
ಪ್ರಾತಿನಿಧಿಕ ಚಿತ್ರ
ಹುಣಸೂರು: ಹನಗೋಡು ಹೋಬಳಿ ಭಾಗದಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಹೆಮ್ಮಿಗೆ ಗ್ರಾಮದಲ್ಲಿ ಹಗಲು ವೇಳೆಯೇ ಹಸು ಮೇಲೆ ಹುಲಿ ದಾಳಿ ಮಾಡಿ ಕೊಂದುಹಾಕಿದೆ.
ಗ್ರಾಮದ ನಿವಾಸಿ ಚೆಲುವೇಗೌಡ ಅವರಿಗೆ ಸೇರಿದ ಹಸು ಹೊಲದಲ್ಲಿ ಮೇಯುತ್ತಿದ್ದಾಗ ಹುಲಿ ದಾಳಿ ನಡೆಸಿ ತಿಂದು ಹೋಗಿದೆ. ಈ ಸಂಬಂಧ ವನ್ಯಜೀವಿ ವಿಭಾಗದ ವಲಯ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಭೇಟಿ ನೀಡಿದರು.
ಕೂಂಬಿಂಗ್: ಹುಲಿ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೂಂಬಿಂಗ್ ನಡೆಸಿ ಅರಣ್ಯದಿಂದ ಹೊರ ಬಂದಿರುವ ಹುಲಿಯನ್ನು ಸೆರೆಹಿಡಿಯಬೇಕು’ ಎಂದು ಹೆಮ್ಮಿಗೆ ಪಂಚಾಯಿತಿ ಅಧ್ಯಕ್ಷ ಪಾಪಣ್ಣ ಒತ್ತಾಯಿಸಿದ್ದಾರೆ.
ಚಿರತೆ ಸೆರೆ: ಹನಗೋಡು ಹೋಬಳಿ ವಡ್ಡಂಬಾಳು ಗ್ರಾಮದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಬೋನು ಇಟ್ಟು ಸೆರೆ ಹಿಡಿದಿದೆ.
‘ಗ್ರಾಮದ ಸಿದ್ದರಾಜು ಅವರ ಮನೆ ಆಸುಪಾಸಿನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈ ಕುರಿತು ಸಾರ್ವಜನಿಕರು ಇಲಾಖೆಗೆ ನೀಡಿದ ದೂರಿನ ಮೇಲೆ ಬೋನು ಇಡಲಾಗಿತ್ತು. ಗುರುವಾರ ಎರಡು ವರ್ಷದ ಹೆಣ್ಣು ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ದೂರಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.