ADVERTISEMENT

ಪಾರ್ಕ್‌ನಲ್ಲಿ ಹೆರಿಗೆ: ನೆರವಿಗೆ ಬಂದ ಶಿಕ್ಷಕಿಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 21:40 IST
Last Updated 9 ಮಾರ್ಚ್ 2021, 21:40 IST
ಮೈಸೂರಿನ ಪೀಪಲ್ಸ್‌ ಪಾರ್ಕ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಲ್ಲಿಗೆ
ಮೈಸೂರಿನ ಪೀಪಲ್ಸ್‌ ಪಾರ್ಕ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಲ್ಲಿಗೆ   

ಮೈಸೂರು: ಕೊಡಗಿನ ಬುಡಕಟ್ಟು ಸಮುದಾಯದ ಮಲ್ಲಿಗೆ ಎಂಬುವವರು, ನಗರದ ಪೀಪಲ್ಸ್‌ ಪಾರ್ಕ್‌ನಲ್ಲಿ ಮಂಗಳವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸಹಜ ಹೆರಿಗೆಯಾಗಿದ್ದು, ಈ ಸಂದರ್ಭದಲ್ಲಿ ನೆರವಿಗೆ ಧಾವಿಸಿದ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾಕುಮಾರಿ ಅವರ ಕಾಳಜಿಗೆ ಶ್ಲಾಘನೆ ವ್ಯಕ್ತವಾಗಿದೆ.

ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಬಳಿಯ ಅರವತ್ತಕ್ಕೊಲುವಿನ ಮನೆಯೊಂದರಲ್ಲಿ ತನ್ನ ತಾಯಿಯೊಂದಿಗೆ ಕೆಲಸ ಮಾಡಿಕೊಂಡಿದ್ದ ಮಲ್ಲಿಗೆ, ಸ್ಕ್ಯಾನಿಂಗ್‌ ಮಾಡಿಸಲಿಕ್ಕಾಗಿ ಮಂಗಳವಾರ ಬೆಳಿಗ್ಗೆ ಮೈಸೂರಿಗೆ ಬಂದಿದ್ದರು. ಬಸ್‌ ಇಳಿದು, ನಡೆದು ಹೋಗುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಸಮೀಪದಲ್ಲಿದ್ದ ಪೀಪಲ್ಸ್‌ ಪಾರ್ಕ್‌ಗೆ ಹೋಗಿ, ಒಂದೆಡೆ ಕುಳಿತಿದ್ದಾರೆ. ನೋವು ಹೆಚ್ಚಾಗಿ, ನರಳಾಡುತ್ತಿರುವಾಗ ಸುತ್ತಮುತ್ತಲಿನ ಜನ ಜಮಾಯಿಸಿದ್ದಾರೆ.

ADVERTISEMENT

ಇದೇ ಮಾರ್ಗವಾಗಿ, ಕರ್ತವ್ಯಕ್ಕೆ ತೆರಳುತ್ತಿದ್ದ ನಂಜನಗೂಡು ತಾಲ್ಲೂಕು ನವಿಲೂರು ಗ್ರಾಮದ ಸರ್ಕಾರಿ ಶಾಲೆ‌ಯ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾಕುಮಾರಿ, ಜನ ನೆರೆದಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಮಹಿಳೆಯ ನೆರವಿಗೆ ತೆರಳಿದ್ದಾರೆ. ಇದರೊಂದಿಗೆ, ಸ್ಥಳದಲ್ಲಿದ್ದವರೊಬ್ಬರು ಮೊಬೈಲ್‌ ಮೂಲಕ ವೈದ್ಯರನ್ನು ಸಂಪರ್ಕಿಸಿ ವಿಷಯ ಮುಟ್ಟಿಸಿದ್ದಾರೆ. ವೈದ್ಯರು ಮೊಬೈಲ್‌ನಲ್ಲಿ ನೀಡಿದ ಸೂಚನೆಯಂತೆ ಶೋಭಾಕುಮಾರಿ ಮಹಿಳೆಯ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಯಿಯ ಗರ್ಭದಿಂದ ಹೊರ ಬಂದ ಮಗುವಿನ ಹೊಕ್ಕುಳ ಬಳ್ಳಿಯನ್ನು ಸಕಾಲಕ್ಕೆ ಕತ್ತರಿಸಲಾಗದೇ ಶಿಕ್ಷಕಿ ಪರದಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಮಗುವಿನ ಹೊಕ್ಕುಳ ಬಳ್ಳಿ ತನ್ನಿಂದ ತಾನೇ ತಾಯಿಯ ಗರ್ಭದಿಂದ ಬೇರ್ಪಟ್ಟಿದೆ. ಆಂಬುಲೆನ್ಸ್‌ ಬಂದ ಬಳಿಕ ತಾಯಿ–ಮಗು ಇಬ್ಬರನ್ನೂ ಚೆಲುವಾಂಬಾ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಆರ್‌ಎಂಒ ಡಾ.ರಾಜೇಂದ್ರ ತಿಳಿಸಿದ್ದಾರೆ.

ಮಲ್ಲಿಗೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ (ಗಂಡು–ಹೆಣ್ಣು). ಹೆರಿಗೆಯಾಗಿರುವ ವಿಷಯ ತಿಳಿದ ಈಕೆಯ ಸಂಬಂಧಿಕರು ಆಸ್ಪತ್ರೆಗೆ ಬಂದಿದ್ದು, ಆರೈಕೆಯಲ್ಲಿ ನಿರತರಾಗಿದ್ದಾರೆ.

ಶಿಕ್ಷಕಿಯ ಮಾನವೀಯ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಿಕ್ಷಕರ ಸಂಘದವರು ಶೋಭಾಕುಮಾರಿಯನ್ನು ಅಭಿನಂದಿಸಿದ್ದಾರೆ. ಇದರೊಂದಿಗೆ, ಚೆಲುವಾಂಬಾ ಆಸ್ಪತ್ರೆಗೆ ತೆರಳಿದ ಶಿಕ್ಷಕರು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಮಹಿಳೆಗೆ ₹ 5 ಸಾವಿರ ನಗದು ನೀಡಿ, ನೆರವಾಗಿದ್ದಾರೆ.

*
ಮಹಿಳೆಯು ಹೆರಿಗೆ ನೋವಿನಿಂದ ನರಳಾಡುವಾಗ ಸ್ಥಳದಲ್ಲಿದ್ದ ಕೆಲವು ಮಹಿಳೆಯರು ನೆರವಿಗೆ ಮುಂದಾಗದೇ ಇದ್ದುದು ಮನಸ್ಸಿಗೆ ನೋವಾಯಿತು.
-ಶೋಭಾಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕಿ

*
ಪತಿ ನನ್ನಿಂದ ದೂರವಾಗಿದ್ದಾರೆ. ಕೆಲಸ ಮಾಡಿಕೊಂಡು ಮಕ್ಕಳಿಬ್ಬರನ್ನು ಸಾಕುತ್ತಿರುವೆ.
-ಮಲ್ಲಿಗೆ, ಬಾಣಂತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.