ಮೈಸೂರಿನ ಊಟಿ ರಸ್ತೆಯಲ್ಲಿರುವ ಗೆಜ್ಜಗಳ್ಳಿ– ಕುಪ್ಪಲೂರು ಗ್ರಾಮದಲ್ಲಿರುವ ದಳವಾಯಿ ಕೆರೆಯ ನೋಟ
ಪ್ರಜಾವಾಣಿ ಚಿತ್ರ: ಅನೂಪ್ ರಾಘ. ಟಿ.
ಮೈಸೂರು: ನಗರದ ದಕ್ಷಿಣ ಭಾಗದಲ್ಲಿ 138.2 ಎಕರೆಯಷ್ಟು ವಿಶಾಲವಾಗಿ ಚಾಚಿರುವ ‘ದಳವಾಯಿ ಕೆರೆ’ಯು ಚರಂಡಿ ನೀರಿನ ತೊಟ್ಟಿಯಾಗಿದೆ. ತೇಲುಕಳೆ ಬೆಳೆದಿದ್ದು, ಊಟಿ ರಸ್ತೆಯಲ್ಲಿ ಚಲಿಸುವವರಿಗೆ ಆಟದ ಮೈದಾನದಂತೆ ಕಾಣುತ್ತದೆ.
ದಶಕಗಳ ಹಿಂದೆ ಗೆಜ್ಜಗಳ್ಳಿ, ಕುಪ್ಪಲೂರು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಕೆರೆಯು ಮಂಡಕಳ್ಳಿ, ಗುಡಮಾದನಹಳ್ಳಿ, ಮರಸೆ ಗ್ರಾಮಗಳ ಗದ್ದೆಗಳಿಗೆ ನೀರು ಒದಗಿಸುತ್ತಿತ್ತು. ನಾಚನಹಳ್ಳಿ (ಸರ್ವೆ ಸಂಖ್ಯೆ 154), ಕುಪ್ಪಲೂರು (ಸ.ಸಂ 8), ಮಂಡಕಳ್ಳಿ (ಸ.ಸಂ 63) ಗ್ರಾಮಗಳ ಗಡಿಯನ್ನು ಹಂಚಿಕೊಂಡಿರುವ ಕೆರೆಯ ಉದ್ದ 1.5 ಕಿ.ಮೀ, ಅಗಲ 1.2 ಕಿ.ಮೀ. ಇದೆ.
ಒಂದು ಕಾಲದಲ್ಲಿ ಬಾನಾಡಿಗಳಿಗೆ ಆಸರೆಯಾಗಿದ್ದ ಕೆರೆಯಲ್ಲಿ ನೀರು ಕೋಳಿಗಳೂ ಇಲ್ಲ. ಕೆರೆಯ ಉತ್ತರ ಭಾಗದಲ್ಲಿರುವ ಸೀವೇಜ್ ಫಾರಂನಿಂದ ಸಂಸ್ಕರಣೆಯಾಗದ ನೀರು ಕೆರೆಯ ಒಡಲು ತುಂಬುತ್ತಿದ್ದು, ಮೀನುಗಳು ಇಲ್ಲಿ ಬದುಕಲಾರದ ಸ್ಥಿತಿ ಇದೆ.
ಜೆ.ಪಿ.ನಗರ, ಕುಪ್ಪಲೂರು, ಗೆಜ್ಜಗಳ್ಳಿ ಸೇರಿದಂತೆ ರಿಂಗ್ ರಸ್ತೆಯ ಇಕ್ಕೆಲಗಳಲ್ಲಿ ದಶಕದಿಂದೀಚೆಗೆ ನಿರ್ಮಾಣಗೊಂಡ ಬಡಾವಣೆಗಳ ಒಳಚರಂಡಿ ನೀರು ಕೆರೆಗೆ ನೇರವಾಗಿ ಸೇರುತ್ತಿದೆ. ಇದೇ ನೀರು, ಕೆರೆಯ ಕೆಳಗಿರುವ ಶೆಟ್ಟಿಹಳ್ಳಿ ಕೆರೆ, ಮಂಡಕಳ್ಳಿಯ ಬಳಿಯಿರುವ ಹೊಸಹುಂಡಿ ಕೆರೆ ಸೇರಿ ಕೊನೆಗೆ ಕಬಿನಿ ನದಿ ತಲುಪುತ್ತಿದೆ.
