
ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಹನುಮಾನ್ ಚಾಲೀಸಾ ಪಾರಾಯಣ ಕಾರ್ಯಕ್ರಮದ
ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್
ಮೈಸೂರು: ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಶ್ರೀಗಳ ನೇತೃತ್ವದಲ್ಲಿ ನಡೆದ ಹನುಮಾನ್ ಚಾಲೀಸಾ ಪಾರಾಯಣ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ಬೆಳಿಗ್ಗೆ 10.50ಕ್ಕೆ ಪಾರಾಯಣಕ್ಕೆ ಶ್ರೀಗಳು ಚಾಲನೆ ನೀಡಿದರು. ಸಾವಿರಾರು ಮಂದಿ ಎರಡು ಗಂಟೆ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸಿದರು. ಹನುಮನ ಕುರಿತು ತುಳಸೀದಾಸರು ಅವಧಿ ಭಾಷೆಯಲ್ಲಿ ರಚಿಸಿರುವ 40 ಸ್ತೋತ್ರಗಳನ್ನು ಒಟ್ಟು 18 ಬಾರಿ ಹಾಡಲಾಯಿತು.
ಮಧ್ಯದಲ್ಲಿ ಸಚ್ಚಿದಾನಂದ ಶ್ರೀಗಳು ಸುಂದರಕಾಂಡದ ನಿರೂಪಣೆ ಮಾಡಿದರು.
ಭಕ್ತರು ಒಂದು ಕೈಯಲ್ಲಿ ಕೇಸರಿ ಧ್ವಜ ಬೀಸುತ್ತ, ಮತ್ತೊಂದು ಕೈಯಲ್ಲಿ ಶ್ಲೋಕಗಳ ಕಿರು ಹೊತ್ತಿಗೆ ಹಿಡಿದು ಹನುಮನನ್ನು ಸ್ಮರಿಸಿದರು.
ಕೆಲವು ವಿದೇಶಿಯರೂ ಪಾರಾಯಣದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ವೇದಿಕೆಯಲ್ಲಿದ್ದ ಹನುಮಂತನ ಪ್ರತಿಮೆಗೆ ಬೆಳಿಗ್ಗೆ ಅವಧೂತ ದತ್ತ ಪೀಠದ ಕಿರಿಯಶ್ರೀ ದತ್ತ ವಿಜಯಾನಂದ ಸ್ವಾಮೀಜಿ ನೇತೃತ್ವದಲ್ಲಿ ಪವಮಾನ ಹೋಮ ನಡೆಯಿತು.
ಎಲ್ಲ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
‘ಕರ್ನಾಟಕ ಹನುಮಂತನ ನಾಡು. ಹನುಮಾನ್ ಚಾಲೀಸಾ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ಹಾಡಬಹುದಾದ ಸುಲಭ ಹಾಗೂ ಶಕ್ತಿಶಾಲಿ ಸ್ತೋತ್ರ. ಹನುಮಂತನು ರಕ್ಷಕನಾಗಿದ್ದು, ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುತ್ತಾನೆ. ಲೋಕ ಕಲ್ಯಾಣಕ್ಕಾಗಿ ಈ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿದೆ’ ಎಂದು ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಚಲನಚಿತ್ರ ಕಲಾವಿದರಾದ ವಸಿಷ್ಠ ಸಿಂಹ–ಹರಿಪ್ರಿಯಾ ದಂಪತಿ ಮಗುವಿನೊಂದಿಗೆ ಪಾಲ್ಗೊಂಡರು.
ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ಕೆ. ಹರೀಶ್‌ಗೌಡ, ಕೆಪಿಸಿಸಿ ಸದಸ್ಯ ಎಚ್.ವಿ. ರಾಜೀವ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.