ADVERTISEMENT

ಬಿಸಿಲ ಧಗೆ, ಕುಡಿಯುವ ನೀರಿಗೆ ಬೇಡಿಕೆ: 24 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ

ರಿಂಗ್‌ ರಸ್ತೆ ಸುತ್ತ ತೊಂದರೆ

ಕೆ.ಓಂಕಾರ ಮೂರ್ತಿ
Published 30 ಮಾರ್ಚ್ 2021, 5:02 IST
Last Updated 30 ಮಾರ್ಚ್ 2021, 5:02 IST
ವಾಣಿ ವಿಲಾಸ ನೀರು ಸರಬರಾಜು ಕೇಂದ್ರ
ವಾಣಿ ವಿಲಾಸ ನೀರು ಸರಬರಾಜು ಕೇಂದ್ರ   

ಮೈಸೂರು: ಬಿಸಿಲ ಧಗೆ ಹೆಚ್ಚುತ್ತಿದ್ದು, ಕುಡಿಯುವ ನೀರಿಗೆ ಬೇಡಿಕೆ ಇರುವ ನಗರದ ವಿವಿಧೆಡೆ 24 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.

ಮೈಸೂರು ಮಹಾನಗರ ಪಾಲಿಕೆಯು ವಾಣಿ ವಿಲಾಸ ನೀರು ಸರಬರಾಜು ಕೇಂದ್ರವು ಟೆಂಡರ್‌ ನೀಡಿ, ಟ್ಯಾಂಕರ್‌ಗಳಲ್ಲಿ 65 ವಾರ್ಡ್‌ಗಳಿಗೆ ನಿತ್ಯ 180 ಟ್ರಿಪ್‌ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುತ್ತಿದೆ.

ಪ್ರಮುಖವಾಗಿ ನರಸಿಂಹರಾಜ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಕೆಲ ಬಡಾವಣೆಗಳಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ವಿಜಯನಗರ 4ನೇ ಹಂತ ಸೇರಿದಂತೆ ಮುಡಾದ ವಿವಿಧ ಬಡಾವಣೆಗಳಲ್ಲಿ ನೀರಿಗೆ ತತ್ವಾರ ಉಂಟಾಗಿದೆ. ರಿಂಗ್‌ ರಸ್ತೆ ಸುತ್ತಲಿನ ಬಡಾವಣೆ, ಹಿನಕಲ್, ಬೋಗಾದಿ, ಆಲನಹಳ್ಳಿ, ರೈಲ್ವೆ ಬಡಾವಣೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ.

ADVERTISEMENT

‘ಕೊರತೆ ಉಂಟಾದ ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಎತ್ತರ ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಬೋರ್‌ವೆಲ್‌ ಹಾಕಿಸಲಾಗಿದೆ. ಅದರ ಜೊತೆಗೆ ಕಾವೇರಿ ನೀರು ಕೂಡ ಪೂರೈಸುತ್ತಿದ್ದೇವೆ’ ಎಂದು ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮೂಲದಲ್ಲಿ ಅಂದರೆ ನದಿಯಲ್ಲಿ ನೀರು ಕಡಿಮೆ ಆದರೆ ಅದಕ್ಕೂ ವ್ಯವಸ್ಥೆ ಇದೆ. ಮೇಗಳಾಪುರದ ಬಳಿ ಮರಳು ಚೀಲಗಳನ್ನು ಹಾಕಿ ನೀರು ಹೆಚ್ಚು ಸಂಗ್ರಹವಾಗುವಂತೆ ಮಾಡಬಹುದು. ಇದರಿಂದ ನೀರು ಮೇಲೆತ್ತಲು ಸುಲಭವಾಗಲಿದೆ. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಈ ಪ್ರಕ್ರಿಯೆ ನಡೆಸುತ್ತೇವೆ. ಈ ಬಾರಿಯೂ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ಮುಂದಿನ ಎರಡು ತಿಂಗಳು ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದ್ದು, ನೀರಿಗೆ ಮತ್ತಷ್ಟು ಬೇಡಿಕೆ ಉಂಟಾಗಲಿದೆ. ನಗರ ವ್ಯಾಪ್ತಿಗೆ ಹೆಚ್ಚುವರಿಯಾಗಿ 40 ಎಂಎಲ್‌ಡಿ ನೀರಿನ ಅಗತ್ಯವಿದೆ. ಮುಡಾದಿಂದ ಪಾಲಿಕೆಗೆ ಹಸ್ತಾಂತರವಾಗಿರುವ ಬಡಾವಣೆಗಳಿಗೆ ಹೆಚ್ಚುವರಿಯಾಗಿ 27 ಎಂಎಲ್‌ಡಿ ನೀರು ಬೇಕಿದೆ. ‘ಅಮೃತ್‌’ ಸೇರಿದಂತೆ ಹಲವು ಯೋಜನೆಗಳು ಕೊನೆಯ ಹಂತದಲ್ಲಿದ್ದು, ಪೂರ್ಣಗೊಂಡರೆ ಹೆಚ್ಚುವರಿ ನೀರು ಸಿಗಲಿದೆ ಎಂದು ಅಂದಾಜಿಸಲಾಗಿದೆ.

