ಮೈಸೂರು: ‘ಏಡ್ಸ್ ರೋಗ ನಿಯಂತ್ರಿಸಲು ಸಾಧ್ಯವಿದ್ದು, ಪ್ರತಿಯೊಬ್ಬರಿಗೂ ಇದರ ಬಗ್ಗೆ ತಿಳವಳಿಕೆ ಅಗತ್ಯ’ ಎಂದು ಡಿಎಚ್‌ಒ ಡಾ. ಪಿ.ಸಿ.ಕುಮಾರಸ್ವಾಮಿ ಹೇಳಿದರು.
ನಗರದ ಎನ್‌ಪಿಸಿ ಆಸ್ಪತ್ರೆಯ ವೈದ್ಯರ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸರ್ಕಾರಿ ಶುಷ್ರೂಷಕರ ಕಾಲೇಜು, ಎಂಎಂಸಿಆರ್‌ಐ, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ, ಆಶಾಕಿರಣ ಆನಂದ ಜ್ಯೋತಿ ಪಾಸಿಟಿವ್ ನೆಟ್‌ವರ್ಕ್, ಆಶೋದಯ ಸಮಿತಿ, ಎಸ್.ವಿ.ವೈ.ಎಂ. ಗಾರ್ಡ್, ಸಿ.ಆರ್.ಡಿ.ಎಸ್ ಸಹಯೋಗದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಚ್‌ಐವಿ ಸೋಂಕು ತಡೆಗಟ್ಟಲು ಜನಸಾಮಾನ್ಯರಲ್ಲಿ ಸೂಕ್ತ ಅರಿವು ಮೂಡಿಸುವುದಕ್ಕಾಗಿ ಹಾಗೂ ಇದನ್ನು ಎದುರಿಸಲು ನಮ್ಮ ಮುಂದಿರುವ ಸವಾಲುಗಳು ಬಗ್ಗೆ ಚಿಂತಿಸುವ ದಿನ ಇದಾಗಿದೆ. ಈ ರೋಗದ ಕುರಿತು ಸರಿಯಾದ ಮಾಹಿತಿ ತಿಳಿದುಕೊಂಡಲ್ಲಿ ಎಚ್‌ಐವಿ ಸೋಂಕು ಕಡಿಮೆ ಮಾಡಬಹುದು’ ಎಂದರು.
‘ಜಿಲ್ಲೆಯಲ್ಲಿ ಎಚ್ಐವಿ ನಿಯಂತ್ರಣದ ಸಲುವಾಗಿ ಎಲ್ಲ ಸಮುದಾಯಗಳಿಗೆ ಹಾಗೂ ಯುವ ಪೀಳಿಗೆಗೆ ನಿರಂತರವಾಗಿ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ. ಇಂದಿನ ಯುವ ಜನಾಂಗ ಏಡ್ಸ್‌ನಂತಹ ಭೀಕರ ಕಾಯಿಲೆಗೆ ತುತ್ತಾಗುತ್ತಿರುವುದು ಕಳವಳಕಾರಿ ಸಂಗತಿ. ಯುವಕರು ತಮ್ಮ ಜೀವನ ಹಾಳು ಮಾಡಿಕೊಳ್ಳದೆ ದೇಹ ಮತ್ತು ಮನಸು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ರಾಜ್ಯದ ಸಾಮಾನ್ಯ ಜನರಲ್ಲಿ 10 ವರ್ಷಗಳ ಹಿಂದೆ (2013–14) ಶೇ 1.77 ಇದ್ದ ಎಚ್‌ಐವಿ ಸೋಂಕಿನ ಪ್ರಮಾಣ 2024–25ರ ಅಕ್ಟೋಬರ್ ಅಂತ್ಯಕ್ಕೆ ಶೇ 0.33ಕ್ಕೆ ಇಳಿಕೆಯಾಗಿದೆ. ಇದು ಶೂನ್ಯಕ್ಕೆ ದಾಖಲಾಗಬೇಕು’ ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಎಂ.ಎಸ್.ಜಯಂತ್ ಮಾತನಾಡಿ, ‘ಏಡ್ಸ್‌ಗೆ ಚಿಕಿತ್ಸೆ ಸಾಧ್ಯ. ಆದರೆ ಸಂಪೂರ್ಣ ಗುಣಮುಖರಾಗಲು ಅಸಾಧ್ಯ. ಈ ಕಾರಣದಿಂದ ರೋಗಕ್ಕೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಏಡ್ಸ್ ಕುರಿತು ಅರಿವು ಹೊಂದಬೇಕು. ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಆಶಾಕಿರಣ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸ್ವಾಮಿ ಮಾತನಾಡಿದರು. ಐಎಂಎ ಅಧ್ಯಕ್ಷ ಪರಮೇಶ್ವರ ನಾಯಕ್, ಸರ್ಕಾರಿ ಶುಶ್ರೂಷ ಕಾಲೇಜಿನ ಪ್ರಾಂಶುಪಾಲ ಪಿ.ನಂದಪ್ರಕಾಶ್, ಜೀವಧಾರ ಲಯನ್ಸ್ ಬ್ಲಡ್ ಸೆಂಟರ್ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಇ.ಗಿರೀಶ್ ಭಾಗವಹಿಸಿದ್ದರು.
ಜಾಗೃತಿ ಜಾಥಾಕ್ಕೆ ಚಾಲನೆ
ವಿಶ್ವ ಏಡ್ಸ್ ದಿನದ ಅಂಗವಾಗಿ ಭಾನುವಾರ ಬೆಳಿಗ್ಗೆ 9ಕ್ಕೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜಾಗೃತಿ ಜಾಥಾ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ಚಾಲನೆ ಮಾತನಾಡಿ ‘ಏಡ್ಸ್ ರೋಗ ಕೊನೆಗಾಣಿಸುವುದರೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕು. ಎಚ್‌ಐವಿ ಸೋಂಕಿತ ವ್ಯಕ್ತಿಗಳಿಗೆ ಪೂರಕ ವಾತಾವರಣ ಕಲ್ಪಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.