ADVERTISEMENT

ಮೈಸೂರು: ವಕ್ಫ್‌ ಕಮಿಟಿ ನೋಟಿಸ್‌ ಹರಿದು ಆಕ್ರೋಶ

ಬಿಜೆಪಿ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 16:25 IST
Last Updated 25 ಏಪ್ರಿಲ್ 2025, 16:25 IST
ಬಿಜೆಪಿ ನಾಯಕರು, ವಿವಿಧ ಸಂಘಟನೆಗಳ ಮುಖಂಡರು ಎಂ.ಕೆ ಹಾಸ್ಟೆಲ್‌ ಮುಂಭಾಗ ಪ್ರತಿಭಟಿಸಿದರು
ಬಿಜೆಪಿ ನಾಯಕರು, ವಿವಿಧ ಸಂಘಟನೆಗಳ ಮುಖಂಡರು ಎಂ.ಕೆ ಹಾಸ್ಟೆಲ್‌ ಮುಂಭಾಗ ಪ್ರತಿಭಟಿಸಿದರು   

ಮೈಸೂರು: ನಗರದ ವಿನೋಬ ರಸ್ತೆಯ ಎಂ.ಕೆ ಹಾಸ್ಟೆಲ್‌ಗೆ ಸೇರಿದ ಸುಮಾರು 30 ಅಡಿ ಜಾಗದ ಒತ್ತುವರಿ ತೆರವುಗೊಳಿಸಬೇಕೆಂದು ರಾಜ್ಯ ವಕ್ಫ್‌ ಮಂಡಳಿಯು ನೀಡಿರುವ ನೋಟಿಸ್‌ ಖಂಡಿಸಿ ಬಿಜೆಪಿ ನಾಯಕರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಸ್ಟೆಲ್‌ ಮುಂಭಾಗ ಪ್ರತಿಭಟಿಸಿದರು. ಹಾಸ್ಟೆಲ್‌ ಗೋಡೆಗೆ ಅಂಟಿಸಿದ್ದ ನೋಟಿಸನ್ನು ಮಾಜಿ ಸಂಸದ ಪ್ರತಾಪ ಸಿಂಹ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಹಾಸ್ಟೆಲ್‌ ಮಾಲೀಕ ಎನ್‌.ವಿ.ರಾಮಚಂದ್ರ ಶೆಟ್ಟಿ ಮಾತನಾಡಿ, ‘ಕಡಬಂ ಮನ್ನಾರ್ ಸೇವಾ ಟ್ರಸ್ಟ್ ಮೂಲಕ ಈ ಹಾಸ್ಟೆಲ್‌ ಮುನ್ನಡೆಸಲಾಗುತ್ತಿದೆ. ಪಕ್ಕದಲ್ಲೇ ಲಿಂಗಾಯತರ ಗದ್ದಿಗೆ ಇತ್ತು. ಅದನ್ನು ಒತ್ತುವರಿ ಮಾಡಿಕೊಂಡು ವಕ್ಫ್‌ ಮಂಡಳಿಯವರು ನಮ್ಮ ಜಾಗ ಎನ್ನುತ್ತಿದ್ದಾರೆ. ಯಾರೂ ಇಲ್ಲದಿದ್ದಾಗ ನೋಟಿಸನ್ನು ಗೋಡೆಗೆ ಅಂಟಿಸಿ ತೆರಳಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ’ ಎಂದರು.

