ADVERTISEMENT

ಮೈಸೂರು: ಇಜ್ಬಾಲ ಏತ ನೀರಾವರಿ ಯೋಜನೆ ಕಾಯ್ದೆ ಉಲ್ಲಂಘನೆ; ರೈತರಿಗೆ ವಂಚನೆ

ರೈತ ಕೃಷಿ–ಕಾರ್ಮಿಕ ಸಂಘಟನೆ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 11:15 IST
Last Updated 21 ಮಾರ್ಚ್ 2020, 11:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ‘ಎಚ್‌.ಡಿ.ಕೋಟೆ ತಾಲ್ಲೂಕಿನ ಇಜ್ಬಾಲ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ ನೀರಾವರಿ ನಿಗಮದ ಅಧಿಕಾರಿಗಳು, ಎಂಜಿನಿಯರ್‌ಗಳು ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸುತ್ತಿದ್ದಾರೆ. ಬಾಧಿತ ರೈತರಿಗೆ ಸೂಕ್ತ ಪರಿಹಾರ ನೀಡದೆ ವಂಚಿಸುತ್ತಿದ್ದಾರೆ’ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆಯ ಎಸ್‌.ಎನ್.ಸ್ವಾಮಿ ದೂರಿದರು.

‘ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ಯೋಜನೆ ಬಗ್ಗೆ ಸ್ಥಳೀಯರಿಗೆ ಸಮರ್ಪಕ ಮಾಹಿತಿ ನೀಡದಿದ್ದರೆ, ಕಾಮಗಾರಿ ನಡೆಸಲು ಅವಕಾಶವನ್ನೇ ನೀಡಲ್ಲ’ ಎಂದು ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಈಗಾಗಲೇ ಪೈಪ್‌ಲೈನ್‌ ಕಾಮಗಾರಿಗೆ ತಡೆ ಹಾಕಿದ್ದೇವೆ. ಅಧಿಕಾರಿಗಳು ತಮ್ಮ ಧೋರಣೆ ಬದಲಿಸಿಕೊಳ್ಳದಿದ್ದರೆ, ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ. ಜಿಲ್ಲಾಡಳಿತ ಈ ಯೋಜನೆಯಿಂದ ಬಾಧಿತರಾಗುವ ಹಳ್ಳಿಗಳ ರೈತರ ನೆರವಿಗೆ ತಕ್ಷಣವೇ ಧಾವಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ಎಚ್.ಡಿ.ಕೋಟೆಯ ಕರಿಗಾಲದಿಂದ ಹೆರಗಳ್ಳಿ, ಹೊಮ್ಮರಗಳ್ಳಿ ಮತ್ತು ಮೈಸೂರು ತಾಲ್ಲೂಕಿನ ಮದ್ದೂರು, ಚಿಂಚರಾಯನ ಹುಂಡಿ, ಕಲ್ಲಹಳ್ಳಿ... ಹೀಗೆ ಜಯಪುರದವರೆಗೂ ಯೋಜನೆಯಡಿ ಏರುಕೊಳವೆ ಮಾರ್ಗದ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಆರ್‌ಎಫ್‌ಸಿಟಿಎಲ್ ಎಆರ್‌ಆರ್-2013 ಕಾಯ್ದೆಯ ಉಲ್ಲಂಘನೆ ಎಗ್ಗಿಲ್ಲದೆ ನಡೆದಿದ್ದು, ರೈತರನ್ನು ವಂಚಿಸಲಾಗುತ್ತಿದೆ’ ಎಂದು ಸ್ವಾಮಿ ದೂರಿದರು.

‘ಕಾವೇರಿ ನೀರಾವರಿ ನಿಗಮದ ಅವಧಿಕಾರಿಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರೈತರ ತೆಂಗು, ಮಾವು, ಬಾಳೆ, ಅರಿಶಿನ ಬೆಳೆಯನ್ನು ಧ್ವಂಸಗೊಳಿಸಿದ್ದಾರೆ. ಪ್ರಶ್ನಿಸಲು ಮುಂದಾದ ರೈತರನ್ನೇ ಬೆದರಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ರೈತರಿಗೆ ನ್ಯಾಯಬದ್ಧ ಪರಿಹಾರ ಒದಗಿಸಬೇಕು’ ಎಂದು ಅವರು ಆಗ್ರಹಿಸಿದರು.

ರೈತ ಕೃಷಿ ಕಾರ್ಮಿಕ ಸಂಘಟನೆಯ ಎಚ್‌.ಪಿ.ಶಿವಪ್ರಕಾಶ್‌, ಯೋಜನೆಯಿಂದ ಬಾಧಿತಗೊಂಡ ರೈತರಾದ ಮಂಜು, ದಿನೇಶ್‌, ಮಲ್ಲಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.