ADVERTISEMENT

ಹುಲಿ ದಾಳಿ | ‘ಬದುಕು ಕಳೆದುಕೊಂಡವರೆಂದು’ ಪರಿಗಣಿಸಿ ಪೂರ್ಣ ಪರಿಹಾರ: ಸಿಎಂ ತಾಕೀತು

'ರೈತನ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ'

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 9:23 IST
Last Updated 17 ಅಕ್ಟೋಬರ್ 2025, 9:23 IST
<div class="paragraphs"><p>ರೈತ ಮಹದೇವ ಅವರ ಮೇಲೆ ದಾಳಿ ಮಾಡಿದ ಹುಲಿ ಹಾಗೂ ದಾಳಿಗೆ ಒಳಗಾದ  ರೈತನ ಕುಟುಂಬ ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವ ಎಚ್‌.ಸಿ. ಮಹದೇವಪ್ಪ</p></div>

ರೈತ ಮಹದೇವ ಅವರ ಮೇಲೆ ದಾಳಿ ಮಾಡಿದ ಹುಲಿ ಹಾಗೂ ದಾಳಿಗೆ ಒಳಗಾದ ರೈತನ ಕುಟುಂಬ ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವ ಎಚ್‌.ಸಿ. ಮಹದೇವಪ್ಪ

   

ಮೈಸೂರು: ‘ಜಿಲ್ಲೆಯ ಸರಗೂರು ತಾಲ್ಲೂಕು ಬಡಗಲಪುರದಲ್ಲಿ ಹುಲಿ ದಾಳಿಗೆ ಒಳಗಾದ ರೈತ ಮಹದೇವ (ಮಾದೇಗೌಡ) ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಸಂಪೂರ್ಣ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹದೇವ ಅವರ ಕುಟುಂಬದವರೊಂದಿಗೆ ಶುಕ್ರವಾರ ಚರ್ಚಿಸಿದ ಬಳಿಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

‘ಆ ವ್ಯಕ್ತಿಗೆ ಕಣ್ಣುಗಳ ದೃಷ್ಟಿ ಮತ್ತೆ ಬರುವ ಸಾಧ್ಯತೆ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಹೀಗಾಗಿ, ಪರಿಹಾರವನ್ನು ಗಾಯಗೊಂಡವರ ಲೆಕ್ಕದಲ್ಲಿ ಕೊಡಬಾರದು. ಬದುಕು ಕಳೆದುಕೊಂಡ ಹಾಗೂ ಕುಟುಂಬದ ಆಸರೆ ಕಳೆದುಕೊಂಡವರ ಲೆಕ್ಕದಲ್ಲಿ ಸಂಪೂರ್ಣವಾಗಿ ಪರಿಹಾರ ಒದಗಿಸಬೇಕು. ಗಂಭೀರವಾಗಿ ಗಾಯಗೊಂಡಿರುವುದರಿಂದ ಮಾನವೀಯತೆಯಿಂದ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಸೂಚಿಸಿದರು.

ಮಹದೇವ ಅವರು ಗುರುವಾರ ಜಮೀನಿನಲ್ಲಿ ಹತ್ತಿ ಬಿಡಿಸುವಾಗ ಹುಲಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಹುಲಿ ಕಾಣಿಸಿಕೊಂಡು ಜನರಲ್ಲಿ ಅತಂಕ ಮೂಡಿಸಿತ್ತು. ಆ ಹುಲಿ ಸೆರೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಇದನ್ನು ಆಧರಿಸಿ ‘ಭೀಮ’ ಮೊದಲಾದ ಕಾಡಾನೆಗಳನ್ನು ಬಳಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ, ಹುಲಿಯು ಜಮೀನಿನತ್ತ ನುಗ್ಗಿ ಕೆಲಸ ಮಾಡುತ್ತಿದ್ದ ಮಹದೇವ ಅವರ ಮೇಲೆ ದಾಳಿ ಮಾಡಿತ್ತು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.