16.5 ಚದರ ಕಿ.ಮೀನಷ್ಟು ಜಲಾನಯನ ಪ್ರದೇಶವನ್ನು ಹೊಂದಿರುವ ದಳವಾಯಿ ಕೆರೆ ಜನವಸತಿ ಹೆಚ್ಚಾದಂತೆ ಕೊಳಚೆ ಕೆರೆಯಾಯಿತು. ಈಗ ಮೈದಾನ, ಉದ್ಯಾನವಾಗಿರುವ ನಗರದ ಹೃದಯದ ಭಾಗದ ಕೆರೆಗಳಾದ ದೊಡ್ಡಕೆರೆ, ಸುಬ್ಬರಾಯನಕೆರೆ, ಜೀವರಾಯನ ಕೆರೆಗಳಲ್ಲಿ ತುಂಬಿದ ನೀರು ಆಗ ದಳವಾಯಿ ಸೇರುತ್ತಿತ್ತು. ಕೆರೆ ಜಾಲದ ರಾಜಕಾಲುವೆಗಳಲ್ಲಿ ಒಳ ಚರಂಡಿ ನೀರು ಹರಿಯುತ್ತಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ–ಅಂಶದ ಪ್ರಕಾರ ದಳವಾಯಿ ಕೆರೆ ನೀರು ಮೀನುಗಾರಿಕೆಗೂ ಯೋಗ್ಯವಾಗಿಲ್ಲ. ಇದು ಅತ್ಯಂತ ಕಳಪೆ ದರ್ಜೆಗೆ (ಇ) ಸೇರುತ್ತದೆ. ಕೆರೆಯ ಅಚ್ಚುಕಟ್ಟು ಗ್ರಾಮಗಳಾದ ಹೊಸಹುಂಡಿ, ಗುಡಮಾದನಹಳ್ಳಿ, ಮರಸೆ, ನಾಯಕನಹುಂಡಿಯಲ್ಲಿ ಮಲಿನ ನೀರಿನಲ್ಲೇ ಹಸುಗಳ ಮೇವಿನ ಹುಲ್ಲು, ಭತ್ತ, ಸೊಪ್ಪು, ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಇದೇ ತರಕಾರಿ–ಸೊಪ್ಪನ್ನು ಮಾರುಕಟ್ಟೆಯಲ್ಲಿ ಮೈಸೂರಿಗರೇ ಖರೀದಿಸುತ್ತಾರೆ !
ಕೆರೆಯ ಮಧ್ಯದಲ್ಲಿ ಶುಂಠಿ ಹುಲ್ಲು ಬೆಳೆಯುತ್ತಿದ್ದು, ಅದು ಹಸುಗಳ ಮೇವು. ಬಂಡಿಪಾಳ್ಯ, ಗೆಜ್ಜಗಳ್ಳಿ ಸುತ್ತಮುತ್ತಲ ಗ್ರಾಮಗಳ ಜಾನುವಾರು ಸಾಕಣೆದಾರರು ತೆಪ್ಪಗಳಲ್ಲಿನ ಈ ಹುಲ್ಲನ್ನು ನಿತ್ಯ ಕೊಯ್ದು ಸಾಗಿಸುತ್ತಾರೆ.
ಹೊಸ ಬಡಾವಣೆಗಳ ಕಟ್ಟಡ ತ್ಯಾಜ್ಯವನ್ನು ಕೆರೆಗೆ ಹೊಂದಿಕೊಂಡಿರುವ ಹೆದ್ದಾರಿ, ರಿಂಗ್ ರಸ್ತೆ, ಏರಿ ಬದಿಯಲ್ಲೇ ಸುರಿಯಲಾಗುತ್ತಿದೆ. ಅದಕ್ಕೆ ಶಾಶ್ವತ ಪರಿಹಾರವನ್ನು ಇದುವರೆಗೂ ರೂಪಿಸಿಲ್ಲ. ಅದರೊಂದಿಗೆ ಪ್ಲಾಸ್ಟಿಕ್ ಕವರ್‌ಗಳು, ಮದ್ಯದ ಬಾಟಲಿಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗೊಂಡ ಕಸವು ಕೆರೆಯಂಚನ್ನು ಮುತ್ತುತ್ತಿವೆ. ಅಧಿಕಾರಿಗಳು ಮಾತ್ರ ಕಣ್ಮುಚ್ಚಿಕೊಂಡಿದ್ದಾರೆ ಎಂಬುದು ನಿವಾಸಿಗಳ ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.