ADVERTISEMENT

ದಲೈಲಾಮ ಜನ್ಮದಿನಾಚರಣೆ: ಟಿಬೆಟಿಯನ್‌ ಕಲಾ ಪ್ರಪಂಚ ಅನಾವರಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 2:40 IST
Last Updated 20 ಜುಲೈ 2025, 2:40 IST
ಮೈಸೂರಿನ ಕಲಾಮಂದಿರ ಆವರಣದಲ್ಲಿ ದಲೈಲಾಮ ಅವರ 90ನೇ ಜನ್ಮದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೌದ್ಧ ಸನ್ಯಾಸಿಗಳು ಪ್ರಾರ್ಥಿಸಿದರು     ಪ್ರಜಾವಾಣಿ ಚಿತ್ರ
ಮೈಸೂರಿನ ಕಲಾಮಂದಿರ ಆವರಣದಲ್ಲಿ ದಲೈಲಾಮ ಅವರ 90ನೇ ಜನ್ಮದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೌದ್ಧ ಸನ್ಯಾಸಿಗಳು ಪ್ರಾರ್ಥಿಸಿದರು     ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ಕಲಾಮಂದಿರದ ಆವರಣ ಶನಿವಾರ ಟಿಬೆಟಿಯನ್‌ ಸಂಸ್ಕೃತಿಯಿಂದ ಕಂಗೊಳಿಸಿತು. ತಮ್ಮೂರಿನ ಸಂಸ್ಕೃತಿಯನ್ನು ಟಿಬೆಟಿಯನ್ನರು ಪ್ರಸ್ತುತಪಡಿಸಿ ಗಮನಸೆಳೆದರು.

16ನೇ ದಲೈಲಾಮ ಅವರ ಜನ್ಮದಿನದ ಅಂಗವಾಗಿ ಟಿಬೆಟಿಯನ್‌ ಒಕ್ಕೂಟವು ಶನಿವಾರ ಆಯೋಜಿಸಿದ ‘ಟಿಬೆಟ್‌ ಹಬ್ಬ’ವು ಹೊಸ ಲೋಕವನ್ನು ಸೃಷ್ಟಿಸಿತು. ಭಿನ್ನ ಮುಖಭಾವದ ಜನರ ವೈವಿಧ್ಯಮಯ ಆಚರಣೆ, ಕಲೆ
ಅನಾವರಣಗೊಂಡಿತು. 

ಅವರ ಬಣ್ಣ ಬಣ್ಣದ ಉಡುಪು, ವೈವಿಧ್ಯಮಯ ಟೋಪಿಗಳು ಗಮನಸೆಳೆದವು. ಸಾಂಸ್ಕೃತಿಕ ಪ್ರದರ್ಶನದಲ್ಲಿ ಪಾರಂಪರಿಕ ಸಂಗೀತ ವಾದ್ಯಗಳನ್ನೊಳಗೊಂಡ ಪ್ರದರ್ಶನವು ಪ್ರೇಕ್ಷಕರ ಮನ ಗೆದ್ದಿತು. ಕಲಾವಿದರು ಪ್ರದರ್ಶನದ ಜೊತೆಗೆ ಲಯಬದ್ದವಾಗಿ ಟೆಬೆಟಿಯನ್ ಭಾಷೆಯಲ್ಲಿ ಹಾಡುತ್ತಾ ನೃತ್ಯ ಪ್ರದರ್ಶನ ನೀಡಿದರು. ಜರ್ನಲ್, ಡ್ಯಾಂಗ್ ಚೆನ್, ಗಿಯಾಲಿನ್, ಡಂಕರ್ ಎಂಬ ಟಿಬೆಟಿಯನ್  ವಾದ್ಯ ಪರಿಕರಗಳ ಇಂಪಾದ ಸಂಗೀತಕ್ಕೆ ಜನ ತಲೆದೂಗಿದರು. 

ADVERTISEMENT

ಟಿಬೆಟಿಯನ್  ನಾಗರಿಕತೆಯ ಆರಂಭ ಕಾಲದ ಹಿನ್ನೆಲೆಯುಳ್ಳ ‘ಲೋಕ’ ಎಂಬ ನೃತ್ಯವು ಪ್ರಾರಂಭದಲ್ಲಿ
ಪ್ರದರ್ಶನಗೊಂಡಿತು. 6 ತಿಂಗಳಿಗೊಮ್ಮೆ ವಾರವಿಡೀ ನಡೆಯುವ ಹಬ್ಬದಲ್ಲಿ ಪ್ರದರ್ಶನವಾಗುವ ಪಾರಂಪರಿಕ ನೃತ್ಯ ಪ್ರಕಾರವಾದ ‘ಡ್ರಿಗ್‌ ಪಾ’ವು ನೆರೆದಿದ್ದವರನ್ನು ಆಕರ್ಷಿಸಿತು. ಸಂಗ್ಚೂ ನದಿಯ ಬದಿಯಲ್ಲಿ ವಾಸಿಸುವ ಜನರ ‘ಸಂಗ್ಚು’ ಎಂಬ ನೃತ್ಯದಲ್ಲಿನ ಸಂಗೀತವು ನದಿಯ ನೀರಿನ ಹರಿವಿನಂತೆ ಭಾಸವಾಗುತ್ತಿತ್ತು.

ಬುದ್ಧನನ್ನು ಪ್ರಾರ್ಥಿಸುವ ರೀತಿ, ಟಿಬೆಟಿಯನ್‌ ಚಿತ್ರಕಲೆ, ಮರಳಿನಲ್ಲಿ ಬಿಡಿಸಿದ ರಂಗೋಲಿ, ಮೇಣ ಹಾಗೂ ಡಾಲ್ಡಾ ಬಳಸಿ ತಯಾರಿಸಿದ ಕಲಾಕೃತಿ ಗಮನಸೆಳೆಯಿತು. ಪಾರಂಪರಿಕ ಆಹಾರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ: ಆದಿಚುಂಚನಗಿರಿಯ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಎರಡು ದಿನಗಳ ಹಬ್ಬಕ್ಕೆ ಚಾಲನೆ ನೀಡಿದರು.

ಟಿಬೆಟಿಯನ್ನರ ಮುಖಂಡ ಗಿಶಿ ಮಹಮದುಲ್ಲಾ ಮಾತನಾಡಿ, ‘ಕಷ್ಟ ಕಾಲದಲ್ಲಿ ನೆರವಾದ ಭಾರತಕ್ಕೆ ನಾವು ಋಣಿಯಾಗಿರಬೇಕು. ಶಾಂತಿಯನ್ನು ಕಾಪಾಡುವುದರೊಂದಿಗೆ ಸಂಸ್ಕೃತಿಯನ್ನು ರಕ್ಷಿಸಬೇಕು. ಚೀನಾದ ನಾಯಕರ ಬಾಯಿ ಮಾತ್ರ ಕೆಲಸ ಮಾಡುತ್ತಿದ್ದು, ಕಿವಿ ಕೇಳಿಸುತ್ತಿಲ್ಲ. ಹೀಗಾಗಿ ನಮಗೆ ಈ ಪರಿಸ್ಥಿತಿ ಬಂದಿದೆ’ ಎಂದರು.

ಮೈಸೂರಿನ ಕಲಾಮಂದಿರ ಆವರಣದಲ್ಲಿ ದಲೈಲಾಮ ಅವರ 90ನೇ ಜನ್ಮದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಅದಿಚುಂಚನಗಿರಿ ಮೈಸೂರು ಶಾಖಾ ಮಠದ‌ ಸೋಮೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.