ADVERTISEMENT

ತಂಬಾಕು ದರ ಕುಸಿತ | ರೈತರ ಪ್ರತಿಭಟನೆ: ನಿಖಿಲ್‌ ಕುಮಾರಸ್ವಾಮಿ, ‌ಹರೀಶ್ ಗೌಡ ಸಾಥ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:20 IST
Last Updated 19 ಫೆಬ್ರುವರಿ 2026, 4:20 IST
ತಂಬಾಕು ದರ ಕುಸಿತ ಮತ್ತು ಅಧಿಕಾರಿ ಅಸಭ್ಯ ವರ್ತನೆಯನ್ನು ಖಂಡಿಸಿ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬುಧವಾರ ದೇವರಾಜ ಅರಸು ತಂಬಾಕು ಹರಾಜು ಮಂಡಳಿ ಎದುರು ರೈತರು ಪ್ರತಿಭಟನೆ ನಡೆಸಿದರು
ತಂಬಾಕು ದರ ಕುಸಿತ ಮತ್ತು ಅಧಿಕಾರಿ ಅಸಭ್ಯ ವರ್ತನೆಯನ್ನು ಖಂಡಿಸಿ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬುಧವಾರ ದೇವರಾಜ ಅರಸು ತಂಬಾಕು ಹರಾಜು ಮಂಡಳಿ ಎದುರು ರೈತರು ಪ್ರತಿಭಟನೆ ನಡೆಸಿದರು   

ಹುಣಸೂರು: ತಂಬಾಕಿಗೆ ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತ ಕಂಡ ಹಿನ್ನೆಲೆಯಲ್ಲಿ ರೈತರು ಹರಾಜು ಮಾರುಕಟ್ಟೆ ಬಹಿಷ್ಕರಿಸಿ ಹುಣಸೂರು– ಕೆ.ಆರ್.ನಗರ ರಸ್ತೆ ಬಂದ್‌ ಮಾಡಿ ಬುಧವಾರ ಪ್ರತಿಭಟಿಸಿದರು.

‘ವಾಣಿಜ್ಯ ತೆರಿಗೆ ಸಮರದ ಬಳಿಕ ಆರಂಭಗೊಂಡ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪ್ರಥಮ ದರ್ಜೆ ತಂಬಾಕಿಗೆ ಬುಧವಾರ ಒಂದು ಕೆ.ಜಿ. ತಂಬಾಕಿಗೆ ₹50 ಕುಸಿತ ಕಂಡಿದ್ದು, ಈ ದರಕ್ಕೆ ತಂಬಾಕು ಮಾರಾಟ ಮಾಡಿ ಸಾಲ ಮರುಪಾವತಿಸುವುದಾದರೂ ಹೇಗೆ, ನೋವಿನಿಂದಲೇ ತಂಬಾಕು ಮಾರಾಟ ಮಾಡಿದ್ದೇವೆ’ ಎಂದು ರೈತರು ಅಳಲು ತೋಡಿಕೊಂಡರು.

‘ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆ ಆರಂಭದಲ್ಲಿ ಪ್ರಥಮ ದರ್ಜೆ ತಂಬಾಕಿಗೆ ಪ್ರತಿ ಕೆ.ಜಿಗೆ ₹ 300ರಿಂದ ₹320ಕ್ಕೆ ಮಾರಾಟವಾಗಿತ್ತು, ಬಳಿಕ ₹280ರಿಂದ ₹260ಕ್ಕೆ ಕುಸಿತ ಕಂಡಿದ್ದು, ಎರಡು ಮತ್ತು ಮೂರನೇ ದರ್ಜೆ ತಂಬಾಕು ₹150ರಿಂದ ₹200ಕ್ಕೆ ಕುಸಿತ ಕಂಡಿದೆ. ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ತಂಬಾಕು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೆಳೆಗಾರರು ಆಕ್ರೋಶ ಹೊರ ಹಾಕಿದರು.

