ADVERTISEMENT

ಬೆಟ್ಟದಪುರ | ಯೂರಿಯಾಕ್ಕೆ ರೈತರಿಂದ ಹೆಚ್ಚಿನ ದರ ವಸೂಲಿ: ಆರೋಪ

ರೈತರೊಂದಿಗೆ ಕೃಷಿ ಸಹಾಯಕ ನಿರ್ದೇಶಕಿ ಬಿ.ಕೆ. ಕುಸುಮಾ ಸಭೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 4:02 IST
Last Updated 30 ಅಕ್ಟೋಬರ್ 2025, 4:02 IST
ಬೆಟ್ಟದಪುರ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಸಭೆ ನಡೆಯಿತು
ಬೆಟ್ಟದಪುರ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಸಭೆ ನಡೆಯಿತು   

ಬೆಟ್ಟದಪುರ: ಇಲ್ಲಿನ ಹೋಬಳಿಯ ವ್ಯಾಪ್ತಿಯಲ್ಲಿ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೃಷಿ ಸಹಾಯಕ ನಿರ್ದೇಶಕಿ ಬಿ.ಕೆ. ಕುಸುಮಾ ಅವರು ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ರೈತರೊಂದಿಗೆ ಸಭೆ ನಡೆಸಿದರು.

ನಿಗದಿತ ದರ 50 ಕೆಜಿಯ ಒಂದು ಚೀಲಕ್ಕೆ ₹350 ದರ ಇದ್ದು, ರೈತರಿಂದ ₹50–₹70 ಹಣವನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದವರು ಮಾರಾಟಗಾರರ ವಿರುದ್ಧ ಅ.24ರಂದು ದೂರು ದಾಖಲಿಸಿದ್ದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ, ‘ಬೆಟ್ಟದಪುರ ಹೋಬಳಿಯಲ್ಲಿ ಯೂರಿಯಾ ನಿಗದಿತ ದರಕ್ಕಿಂತ ಹೆಚ್ಚಾಗಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದು, ಮಾರಾಟಗಾರರು ಸಾಗಾಣಿಕೆ ವೆಚ್ಚ ಹೆಚ್ಚಾದ್ದರಿಂದ ಯೂರಿಯಾ ದರವನ್ನು ಹೆಚ್ಚು ಮಾಡಲಾಗಿದೆ ಎಂದು ತಿಳಿಸುತ್ತಿದ್ದಾರೆ, ಇದರಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಸಾಗಾಣಿಕೆ ವೆಚ್ಚ ಎಂದು ದುಪ್ಪಟ್ಟು ಹಣ ವಸೂಲಿ ಮಾಡುವುದಾದರೆ ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿದ್ದಾಗ ರೈತರು ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

ADVERTISEMENT

ರೈತರು ರಸಗೊಬ್ಬರದ ಅಂಗಡಿಗಳಿಗೆ ಹೋದಾಗ ವರ್ತಕರು ಸೌಜನ್ಯದಿಂದ ರೈತರನ್ನು ನಡೆಸಿಕೊಳ್ಳಬೇಕು ಎಂದರು.

ಕೃಷಿ ಸಹಾಯಕ ನಿರ್ದೇಶಕಿ ಬಿ.ಕೆ. ಕುಸುಮಾ ಮಾತನಾಡಿ, ‘ತಾಲ್ಲೂಕಿನಲ್ಲಿ ಯೂರಿಯಾ ಕೊರತೆ ಇಲ್ಲ, ನಿಗದಿತ ದರಕ್ಕಿಂತ ಹೆಚ್ಚು ಬೆಲೆ ರೈತರಿಂದ ಪಡೆದರೆ ಕ್ರಮ ಜರುಗಿಸಲಾಗುವುದು. ತಾಲ್ಲೂಕಿನಲ್ಲಿರುವ ಯಾವುದೇ ಗೊಬ್ಬರದ ಅಂಗಡಿಗಳಲ್ಲಿ ರೈತರೊಂದಿಗೆ ಅನುಚಿತವಾಗಿ ವರ್ತಿಸಿದರೆ ಅಥವಾ ದರ ಹೆಚ್ಚಾಗಿ ಪಡೆದರೆ ತಕ್ಷಣದಲ್ಲಿಯೇ ಕೃಷಿ ಅಧಿಕಾರಿಗಳು ಅಥವಾ ನಮಗೆ ಮಾಹಿತಿ ನೀಡಿ ಅವರ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ರೈತ ಸಂಘದ ಮುಖಂಡರಾದ ಗುರುರಾಜು, ದಶರಥ, ವಿಜಯರಾಜೇಅರಸ್, ಹರೀಶ್ ರಾಜೇ ಅರಸ್, ದೇವಶೆಟ್ಟಿ, ನವೀನ್ ರಾಜೇ ಅರಸ್, ಸತೀಶ್, ನಾಗಣ್ಣ,ಕುಮಾರ್,ದೇವರಾಜು, ಕೃಷಿ ಅಧಿಕಾರಿಗಳಾದ ನವ್ಯಾನಾಣಯ್ಯ, ಮಹೇಶ್, ತಾಂತ್ರಿಕ ಅಧಿಕಾರಿ ಪ್ರವೀಣ್ ಸೇರಿದಂತೆ ರೈತರು ಹಾಗೂ ವರ್ತಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬೆಟ್ಟದಪುರ ರೈತ ಸಂಪರ್ಕ ಕೇಂದ್ರದಲ್ಲಿ ಯೂರಿಯಾ ರಸಗೊಬ್ಬರದ ದರವನ್ನು ನಿಗದಿ ಮಾಡಿದ ಬೆಲೆಗಿಂತ ಹೆಚ್ಚಾಗಿ ಮಾರಾಟ ಮಾಡುತ್ತಿದ್ದ ವರ್ತಕರ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಬುಧವಾರ ಸಭೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.