ADVERTISEMENT

ನಮ್ಮ ಊರಿಗೆ ಕಳುಹಿಸಿಕೊಡಿ: ವಲಸೆ ಕಾರ್ಮಿಕರ ಆಗ್ರಹ

ಕಾಲ್ನಡಿಗೆಯಲ್ಲೇ 15 ಕಿ.ಮೀ ನಡೆದು ಅಹವಾಲು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 5 ಮೇ 2020, 15:34 IST
Last Updated 5 ಮೇ 2020, 15:34 IST
ನಂಜನಗೂಡು ತಾಲ್ಲೂಕಿನ ಅಳಗಂಚಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಂದಿದ್ದ ಉತ್ತರ ಭಾರತದ ಕಾರ್ಮಿಕರು ವಾಪಸ್ ತಮ್ಮ ರಾಜ್ಯಕ್ಕೆ ತೆರಳಲು ಅಗತ್ಯ ಸಾರಿಗೆ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ ಕೆ.ಎಂ.ಮಹೇಶ್‍ಕುಮಾರ್ ಅವರಿಗೆ ಮಂಗಳವಾರ ಮನವಿ ಮಾಡಿದರು
ನಂಜನಗೂಡು ತಾಲ್ಲೂಕಿನ ಅಳಗಂಚಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಂದಿದ್ದ ಉತ್ತರ ಭಾರತದ ಕಾರ್ಮಿಕರು ವಾಪಸ್ ತಮ್ಮ ರಾಜ್ಯಕ್ಕೆ ತೆರಳಲು ಅಗತ್ಯ ಸಾರಿಗೆ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ ಕೆ.ಎಂ.ಮಹೇಶ್‍ಕುಮಾರ್ ಅವರಿಗೆ ಮಂಗಳವಾರ ಮನವಿ ಮಾಡಿದರು   

ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆಂದು ಬಂದಿದ್ದ ಉತ್ತರಪ್ರದೇಶ ಹಾಗೂ ಬಿಹಾರದ 300ಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ವಾಪಸ್‍ ತಮ್ಮ ರಾಜ್ಯಕ್ಕೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಮಂಗಳವಾರ ತಾಲ್ಲೂಕು ಕಚೇರಿಗೆ ಬಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಅಳಗಂಚಿಯಿಂದ ಕಾಲ್ನಡಿಗೆಯಲ್ಲಿ ನಗರಕ್ಕೆ ಬಂದ ಕಾರ್ಮಿಕರು, ತಾಲ್ಲೂಕು ಕಚೇರಿ ಮುಂಭಾಗ ಸೇರಿ ತಹಶೀಲ್ದಾರ್ ಮುಂದೆ ತಮ್ಮ ಅಹವಾಲು ಹೇಳಿಕೊಂಡರು.

ಕಾರ್ಖಾನೆ ಆವರಣದಲ್ಲಿ ಹೆಚ್ಚುವರಿ ಮದ್ಯಸಾರ ಘಟಕ ಕಟ್ಟಡ ನಿರ್ಮಾಣಕ್ಕಾಗಿ, ಬಿಹಾರ ಹಾಗೂ ಉತ್ತರಪ್ರದೇಶದಿಂದ ಕೂಲಿ ಕಾರ್ಮಿಕರನ್ನು ಗುತ್ತಿಗೆದಾರರು ಕರೆತಂದಿದ್ದರು. ಕಾರ್ಮಿಕರಿಗೆ ಕಾರ್ಖಾನೆ ಆವರಣದಲ್ಲಿಯೇ ತಾತ್ಕಾಲಿಕ ಶೆಡ್‍ಗಳ ಮೂಲಕ ವಸತಿ ಸೌಕರ್ಯ ಕಲ್ಪಿಸಿಕೊಡಲಾಗಿತ್ತು. ಆದರೆ, ಇದೀಗ ಕೊರೊನಾ ಸಂಕಷ್ಟದಿಂದಾಗಿ ಬಹುತೇಕ ಎಲ್ಲ ಕಾರ್ಮಿಕರೂ ವಾಪಸ್‍ ಊರಿಗೆ ಮರಳಲು ಇಚ್ಛಿಸಿದ್ದಾರೆ. ಸಾರಿಗೆ ಸೌಲಭ್ಯವಿಲ್ಲದಿರುವುದರಿಂದ ತೊಡಕಾಗುತ್ತಿದೆ. ಹೀಗಾಗಿ, ತಾಲ್ಲೂಕು ಆಡಳಿತದ ಅಧಿಕಾರಿಗಳು ಕಾರ್ಮಿಕರು ವಾಪಸ್‍ ಊರಿಗೆ ತೆರಳಲು ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಹವಾಲು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕೆ.ಎಂ.ಮಹೇಶ್‍ಕುಮಾರ್, ಕಾರ್ಮಿಕರ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಂತರರಾಜ್ಯಕ್ಕೆ ತೆರಳುವವರು ಕಡ್ಡಾಯವಾಗಿ ‘ಸೇವಾ ಸಿಂಧು’ ತಂತ್ರಾಂಶದ ಮೂಲಕ ತಮ್ಮ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕಿದ್ದು, ಈ ಸಂಬಂಧ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ವಲಸೆ ಕಾರ್ಮಿಕರ ವಿವರವನ್ನು ನೋಂದಾಯಿಸಲು ಒಪ್ಪಿದ್ದಾರೆ. ಇನ್ನು 2 ದಿನಗಳ ಕಾಲಾವಧಿಯಲ್ಲಿ ವಾಪಸ್ ಅವರ ರಾಜ್ಯಕ್ಕೆ ತೆರಳಲು ಅಗತ್ಯ ಸಾರಿಗೆ ಸೌಕರ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.