
ಮೈಸೂರು: ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ, ಮಂಡ್ಯ ಜಿಲ್ಲೆಯ ಕೆರಗೋಡಿನ ಗ್ರಾಮೀಣ ಪ್ರತಿಭೆ ಎನ್.ದೀಪಿಕಾ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅವರು, ಕೃಷಿ ಕಾರ್ಮಿಕ ದಂಪತಿ ನಾಗಣ್ಣ ಮತ್ತು ಸಾಕಮ್ಮ ಪುತ್ರಿ.
2025ರ ಸಿವಿಲ್ ನ್ಯಾಯಾಧೀಶ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾದ 83 ಅಭ್ಯರ್ಥಿಗಳಲ್ಲಿ ದೀಪಿಕಾ 32ನೇ ರ‍್ಯಾಂಕ್ ಪಡೆದಿದ್ದಾರೆ. ತಮ್ಮ 5ನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದು, ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಕಾನೂನು ಸಲಹಾ ರಕ್ಷಣಾ ಅಭಿರಕ್ಷಕರಾಗಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಆನಂದ್ ಮಾರ್ಗದರ್ಶನದಲ್ಲಿ ತಯಾರಿ ನಡೆಸಿದ್ದರು. ಅವರ ಸಾಧನೆಗೆ ಪೋಷಕರು ಹಾಗೂ ಕಾಲೇಜಿನ ಅಧ್ಯಾಪಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಕಡು ಬಡತನವಿದ್ದರೂ ಕೊರತೆಯಾಗದಂತೆ ಎಲ್‌ಎಲ್‌ಬಿ ಪದವಿವರೆಗೂ ಓದಿಸಿದ ಪೋಷಕರನ್ನು ನೆನೆದು ದೀಪಿಕಾ ಭಾವುಕರಾದರು. ‘ಮಕ್ಕಳಿಗೆ ಯಾವುದೇ ತೊಂದರೆ ಬಾರದೆಂದು ಗದ್ದೆ– ಹೊಲಗಳಲ್ಲಿ ದುಡಿದು ಓದಿಸಿದ್ದಾರೆ. ನಮ್ಮ ಭವಿಷ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇಂದು ನನ್ನ ಯಶಸ್ಸಿಗೆ ಅವರೇ ಕಾರಣ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿಳಿದೇಗಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಬಿ.ಹೊಸೂರಿನ ಸರ್ಕಾರಿ ಪ್ರೌಢಶಾಲೆ ನಂತರ ನಂಜನಗೂಡಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣಳಾದೆ. ಪಾಂಡವಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದೆ. ತಂಗಿ ರೂಪಾಳನ್ನು ಎಲ್‌ಎಲ್‌ಬಿಗೆ ಸೇರಿಸಲು 2016ರಲ್ಲಿ ಮೈಸೂರಿನ ವಿದ್ಯಾವರ್ಧಕ ಕಾಲೇಜಿಗೆ ಹೋಗಿದ್ದಾಗ ನಾನೂ ಕಾನೂನು ಪದವಿ ಪಡೆಯಬೇಕೆಂದು ನಿರ್ಧರಿಸಿದೆ’ ಎಂದರು.
‘ಕಾಲೇಜಿನ ಪ್ರಾಧ್ಯಾಪಕರಾದ ಶ್ರೀದೇವಿ, ದೀಪು, ಚಂದ್ರಶೇಖರ್ ಐಜೂರು, ಇಂದುಮತಿ, ವಾಸುದೇವ್ ಅವರಿಂದ ಉತ್ತಮ ಗುಣಮಟ್ಟದ ಶಿಕ್ಷಣ ಸಿಕ್ಕಿತು. 2019ರಲ್ಲಿ ಪದವಿ ಪೂರೈಸಿದೆ. ಪದವಿ ಓದುತ್ತಿರುವಾಗಲೇ ವಕೀಲರಾದ ಎಂ.ಜೆ.ಜೈನ್, ಹರಿಪ್ರಸಾದ್ ಅವರಲ್ಲಿ ವಕೀಲಿಕೆ ಅಭ್ಯಾಸ ಮಾಡಿದ್ದೆ’ ಎಂದರು.
‘ಕೋವಿಡ್ ಬಂದಾಗ ಪದವೀಧರರಿಗೆ ನೀಡುವ ಶಿಷ್ಯವೇತನದಲ್ಲಿ ಜೀವನ ನಡೆಸುತ್ತಲೇ ನ್ಯಾಯಾಧೀಶರ ಹುದ್ದೆ ಪರೀಕ್ಷೆಗೆ ತಯಾರಿ ನಡೆಸಿದೆ. ಪತಿ, ವಕೀಲರೂ ಆದ ಕೆ.ಎಂ.ಸುನಿಲ್ ಕುಮಾರ್ ನೆರವಾದರು. ಕಚೇರಿಯನ್ನು ತೆರೆದೆವು. 7 ವರ್ಷ ವಕೀಲಿಕೆ ಮಾಡಿದೆವು. ಮಂಡ್ಯ ವಕೀಲರ ಸಂಘದವರೂ ನೆರವಾದರು’ ಎಂದರು.
‘ಬಸವಯ್ಯ, ಕುಂದೂರು ಬಸವರಾಜ್, ಚೇತನ್, ವಕೀಲರ ಸಂಘದ ಅಧ್ಯಕ್ಷರಾದ ಸತ್ಯಾನಂದ ಅವರು ಸಂದರ್ಶನದ ವೇಳೆ ನೀಡಿದ ಸಲಹೆಗಳು ಆಯ್ಕೆ ಆಗಲು ಸಹಾಯವಾಯಿತು. ಅತ್ತೆ ಮಾವ ಶಾರದಮ್ಮ– ಮಾಯಣ್ಣ ಅವರ ನೆರವನ್ನು ಮರೆಯಲಾರೆ. ಒಂದೂವರೆ ತಿಂಗಳ ಮಗ ಕುಲದೀಪ್‌ನೊಂದಿಗೆ ಪರೀಕ್ಷೆ ಬರೆದಿದ್ದೆ. ಕಷ್ಟದ ಸಂದರ್ಭದಲ್ಲಿದ್ದ ಎಲ್ಲರನ್ನೂ ನೆನೆಯುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.