ADVERTISEMENT

ಕ್ಷೇತ್ರದ ಶಾಸಕ ಜಿ.ಡಿ.ಹರೀಶ್‌ ಗೌಡ ಮತ್ತು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರ್‌ ಸ್ವಾಮಿ ಸ್ಥಳಕ್ಕೆ ಬಂದು ರೈತರೊಂದಿಗೆ ಮಾತನಾಡಿ ಸಮಾಧಾನಪಡಿಸುವ ಪ್ರಯತ್ನ ನಡೆಯಿತು.

ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ‘ವಾಣಿಜ್ಯ ಬೆಳೆ ತಂಬಾಕು ಹಳೆ ಮೈಸೂರು ಭಾಗದ ಜೀವನಾಡಿಯಾಗಿದ್ದು, ಆರ್ಥಿಕ ಬೆಳೆಗೆ ವೈಜ್ಞಾನಿಕ ದರ ನೀಡದೇ ರೈತರು ಹತಾಶೆಗೊಂಡು ಪ್ರತಿಭಟಿಸುವ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಮಾರುಕಟ್ಟೆ ಅಧಿಕಾರಿಯೊಬ್ಬರು ತಂಬಾಕು ಬೆಳೆಗೆ ಸೂಕ್ತ ದರ ಸಿಗದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಿ’ ಎಂದು ಅಸಭ್ಯವಾಗಿ ಮಾತನಾಡಿ ರೈತನ ಸ್ವಾಭಿಮಾನಕ್ಕೆ ಕೊಳ್ಳಿ ಇಟ್ಟಿರುವುದು ತಲೆ ತಗ್ಗಿಸುವ ಸಂಗತಿ’ ಎಂದು ವಿಷಾದಿಸಿದರು.

ಅಮಾನತುಗೊಳಿಸಲು ಆಗ್ರಹ

ರೈತರ ಬಗ್ಗೆ ಕೀಳಾಗಿ ವರ್ತಿಸಿ ವಿಷ ಸೇವಿಸಿ’ ಎಂದು ಸಲಹೆ ನೀಡಿದ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆ ಪ್ಲಾಟ್‌ ಫಾರಂ 6/4 ಅಧಿಕಾರಿ ಕಿರಣ್‌ ಅವರನ್ನು ಅಧಿಕಾರಿಯನ್ನು ಮಂಡಳಿ ಅಧಿಕಾರಿಗಳು ಸೇವೆಯಿಂದ ತಕ್ಷಣದಿಂದಲೇ ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿ ನಿಖಿಲ್ ಪಟ್ಟು ಹಿಡಿದರು.

ದಿಕ್ಕಾಪಾಲು:

‘ಮಾರುಕಟ್ಟೆಗೆ ತಂದಿದ್ದ ತಂಬಾಕು ಹರಾಜಾಗದ ಕಾರಣ ಎರಡು ಸಾವಿರಕ್ಕೂ ಹೆಚ್ಚು ಬೇಲ್ ತಂಬಾಕು ಮಾರುಕಟ್ಟೆ ಆವರಣದಲ್ಲೇ ಉಳಿದಿತ್ತು. ಈ ನಡುವೆ ಫೆ. 19ರಿಂದ ಮಾರುಕಟ್ಟೆ ಆರಂಭವಾಗುವ ಅನುಮಾನವಿದ್ದು, ರೈತರು ಯಥಾಸ್ಥಿತಿಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಿದ್ಧ ಎಂದು ಮನವಿ ಮಾಡಿದರೆ ಮಾರುಕಟ್ಟೆ ಆರಂಭಿಸುತ್ತೇವೆ’ ಎಂದು ತಂಬಾಕು ಹರಾಜು ಮಾರುಕಟ್ಟೆ ಮೈಸೂರು ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಲೆ ಸಿಗದಿದ್ದರಿಂದ ರೈತರು ಕುಪಿತಗೊಂಡ ರೈತರು ಮಂಡಳಿಯ ಕಿಟಿಕಿ ಗಾಜುಗಳಿಗೆ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರ ಹಾಕಿದರು.

