ADVERTISEMENT

ಮೈಸೂರು ವಿ.ವಿಯಲ್ಲಿ ಆರ್ಥಿಕ ಮುಗ್ಗಟ್ಟು: ಕ್ರೀಡಾಪಟುಗಳ ಊಟೋಪಚಾರಕ್ಕೂ ಕತ್ತರಿ!

ಮೈಸೂರು ವಿ.ವಿಯಲ್ಲಿ ಆರ್ಥಿಕ ಮುಗ್ಗಟ್ಟು; ಕ್ರೀಡಾಕೂಟಗಳಿಗೂ ತಟ್ಟಿದ ಬಿಸಿ

ಆರ್.ಜಿತೇಂದ್ರ
Published 11 ನವೆಂಬರ್ 2025, 2:48 IST
Last Updated 11 ನವೆಂಬರ್ 2025, 2:48 IST
ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು (ಪ್ರಜಾವಾಣಿ ಸಂಗ್ರಹ ಚಿತ್ರ)
ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು (ಪ್ರಜಾವಾಣಿ ಸಂಗ್ರಹ ಚಿತ್ರ)   

ಮೈಸೂರು: ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕೂಟವು ಮಂಗಳವಾರ ಆರಂಭ ಆಗಲಿದ್ದು, 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಓರೆಗೆ ಹಚ್ಚಲು ಸಜ್ಜಾಗಿದ್ದಾರೆ. ಈ ನಡುವೆ, ಹಣಕಾಸಿನ ಮುಗ್ಗಟ್ಟಿನ ಕಾರಣಕ್ಕೆ ಕ್ರೀಡಾಪಟುಗಳ ಊಟೋಪಚಾರಕ್ಕೂ ಕತ್ತರಿ ಹಾಕಿರುವುದಕ್ಕೆ ಕ್ರೀಡಾಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಓವೆಲ್ಸ್ ಮೈದಾನದಲ್ಲಿ ಮೂರು ದಿನಗಳು ನಡೆಯಲಿರುವ ಕ್ರೀಡಾಕೂಟಕ್ಕೆ ಸಿಬ್ಬಂದಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗುವುದು. ಕ್ರೀಡಾಪಟುಗಳಿಗೆ ಉಪಾಹಾರ–ಊಟದ ವ್ಯವಸ್ಥೆ ಇಲ್ಲ’ ಎಂದು ವಿಶ್ವವಿದ್ಯಾಲಯದಿಂದ ಎಲ್ಲ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಸಂದೇಶ ರವಾನೆ ಆಗಿದೆ.

ಪ್ರತಿ ವರ್ಷ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆಯ ಜೊತೆಗೆ ಊಟ–ತಿಂಡಿಯ ವ್ಯವಸ್ಥೆಯನ್ನೂ ವಿಶ್ವವಿದ್ಯಾಲಯ ಈವರೆಗೆ ಮಾಡುತ್ತ ಬಂದಿತ್ತು. ಇದೇ ಮೊದಲ ಬಾರಿಗೆ ಈ ಸೌಲಭ್ಯಕ್ಕೆ ಕತ್ತರಿ ಹಾಕಲಾಗಿದೆ.

ADVERTISEMENT

‘ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಕ್ರೀಡಾ ಶುಲ್ಕ, ವಿವಿಧ ಕ್ರೀಡಾಂಗಣಗಳ ಬಾಡಿಗೆ ಸೇರಿದಂತೆ ಮೈಸೂರು ವಿ.ವಿ.ಗೆ ಕ್ರೀಡಾ ಮೂಲದಿಂದಲೇ ವಾರ್ಷಿಕ ಸುಮಾರು ₹2 ಕೋಟಿಯಷ್ಟು ಹಣ ಸಂಗ್ರಹವಾಗುತ್ತಿದೆ. ಈ ಹಣವನ್ನು ಕ್ರೀಡಾಪಟುಗಳಿಗೆ ಬಳಸದೇ ಇನ್ನಿತರ ಉದ್ದೇಶಗಳಿಗೆ ವ್ಯಯಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಲಾಗುತ್ತಿದೆ’ ಎಂದು ಕಾಲೇಜೊಂದರ ದೈಹಿಕ ಶಿಕ್ಷಣ ನಿರ್ದೇಶಕರು ಬೇಸರ ವ್ಯಕ್ತಪಡಿಸಿದರು.

