
ಮೈಸೂರು: ‘ಮತಕಳ್ಳತನ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ಹಾಗೂ ನಿರೂಪಣೆಗೆ ಬೆಲೆ ಇಲ್ಲವೆಂಬುದು ಬಿಹಾರ ವಿಧಾನಸಭಾ ಚುನಾವಣೆಯಿಂದ ಸಾಬೀತಾಗಿದೆ’ ಎಂದು ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮತ ಕಳ್ಳತನಕ್ಕೆ ಸಂಬಂಧಿಸಿದಂತೆ ಸಾಕ್ಷಿ ಇದ್ದರೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವಂತೆ ಹೇಳುತ್ತಲೇ ಬಂದಿದ್ದೇವೆ. ಆದರೆ, ಅವರು ಈವರೆಗೂ ದೂರು ಕೊಟ್ಟಿಲ್ಲ. ಆ ವಿಷಯವನ್ನು ಚುನಾವಣಾ ತಂತ್ರವನ್ನಾಗಿ ಬಳಸಿಕೊಂಡರಷ್ಟೆ’ ಎಂದರು.
‘ಜನರ ದಿಕ್ಕು ತಪ್ಪಿಸುವುದು, ಅರ್ಧ ಸತ್ಯ ಹೇಳುವುದು ಹಾಗೂ ಅಪಪ್ರಚಾರ ಮಾಡುವುದೇ ಕಾಂಗ್ರೆಸ್‌ನವರ ತಂತ್ರ. ಈ ನಿಟ್ಟಿನಲ್ಲಿ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಬಿಹಾರ ಚುನಾವಣೆ ಸಂದರ್ಭದಲ್ಲಿ ಆ ಪಕ್ಷದ ನಾಯಕರು ವಿದೇಶದಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದುದ್ದನ್ನು ನೋಡಿದ್ದೇವೆ. ನಮ್ಮ ನಾಯಕರು ಹಳ್ಳಿ–ಹಳ್ಳಿಗೂ ಹೋಗಿ ಪ್ರಚಾರ ಮಾಡಿದ್ದಾರೆ. ಇದರಿಂದಲೇ ಎನ್‌ಡಿಎ ಮೈತ್ರಿಕೂಟಕ್ಕೆ ಅದ್ಭುತ ಫಲಿತಾಂಶ ದೊರೆತಿದೆ. ನರೇಂದ್ರ ಮೋದಿ ನಾಯಕತ್ವಕ್ಕೆ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಜಯ ಸಿಕ್ಕಿದೆ’ ಎಂದರು.
‘ಜನತೆಯನ್ನು ಒಂದು ಸಂಪತ್ತು ಎಂದುಕೊಂಡವರಿಗೆ ಜನ ಪಾಠ ಕಲಿಸುತ್ತಾರೆ’ ಎಂದು ಹೇಳಿದರು.
‘ಕಾಂಗ್ರೆಸ್ ಹಿಂದಿನಿಂದಲೂ ಅಭಿವೃದ್ಧಿಯಿಂದ ದೂರವೇ ಇದೆ. ಅಭಿವೃದ್ಧಿ ರಾಜಕಾರಣವನ್ನು ಆ ಪಕ್ಷದವರು ಮಾಡಿಯೇ ಇಲ್ಲ. ಸಮಾಜ ವಿಭಜನೆ ಮಾಡಿ ಲಾಭ ಪಡೆದುಕೊಳ್ಳಲು ಮುಂದಾಗುತ್ತದೆ’ ಎಂದು ಆರೋಪಿಸಿದರು.
‘ದೇಶವೀಗ ಏಕತೆಯಲ್ಲಿ ಮುನ್ನುಗ್ಗುತ್ತಿದೆ. ವಿಕಸಿತ ಭಾರತಕ್ಕೆ ಜನರ ಸ್ಪಂದನೆ ಇದೆ. 2028ಕ್ಕೆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಗ್ಯಾರಂಟಿಗೂ– ಜನರ ಹಿತಕ್ಕಾಗಿ ಯೋಜನೆ ರೂಪಿಸುವುದಕ್ಕೂ ವ್ಯತ್ಯಾಸ ಇದೆ. ಹಣಕಾಸಿನ ಮಿತಿಯಲ್ಲಿ ಯೋಜನೆ ರೂಪಿಸಿದರೆ ಒಳ್ಳೆಯದು. ಹಣಕಾಸಿನ ಸಾಮರ್ಥ್ಯ ಇಲ್ಲದಿದ್ದರೂ ರಾಜ್ಯ ಸರ್ಕಾರ ಯೋಜನೆಗಳನ್ನು ಮಾಡಿದೆ. ಹೀಗಾಗಿ, ಗ್ಯಾರಂಟಿಗೆ ಹಣ ಹೊಂದಿಸಲಾಗದ ಪರಿಸ್ಥಿತಿಗೆ ಸರ್ಕಾರ ತಲುಪಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.