‘ಬೇಸಿಗೆ ಕಾರಣ ನೀರಿನ ಬಳಕೆ ಹೆಚ್ಚಿದೆ. ಆದರೆ, ಹಿಂದಿನ ದಿನಗಳಂತೆಯೇ ನೀರು ಪೂರೈಕೆ ಮಾಡುತ್ತಿದ್ದೇವೆ. ಅಗತ್ಯವಿದ್ದ ಕಡೆ ಟ್ಯಾಂಕರ್‌ನಲ್ಲಿ ಪೂರೈಸುತ್ತಿದ್ದೇವೆ’ ಎಂದು ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಕಾರ್ಯಪಾಲಕ ಎಂಜಿನಿಯರ್‌ ಸುವರ್ಣಾ ಹೇಳಿದರು.

ವಾರಕ್ಕೊಮ್ಮೆ ಟ್ಯಾಂಕರ್‌ ನೀರು: ‘ಮುಡಾದಿಂದ ವಾರಕ್ಕೊಮ್ಮೆ ನಮ್ಮ ಬಡಾವಣೆಯ ಪ್ರತಿ ಮನೆಗೆ ಟ್ಯಾಂಕರ್‌ನಲ್ಲಿ ಉಚಿತವಾಗಿ ನೀರು ಪೂರೈಸಲಾಗುತ್ತಿದೆ. ಅದನ್ನು ನಾವು ಸಂಪಿನಲ್ಲಿ ಸಂಗ್ರಹಿಸಿಟ್ಟುಕೊಂಡು ಜೋಪಾನದಿಂದ ಬಳಸುತ್ತಿದ್ದೇವೆ. ಈ ಭಾಗದಲ್ಲಿ ಬೋರ್‌ವೆಲ್‌ ಕೊರೆದರೂ ನೀರು ಬರುತ್ತಿಲ್ಲ’ ಎಂದು ಆರ್‌.ಟಿ.ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಾಜೇಶ್‌ ಹೇಳುತ್ತಾರೆ.

ಕೊನೆಯ ಹಂತದಲ್ಲಿ ಅಮೃತ್‌ ಯೋಜನೆ: ‘ಅಮೃತ್‌ ಯೋಜನೆಯಡಿ ನಗರಕ್ಕೆ ಹೆಚ್ಚುವರಿಯಾಗಿ 30 ಎಲ್‌ಎಲ್‌ಡಿ ನೀರು ಲಭ್ಯವಾಗಲಿದ್ದು, ನಗರದ ಕೆಲವೆಡೆ ತಲೆದೋರಿರುವ ಕುಡಿಯುವ ನೀರಿನ ಅಭಾವ ತಗ್ಗುವ ನಿರೀಕ್ಷೆ ಇದೆ. ಈ ಯೋಜನೆ ಕೊನೆ ಹಂತದಲ್ಲಿದೆ’ ಎಂದು ಶಿಲ್ಪಾನಾಗ್‌ ಹೇಳಿದರು. ‌

ಕೇಂದ್ರ ಪುರಸ್ಕೃತ ಅಮೃತ್‌ (ಅಟಲ್‌ ನಗರ ನವೀಕರಣ ಹಾಗೂ ಪುನರುಜ್ಜೀವನ) ಯೋಜನೆಯಡಿ ಮೇಗಳಾಪುರ 4ನೇ ಹಂತದಲ್ಲಿ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಅನುಷ್ಠಾನ ಈಗಾಗಲೇ ವಿಳಂಬವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.