ತಿ.ನರಸೀಪುರ: ಇಲ್ಲಿನ ತ್ರಿವೇಣಿ ಸಂಗಮದಲ್ಲಿ 13ನೇ ಕುಂಭಮೇಳ ನಡೆಯುತ್ತಿದ್ದು, ಎಲ್ಲ ಸಿದ್ಧತೆಗಳೂ ಅಂತಿಮಗೊಂಡಿವೆ. ಸಂಭ್ರಮದ ಕಳೆ ಪಟ್ಟಣದಲ್ಲಿ ಮನೆ ಮಾಡಿದೆ.
ಪೊಲೀಸರು, ಅಧಿಕಾರಿಗಳು, ಸ್ವಚ್ಛತಾ ಸಿಬ್ಬಂದಿ, ಈಜುಗಾರರು ಸೇರಿದಂತೆ ತಂಡಗಳನ್ನು ಭಾನುವಾರವೇ ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಸಿದ್ಧತೆ ಹಾಗೂ ಭದ್ರತೆಯನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಸೌಕರ್ಯ ಅಂತಿಮ: ಮಾಘ ಮಾಸದ ಮಹೋದಯ ಪುಣ್ಯ ಸ್ನಾನದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗುವ ನಿರೀಕ್ಷೆ ಇರುವುದರಿಂದ ಅದಕ್ಕೆ ಪೂರಕವಾಗಿ ಮೂಲಸೌಕರ್ಯ ಕಲ್ಪಿಸಲಾಗಿದೆ.
ಕುಡಿಯುವ ನೀರು, ಸಂಗಮದ ಮೂರು ದಿಕ್ಕುಗಳ ನದಿ ತಟಗಳ ಸಮೀಪ ಶೌಚಾಲಯ, ಮಹಿಳೆಯರಿಗೆ ಮತ್ತು ಪುರುಷರಿಗೆ ಉಡುಪು ಬದಲಿಸಲು ಪ್ರತ್ಯೇಕ ತಾತ್ಕಾಲಿಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಕೇಂದ್ರಗಳನ್ನು ಮೂರು ಕಡೆ ಸ್ಥಾಪಿಸಿ, ಸಿಬ್ಬಂದಿ ನಿಯೋಜಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮ: ಸೋಮವಾರ ಬೆಳಿಗ್ಗೆ 6ಕ್ಕೆ ಅಗಸ್ತೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ರಾಷ್ಟ್ರಾಶೀರ್ವಾದ ನಡೆಯಲಿದೆ. ಸಂಜೆ 4ಕ್ಕೆ ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತು ಹೋಮ ನಡೆಯಲಿವೆ.
ದೋಣಿ ವ್ಯವಸ್ಥೆ: ಸ್ಥಳೀಯ ತೆಪ್ಪಗಳು ಮಾತ್ರವಲ್ಲದೆ ಹೆಚ್ಚುವರಿಯಾಗಿ 6 ಯಾಂತ್ರಿಕ ದೋಣಿಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಾಮೀಜಿಗಳು, ಗಣ್ಯರು ನದಿ ಮಧ್ಯಕ್ಕೆ ತೆರಳಬಹುದಾಗಿದೆ.
ಯಾಗ ಶಾಲೆ: ನದಿಯಲ್ಲಿ ನೀರು ಹೆಚ್ಚಿರುವುದರಿಂದ ಮರಳಿನ ರಾಶಿ ಇಲ್ಲದ ಕಾರಣ, ಈ ಬಾರಿ ಧಾರ್ಮಿಕ ಪೂಜಾ ಕೈಂಕರ್ಯಗಳು, ಹೋಮ ಹವನವನ್ನು ನದಿಯ ದಂಡೆಯ ಸೋಸಲೆ ಮಠದ ಮುಂಭಾಗದಲ್ಲಿ ನಡೆಸಲು ಯಾಗ ಶಾಲೆ ನಿರ್ಮಿಸಲಾಗಿದೆ.
