ADVERTISEMENT

ಪರಿಶಿಷ್ಟ ಮೀಸಲಾತಿಗೆ ಉಪ್ಪಾರರ ಆಗ್ರಹ

ಫೆ.15, 16ರಂದು ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಹಂಪಿ ವಿ.ವಿ.ಯ ತಂಡ ಜಿಲ್ಲೆಗೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 12:47 IST
Last Updated 7 ಫೆಬ್ರುವರಿ 2021, 12:47 IST

ಮೈಸೂರು: ‘ಸಮುದಾಯದ ವಾಸ್ತವತೆಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ; ಶೈಕ್ಷಣಿಕ, ಸಾಮಾಜಿಕ ಸ್ಥಾನಮಾನಕ್ಕಾಗಿ ಪರಿಶಿಷ್ಟ ಜಾತಿ/ಪಂಗಡದ ಪಟ್ಟಿಗೆ ಉಪ್ಪಾರರನ್ನು ಸೇರ್ಪಡೆಗೊಳಿಸಿ’ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರರ ಸಂಘದ ಸಂಚಾಲಕ ಡಿ.ಜಗನ್ನಾಥ್ ಸಾಗರ್ ಭಾನುವಾರ ಇಲ್ಲಿ ಆಗ್ರಹಿಸಿದರು.

‘ಪರಿಶಿಷ್ಟ ಜಾತಿ–ಪಂಗಡದ ಪಟ್ಟಿಯಲ್ಲಿರುವ ಜನಾಂಗಗಳಿಗಿಂತಲೂ ಉಪ್ಪಾರ ಸಮಾಜ ಕೆಳಸ್ತರದಲ್ಲಿದೆ. ಇದಕ್ಕಾಗಿಯೇ ಇದೀಗ ಕುಲಶಾಸ್ತ್ರೀಯ ಅಧ್ಯಯನ ವರದಿ ತಯಾರಿಸಲಾಗುತ್ತಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಮುದಾಯದ ಸ್ಥಿತಿಗತಿಯನ್ನು ಅರಿತು ಸಾಮಾಜಿಕ ನ್ಯಾಯದಡಿ ನಮಗೂ ಮೀಸಲಾತಿ ಕಲ್ಪಿಸಬೇಕಿದೆ. ಇಂದಿಗೂ ಶೇ 40ಕ್ಕಿಂತಲೂ ಕಡಿಮೆ ಜನರು ಶಿಕ್ಷಣ ಪಡೆದಿದ್ದಾರೆ. ಜನಾಂಗ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಾಕಷ್ಟು ಹಿಂದುಳಿದಿದ್ದು, ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು’ ಎಂದು ಸಾಗರ್‌ ಆಗ್ರಹಿಸಿದರು.

ADVERTISEMENT

‘ದೇವೇಗೌಡರು ಪ್ರಧಾನಿಯಾಗಿದ್ದಾಗ, ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಪರಿವಾರ, ತಳವಾರದ ಜೊತೆಗೆ ಉಪ್ಪಾರರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು. ಇಂದಿಗೂ ನಮ್ಮ ಸಮುದಾಯಕ್ಕೆ ಪರಿಶಿಷ್ಟ ಮೀಸಲಾತಿ ದೊರೆಯದಿರುವುದು ವಿಷಾದಕರ ಬೆಳವಣಿಗೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಎರಡು ವರ್ಷದ ಹಿಂದೆಯೇ ವರದಿ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ಆದೇಶದ ಜೊತೆಗೆ ಅನುದಾನವನ್ನು ಒದಗಿಸಿತ್ತು. ಮೈಸೂರು ವಿಶ್ವವಿದ್ಯಾನಿಲಯ ವರದಿ ತಯಾರಿಕೆಯಿಂದ ಹಿಂದೆ ಸರಿದಿದ್ದರಿಂದ, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ವರದಿ ತಯಾರಿಸುತ್ತಿದೆ. ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಪ್ರಕ್ರಿಯೆ ಇದೀಗ ಮತ್ತೆ ಪುನರಾರಂಭಗೊಂಡಿದ್ದು, ಭರವಸೆ ಹೆಚ್ಚಿಸಿದೆ’ ಎಂದರು.

‘ಹಂಪಿ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಎಂ.ಮೇತ್ರಿ ಅಧ್ಯಕ್ಷತೆಯ ತಂಡ ಫೆ.15ರಂದು ಮೈಸೂರಿನ ತಿ.ನರಸೀಪುರ ಭಾಗದಲ್ಲಿ, 16ರಂದು ಚಾಮರಾಜನಗರ ಭಾಗದಲ್ಲಿ ಮಾಹಿತಿ ಸಂಗ್ರಹಿಸಲಿದೆ. ಸಮುದಾಯದ ಜನರು ಸಮಿತಿಗೆ ವಾಸ್ತವ ಮನದಟ್ಟು ಮಾಡಿಕೊಡಬೇಕು’ ಎಂದು ಸಾಗರ್‌ ಕೋರಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಲತಾ ಸಿದ್ದಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಜಯಕುಮಾರ್‌, ಮೈಸೂರು-ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವ ಅಧ್ಯಕ್ಷ ಹನುಮಂತಶೆಟ್ಟಿ ಕೂಡ್ಲೂರು, ಉಪಾಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಬಿಜೆಪಿ ಮುಖಂಡರಾದ ಮಂಗಳಾ ಶಿವಕುಮಾರ್, ಸಂಘದ ಕಾರ್ಯದರ್ಶಿ ಸೋಮಶೇಖರ್, ಖಜಾಂಚಿ ಮಹದೇವಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಕೆ.ಬಿ.ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.