ಪ್ರತಿಭಟನಾ ಸ್ಥಳದಲ್ಲಿ ಮಾಜಿ ಶಾಸಕ ಅಶ್ವಿನ್‌ ಕುಮಾರ್‌, ಪಿರಿಯಾಪಟ್ಟಣದ ಮಾಜಿ ಶಾಸಕ ಮಹದೇವ್‌, ಹರವೆ ಶ್ರೀಧರ್‌, ತಟ್ಟೆಕೆರೆ ಶ್ರೀನಿವಾಸ್‌, ತಂಬಾಕು ಹರಾಜು ಮಾರುಕಟ್ಟೆ ಅಧಿಕಾರಿಗಳಾದ ಗೋಪಾಲ್‌, ಸಿದ್ದರಾಜು, ಮೀನಾ ತಂಬಾಕು ಬೆಳೆಗಾರರಿದ್ದರು. ಇದ್ದರು.

ತಂಬಾಕು ದರ ಕುಸಿತ ಮತ್ತು ಅಧಿಕಾರಿ ಅಸಭ್ಯ ವರ್ತನೆಯನ್ನು ಖಂಡಿಸಿ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮತ್ತು ಶಾಸಕ ಜಿ.ಡಿ.ಹರೀಶ್‌ ಗೌಡ ಮಾತನಾಡಿದರು
ಅಧಿಕಾರಿ ವಿರುದ್ಧ ತನಿಖೆ
ತಂಬಾಕಿಗೆ ದರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅಧಿಕಾರಿ ವಿರುದ್ಧ ಬೆಳೆಗಾರರು ಅಸಭ್ಯವಾಗಿ ನಡೆದುಕೊಳ್ಳುವುದು ಸರಿಯಲ್ಲ ಅಧಿಕಾರಿ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ರೈತರ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ. ಅಧಿಕಾರಿ ವಿರುದ್ಧ ಮಂಡಳಿ ಆಂತರಿಕ ತನಿಖೆ ನಡೆಸುತ್ತಿದ್ದು ಸತ್ಯ ಕಂಡುಬಂದಲ್ಲಿ ಹರಾಜು ಮಂಡಳಿ ಕ್ರಮಕೈಗೊಳ್ಳಲಿದೆ’ ತಂಬಾಕು ಹರಾಜು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ್‌ ತಿಳಿಸಿದರು.

ಎಚ್.ಡಿ.ಕೆ ಜೊತೆ ಚರ್ಚೆ

ಪ್ರತಿಭಟನಾ ಸ್ಥಳದಿಂದಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮೊಬೈಲ್ ಫೋನ್‌ ಮೂಲಕ ತಂಬಾಕು ಬೆಳೆಗಾರರ ದರ ಸಮರ ಕುರಿತು ಚರ್ಚಿಸಿ ಸ್ಥಳೀಯ ಪರಿಸ್ಥಿತಿಯನ್ನು ನಿಖಿಲ್ ವಿವರಿಸಿದರು. ‘ಕಳೆದ ಸಾಲಿನಲ್ಲಿ ದರ ಕುಸಿತ ಎದುರಾದಾಗ ಶಾಸಕ ಜಿ.ಡಿ.ಹರೀಶ್‌ ಗೌಡ ನೇತೃತ್ವದಲ್ಲಿ ರೈತರ ನಿಯೋಗವನ್ನು ಕರೆದೋಯ್ದು ವಾಣಿಜ್ಯ ಸಚಿವರನ್ನು ಭೇಟಿ ಮಾಡಿಸಿ ತಂಬಾಕು ಬೆಳೆಗಾರರ ಸಮಸ್ಯೆ ಚರ್ಚಿಸಿದ್ದೆ. ಈ ಬಾರಿಯೂ ರೈತರು ಅದೇ ಪರಿಸ್ಥಿತಿ ಎದುರಾಗಿದ್ದು  ಮುಂದಿನ ಎರಡು ದಿನಗಳಲ್ಲಿ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ವೈಜ್ಞಾನಿಕ ದರ ಸಿಗುವಂತೆ ಕ್ರಮವಹಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.