‘ಈ ಹಿಂದೆಯೂ ಇದೇ ರೀತಿ ತಕರಾರು ಎತ್ತಿದ್ದರು. ಪಾಲಿಕೆ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ವಕ್ಫ್‌ ಕಮಿಟಿಯವರಲ್ಲಿ ಜಾಗದ ಕುರಿತು ಯಾವುದೇ ದಾಖಲೆಗಳು ಇರಲಿಲ್ಲ. ನಮ್ಮಲ್ಲಿ ಜಾಗಕ್ಕೆ ಸಂಬಂಧಿಸಿದ ದಾಖಲೆ ಇದೆ. ಕಮಿಟಿಯು ಜಾಗ ಒತ್ತುವರಿ ಮಾಡುವ ಹುನ್ನಾರದಿಂದ ಹಿಂದೆ ಸರಿಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ, ‘ವಕ್ಫ್‌ಗೆ ಯಾರಾದರೂ ದಾನ ಕೊಡಬೇಕಲ್ಲವೇ, ಈ ಜಾಗವನ್ನು ಯಾರು ಕೊಟ್ಟಿದ್ದಾರೆ. ಅವರು ಮನ್ನಾರ್ ಕುಟುಂಬಕ್ಕೆ ಸೇರಿದವರೇ? ಇದ್ಯಾವುದೂ ಅಲ್ಲದಿದ್ದರೆ ಯಾಕೆ ಜಾಗ ಕೇಳುತ್ತಿದ್ದಾರೆ. 110 ವರ್ಷದಿಂದ ಬಡ ಮಕ್ಕಳಿಗೆ ಉಚಿತವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುತ್ತಿರುವ ಹಾಸ್ಟೆಲನ್ನು ಕಬಳಿಸಲು ಅವಕಾಶ ಮಾಡಿಕೊಟ್ಟಿದ್ದೀರಲ್ಲಾ ಸಿದ್ದರಾಮಯ್ಯ ಅವರೇ, ನೀವೇನು ತಾಲಿಬಾನಿ ರಾಜ್ಯ ಮಾಡಲು ನೋಡುತ್ತಿದ್ದೀರಾ’ ಎಂದು ಪ್ರಶ್ನಿಸಿದರು.

‘ಜಿಲ್ಲಾಧಿಕಾರಿ ಕಣ್ಣುಮುಚ್ಚಿ ಕೂರಬಾರದು. ನಿಮಗೂ ನ್ಯಾಯ ವ್ಯವಸ್ಥೆ ವಿಶೇಷ ಅಧಿಕಾರ ನೀಡಿದೆ. ಈ ರೀತಿಯ ನೋಟಿಸ್‌ ಅಂಟಿಸಲು ಅವಕಾಶ ನೀಡಬಾರದು. ಇದು ಮುಂದುವರಿದರೆ ಮುಂದಾಗುವ ಘಟನೆಗಳಿಗೆ ನೀವೇ ಹೊಣೆಗಾರರಾಗಿರುತ್ತೀರಿ’ ಎಂದರು.

ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಪ್ರಶಾಂತ್‌ ಗೌಡ, ತೇಜೇಶ್ ಲೋಕೇಶ್ ಗೌಡ, ಮೈಕಾ ಪ್ರೇಮ್‌ ಕುಮಾರ್‌ ಭಾಗವಹಿಸಿದ್ದರು.

ಮೈಸೂರಿನ ವಿನೋಬ ರಸ್ತೆಯ ಎಂ.ಕೆ ಹಾಸ್ಟೆಲ್‌ಗೆ ವಕ್ಫ್‌ ಬೋರ್ಡ್‌ ಅಂಟಿಸಿರುವ ನೋಟಿಸನ್ನು ಮಾಜಿ ಸಂಸದ ಪ್ರತಾಪ ಸಿಂಹ ಹರಿದು ಆಕ್ರೋಶ ವ್ಯಕ್ತಪಡಿಸಿದರು
ಡಿಸಿ ಕಚೇರಿ ಮೂಲಕ ಪ್ರಧಾನಿಗೆ ಮನವಿ
ಕರ್ನಾಟಕ ಸೇನಾ ಪಡೆ ಸದಸ್ಯರು ವಕ್ಫ್‌ ಬೋರ್ಡ್‌ ನೀಡಿರುವ ನೋಟಿಸ್‌ ಹಿಂಪಡೆಯಲು ಸೂಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಪ್ರಭುಶಂಕರ ನೇಹಾ ವರಕೂಡು ಕೃಷ್ಣೇಗೌಡ ಹನುಮಂತಯ್ಯ ಭಾಗ್ಯಮ್ಮ ನಾರಾಯಣಗೌಡ ಬಸವರಾಜು ದರ್ಶನ್ ಗೌಡ ರವೀಶ್ ಶಿವಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.