‘ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗಗಳಿಗೆ ಪ್ರತಿ ವರ್ಷ ಸರಾಸರಿ 25–30 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಹೀಗೆ ದಾಖಲಾಗುವ ಪ್ರತಿ ವಿದ್ಯಾರ್ಥಿಗೂ ಕ್ರೀಡಾ ಉನ್ನತೀಕರಣ ಶುಲ್ಕದ ಹೆಸರಿನಲ್ಲಿ ₹385 ಶುಲ್ಕ ವಿಧಿಸಲಾಗುತ್ತದೆ. ಮಹಾರಾಜ, ಯುವರಾಜ ಪದವಿ ಕಾಲೇಜು ಹಾಗೂ ಮಾನಸಗಂಗೋತ್ರಿಯ ವಿಭಾಗಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ಶುಲ್ಕವು ₹500 ರಷ್ಟಿದೆ. ಹೀಗಿದ್ದೂ ಕ್ರೀಡಾಪಟುಗಳಿಗೆ ಕನಿಷ್ಠ ಉಪಾಹಾರ ಸೌಲಭ್ಯ ನಿರಾಕರಿಸಿರುವುದು ಸರಿಯಲ್ಲ’ ಎಂದು ದೂರಿದರು.

‘ಸರ್ಕಾರಿ, ಅನುದಾನಿತ ಕಾಲೇಜುಗಳ ಬಳಿ ಕ್ರೀಡಾಪಟುಗಳ ಪ್ರಯಾಣ, ದಿನಭತ್ಯೆ ಹಾಗೂ ಊಟದ ಖರ್ಚು ಭರಿಸುವಷ್ಟು ಅನುದಾನ ಇರುವುದಿಲ್ಲ. ಹೀಗಾಗಿ ಪ್ರತಿ ವಿದ್ಯಾರ್ಥಿಯಿಂದ ಕ್ರೀಡಾ ಉದ್ದೇಶಗಳಿಗಾಗಿ ಸಂಗ್ರಹಿಸುವ ಹಣವನ್ನು ಅದಕ್ಕಾಗಿಯೇ ಬಳಸಬೇಕು’ ಎನ್ನುವುದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಆಗ್ರಹವಾಗಿದೆ.

ಅನುದಾನದ ಕೊರತೆಯಿಂದ ಈ ವರ್ಷ ವಿಶ್ವವಿದ್ಯಾಲಯದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಊಟ–ತಿಂಡಿ ಕೊಡುವುದನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಹೆಚ್ಚು ಹೇಳಲು ಆಗದು
ವೆಂಕಟೇಶ್‌ ಉಪನಿರ್ದೇಶಕ ಮೈಸೂರು ವಿ.ವಿ. ಕ್ರೀಡಾ ವಿಭಾಗ

ಅನುದಾನ ಕಡಿತದ ಪರಿಣಾಮ

ಸರ್ಕಾರದಿಂದ ನಿರೀಕ್ಷೆಯಷ್ಟು ಅನುದಾನ ಸಿಗದ ಕಾರಣ ಎಲ್ಲದಕ್ಕೂ ತಿಣುಕಾಡುತ್ತಿರುವ ಮೈಸೂರು ವಿ.ವಿ. ಆಡಳಿತವು ಪ್ರತಿ ವಿಭಾಗದಲ್ಲೂ ಹಣಕಾಸು ಹಂಚಿಕೆಯನ್ನು ತಗ್ಗಿಸಿದೆ. ಈ ಶೈಕ್ಷಣಿಕ ವರ್ಷದಿಂದ ವಾರ್ಷಿಕ ಕ್ರೀಡಾ ಅನುದಾನವನ್ನು ₹60 ಲಕ್ಷದಿಂದ ₹40 ಲಕ್ಷಕ್ಕೆ ಇಳಿಸಲಾಗಿದೆ. ಇದರಲ್ಲಿ ಕಳೆದ ಸಾಲಿನ ಕ್ರೀಡಾಕೂಟಗಳಿಗೆ ವ್ಯಯಿಸಿದ ವೆಚ್ಚದ ಬಾಕಿಯೇ ₹18–20 ಲಕ್ಷದಷ್ಟಿದೆ. ಹೀಗಾಗಿ ಸಿಕ್ಕಷ್ಟು ಹಣದಲ್ಲಿ ಕ್ರೀಡಾಕೂಟ ಆಯೋಜಿಸುತ್ತಿದ್ದು ಸ್ಪರ್ಧೆಗಳ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ. ಇದೀಗ ಕ್ರೀಡಾಕೂಟಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.