
ಪ್ರಜಾವಾಣಿ ವಾರ್ತೆ
ಎಚ್.ಡಿ.ಕೋಟೆ: ತಾಲ್ಲೂಕಿನ ದಮ್ಮನಕಟ್ಟೆಯ ಬಳಿ ಕಬಿನಿ ಹಿನ್ನೀರಿಗೆ ಹೊಂದಿಕೊಂಡಿರುವ ಹೊಸಹೊಳಲು ಗ್ರಾಮದ ಸಮೀಪ ಹುಲಿ ಕಾಣಿಸಿಕೊಂಡಿದ್ದು ಹಲವು ಜಾನುವಾರುಗಳನ್ನು ಬೇಟೆಯಾಡಿದೆ. ಹೊಸಹೊಳಲು ಗ್ರಾಮದ ಬಸವ ಮತ್ತು ಇತರೆ ಜಾನುವಾರುಗಳನ್ನು ಬೇಟೆಯಾಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಕಳೆದ ಹಲವು ದಿನಗಳಿಂದ ಹುಲಿಯ ಉಪಟಳ ಹೆಚ್ಚಾಗಿರುವುದರಿಂದ ಗ್ರಾಮದ ಕಾಡಂಚಿನ ಭಾಗದ ಜನರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗುತ್ತಿದೆ, ರಾತ್ರಿಯ ವೇಳೆ ಓಡಾಡದಂತೆ ತಿಳಿಸಲಾಗುತ್ತಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಸಿಎಫ್ ಮಧು ಹಾಗೂ ಆರ್‌ಎಫ್‌ಒ ಸಿದ್ದರಾಜು ಮತ್ತು ಸಿಬ್ಬಂದಿಗಳೊಂದಿಗೆ ಶನಿವಾರ ಕಾರ್ಯಾಚರಣೆ ನಡೆಸಿ ಹುಲಿಯನ್ನು ಕಾಡಿಗೆ ಓಡಿಸಲು ಯಶಸ್ವಿಯಾದರು. ಹುಲಿ ಸೆರೆಗೆ ಬೋನನ್ನು ಸಹ ಸ್ಥಳದಲ್ಲಿ ಇರಿಸಲಾಗಿದೆ.