
ಮೈಸೂರು: ಜಿಲ್ಲೆಯ ನುಗು ವನ್ಯಜೀವಿಧಾಮ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ತಡೆಯಲು ಅರಣ್ಯ ಇಲಾಖೆಯು ರೈತರಿಗೆ 10ಸಾವಿರ ‘ಮುಖವಾಡ’ಗಳನ್ನು ವಿತರಿಸಿದೆ.
ಕಾಡಂಚಿನ ಜಮೀನುಗಳಲ್ಲಿ ರೈತರ ಮೇಲೆ ಹುಲಿ ದಾಳಿ ಹಿನ್ನಲೆಯಲ್ಲಿ ರೈತರ ರಕ್ಷಿಸಲು ಈ ಕ್ರಮ ವಹಿಸಿದ್ದು, ‘ಮುಖವಾಡವನ್ನು ಕತ್ತು ಹಾಗೂ ತಲೆ ಹಿಂಭಾಗ ಸೇರಿದಂತೆ ಧರಿಸಿದರೆ, ಹುಲಿಗಳು ದಾಳಿ ನಡೆಸಲು ಹಿಂಜರಿಯುತ್ತವೆ’ ಎಂಬ ತಜ್ಞರ ಸಲಹೆಯನ್ನು ಪರಿಗಣಿಸಿದೆ.
ಅ.16ರಿಂದ ನ.7ರವರೆಗೆ ನಾಲ್ವರು ರೈತರ ಮೇಲೆ ಹುಲಿಗಳು ದಾಳಿ ಮಾಡಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದರು. ಮುಖವಾಡ ವಿತರಣೆ ಕ್ರಮದಿಂದ, ಮಾನವ– ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಬರಲಿದೆ ಎಂಬುದು ಇಲಾಖೆಯ ನಂಬಿಕೆಯಾಗಿದೆ.
20 ಹುಲಿ ಸಂಚಾರ: ‘ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವಿರುವ ಎಚ್.ಡಿ.ಕೋಟೆ, ಸರಗೂರು ಹಾಗೂ ನಂಜನಗೂಡು ತಾಲ್ಲೂಕುಗಳ ಕಾಡಂಚಿನಲ್ಲಿ 20 ಹುಲಿಗಳ ಓಡಾಟವನ್ನು ಗುರುತಿಸಲಾಗಿದೆ. ಹುಲಿಗಳ ಸಂತಾನೋತ್ಪತ್ತಿ ಸಮಯವಾಗಿರುವುದರಿಂದ ಸಂಗಾತಿಗಳ ಹುಡುಕಾಟದಲ್ಲಿವೆ. ಮರಿ ಹಾಕಿರುವ ತಾಯಿ ಹುಲಿಗಳೂ ಇವೆ. ಹೀಗಾಗಿ, ಎದುರು ಸಿಗುವ ರೈತರ ಮೇಲೆ ದಾಳಿ ಮಾಡುತ್ತಿವೆ’ ಎಂದು ಮೈಸೂರು ವಿಭಾಗದ ಡಿಸಿಎಫ್ (ಪ್ರಾದೇಶಿಕ) ಕೆ.ಪರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಫಾರಿ ರದ್ದಾಗಿರುವುದರಿಂದ ಅಲ್ಲಿನ ಸಿಬ್ಬಂದಿಯನ್ನು ಮುಖವಾಡ ವಿತರಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಹುಲಿಯು ಕತ್ತನ್ನು ಹಿಡಿಯುವುದರಿಂದ ತಲೆ ಹಿಂಭಾಗಕ್ಕೆ ಮುಖವಾಡ ಧರಿಸಿದರೆ ದಾಳಿ ಮಾಡಲು ಮುಂದಾಗದು. ಪಶ್ಚಿಮ ಬಂಗಾಳದ ಸುಂದರ್‌ಬನ ರಾಷ್ಟ್ರೀಯ ಉದ್ಯಾನದಲ್ಲಿ ನಡೆಸಿದ್ದ ಈ ಪ್ರಯೋಗವು ಯಶ ಕಂಡಿತ್ತು’ ಎಂದು ವಿವರಿಸಿದರು.
‘ಕಳೆದ ಒಂದು ತಿಂಗಳಲ್ಲಿ 4 ಹುಲಿ ಮರಿಗಳು ಸೇರಿದಂತೆ 6 ಹುಲಿಗಳನ್ನು ಸೆರೆ ಹಿಡಿಯಲಾಗಿದ್ದು, ಅದರಲ್ಲಿ ಗಂಡು ಹುಲಿಯು ಇಬ್ಬರು ರೈತರನ್ನು ಕೊಂದಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.