ನೇತೃತ್ವದಲ್ಲಿ ಈ ಸಂಘದಿಂದ ₹ 7 ಕೋಟಿವರೆಗೂ ಸಾಲ ಕೊಡಲಾಗಿದೆ. ಎಟಿಎಂ ಕೂಡ ಇಲ್ಲಿದೆ. 2,200 ಮಂದಿ ಸದಸ್ಯರಿದ್ದಾರೆ.

ಸಂಘದಿಂದ ಮಾದರಿ ಕಾರ್ಯ: ‘ಗ್ರಾಮದಲ್ಲಿ 4,800 ಜನಸಂಖ್ಯೆ ಇದೆ. ಘಟಕದಲ್ಲಿ ₹ 5ಕ್ಕೆ 20 ಲೀಟರ್‌ ಶುದ್ಧ ಕುಡಿಯುವ ನೀರು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ನಿತ್ಯವೂ ಸರಾಸರಿ 600 ಕ್ಯಾನ್‌ನಷ್ಟು ನೀರನ್ನು ಜನರು ಪಡೆಯುತ್ತಿದ್ದಾರೆ. ಬೆಳಿಗ್ಗೆ 6ರಿಂದ 9ರವರೆಗೆ ತೆರೆದಿರುತ್ತದೆ. 16 ವರ್ಷಗಳಿಂದಲೂ ಹತ್ತು ಹಲವು ಮಾದರಿ ಕಾರ್ಯದಲ್ಲಿ ತೊಡಗಿದೆ. ಅಧ್ಯಕ್ಷರು ಊರಿನ ಅಗತ್ಯಗಳಿಗಾಗಿ ಸ್ವಂತ ಜಾಗವನ್ನು ನೀಡಿ ನೆರವಾಗುತ್ತಿದ್ದಾರೆ’ ಎಂದು ಮುಖಂಡ ವೈ.ಕೆ. ರವಿಕುಮಾರ್ ಗ್ರಾಮಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾನ್ಯವಾಗಿ ಸೂಪರ್‌ ಮಾರ್ಕೆಟ್‌ಗಳು ನಗರದಲ್ಲಿ ಇರುತ್ತವೆ. ಆದರೆ, ಇಲ್ಲಿ ಸಂಘದ ಕಾರಣದಿಂದಾಗಿ ನಮ್ಮೂರಿನಲ್ಲೂ ಇದೆ ಎಂಬ ಹೆಮ್ಮೆ ನಮ್ಮದು. ಇಲ್ಲಿ ಎಲ್ಲ ರೀತಿಯ ಆಹಾರ ಪದಾರ್ಥಗಳೂ ಸಿಗುತ್ತವೆ. ಶುದ್ಧ ನೀರಿನ ಘಟಕದ ಸಮರ್ಪಕ ನಿರ್ವಹಣೆಗೂ ಆದ್ಯತೆ ಕೊಡಲಾಗುತ್ತಿದೆ. ಸಂಘದಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ. ಶಂಕರೇಗೌಡ ಅವರಂಥವರು ಪ್ರತಿ ಹಳ್ಳಿಯಲ್ಲೂ ಇದ್ದರೆ ಆ ಊರುಗಳು ಕೂಡ ಮಾದರಿ ಆಗುತ್ತವೆ’ ಎನ್ನುತ್ತಾರೆ ಅವರು.

ಕುವೆಂಪು ಚಿತಾಭಸ್ಮ ಸ್ಮಾರಕ ಭವನ ಯಾಚೇನಹಳ್ಳಿಯ ರಾಮಕೃಷ್ಣ ಸೇವಾ ಕೇಂದ್ರದ ಎದುರು ರಾಜ್ಯ ಸರ್ಕಾರದಿಂದ ‘ವಿಶ್ವಕವಿ ಕುವೆಂಪು ಚಿತಾಭಸ್ಮ ಸ್ಮಾರಕ ಭವನ’ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಸೇವಾ ಕೇಂದ್ರದ ನಾದಾನಂದನಾಥ ಸ್ವಾಮೀಜಿ ಆಶಯದಂತೆ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಕುವೆಂಪು ಚಿಂತನೆ ಪಸರಿಸುವ ಉದ್ದೇಶದಿಂದ ಸಂಶೋಧಕರಿಗೆ ವಸತಿ ವ್ಯವಸ್ಥೆ ಗ್ರಂಥಾಲಯ ಸಭಾಭವನ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಇಲಾಖೆಯು ₹ 1.50 ಕೋಟಿ ಅನುದಾನ ಒದಗಿಸಿದೆ. ಇದಕ್ಕೆ ಬೇಕಾದ ಜಾಗವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಶಂಕರೇಗೌಡ ಉಚಿತವಾಗಿ ಒದಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.