ತಿರುಮಕೂಡಲು ಸಂಪರ್ಕಿಸುವ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ಬಿಂದಿಗೆ ಫ್ಯಾಕ್ಟರಿ ಬಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬಸ್ ಉಚಿತ ವ್ಯವಸ್ಥೆ: ಭಕ್ತರು ಸಂಗಮಕ್ಕೆ ಬರಲು ಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ತಿರುಮಕೂಡಲಿಗೆ ಬರಲು ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಅಗ್ನಿಶಾಮಕ ದಳದ ಕೇಂದ್ರಗಳು, ಸಿಬ್ಬಂದಿ ನಿಯೋಜನೆ, ಸ್ವಚ್ಛತೆಗೆ ಹೆಚ್ಚುವರಿ ತಲಾ 60 ಜನರಂತೆ ಮೂರು ಕಡೆಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪೊಲೀಸ್ ಬಂದೋಬಸ್ತ್
ಕುಂಭಮೇಳಕ್ಕೆ ಹೆಚ್ಚು ಜನರು ಬರುವುದರಿಂದ ಪ್ರತಿ ಹಂತದಲ್ಲಿ ಸುಗಮ ಸಂಚಾರಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಧಾರ್ಮಿಕ ಸಭೆ ನಡೆಯುವ ವೇದಿಕೆ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭದ್ರತೆಗೆ 4 ಎಡಿಎಸ್‌ಪಿ 10 ಡಿಎಸ್‌ಪಿ 25 ಇನ್‌ಸ್ಪೆಕ್ಟರ್‌ಗಳು 85 ಪಿಎಸ್‌ಐ 85 ಎಎಸ್‌ಐ 650 ಪೊಲೀಸರು ಇದ್ದು ಇವರೊಂದಿಗೆ 4 ಕೆಎಸ್‌ಆರ್‌ಪಿ 6 ಡಿಎಆರ್ 300 ಹೋಮ್‌ಗಾರ್ಡ್ ತಂಡಗಳನ್ನು ನಿಯೋಜಿಸಲಾಗಿದೆ.
‘ಸ್ನಾನ ಮಾಡುವಾಗ ಎಚ್ಚರ’
‘ನದಿಯಲ್ಲಿ ಅಲ್ಲಲ್ಲಿ ಆಳ ಇರುವುದರಿಂದ ನಿಗದಿ ಪಡೆಸಿದ ಜಾಗದೊಳಗೆ ಸಾರ್ವಜನಿಕರು ಸ್ನಾನ ಮಾಡಬೇಕು. ಎಚ್ಚರಿಕೆ ವಹಿಸಬೇಕು’ ಎಂದು ತಹಶೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಮನವಿ ಮಾಡಿದರು. ‘ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಫೆ.9ರಿಂದ 13ರವರೆಗೆ ಪಟ್ಟಣದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ’ ಎಂದರು.
ಜಿಲ್ಲಾಧಿಕಾರಿ ಪರಿಶೀಲನೆ
ತ್ರಿವೇಣಿ ಸಂಗಮಕ್ಕೆ ಭಾನುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸಿದ್ಧತೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿ ‘ಸುಗಮ ಸಂಚಾರಕ್ಕೆ ವ್ಯವಸ್ಥೆ ಶೌಚಾಲಯ ಕುಡಿಯುವ ನೀರು ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸಲಾಗಿದೆ. ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡಲಿದ್ದು ಹೆಚ್ಚುವರಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛತೆಗಾಗಿ 180 ಮಂದಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದರು. ‘ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಠಮಾನ್ಯಗಳು ದಾನಿಗಳು ಹಾಗೂ ಸಂಘಟನೆಗಳು ಮಾಡಿಕೊಳ್ಳುತ್ತಿವೆ. ಪಟ್ಟಣದ ಶಾಲಾ ಕಾಲೇಜುಗಳಿಗೆ ಬುಧವಾರದಂದು ರಜೆ ನೀಡಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.