ಮೈಸೂರು: ‘ವೈದ್ಯ ವೃತ್ತಿ ಶ್ರೇಷ್ಠವಾಗಿದ್ದು, ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ನಗರದ ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಶನಿವಾರ ನಡೆದ ವಿಶ್ವ ವೈದ್ಯರ ದಿನ ಹಾಗೂ ಸಾಧಕ ವೈದ್ಯರಿಗೆ ‘ವೈದ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ವೈದ್ಯಕೀಯ ವೃತ್ತಿಯಲ್ಲಿ ಸೇವೆಯ ಜೊತೆಗೆ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು. ಸಾರ್ವಜನಿಕರು ಸ್ವಸ್ಥ ಹಾಗೂ ಆರೋಗ್ಯ ಪೂರ್ಣ ಜೀವನ ನಡೆಸುವಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದೆ. ರೋಗಿಗಳ ಜತೆಗೆ ಸಮಾಧಾನದಿಂದ ವರ್ತಿಸುತ್ತ ಔಷಧ ನೀಡಿ ಜೀವನದಲ್ಲಿ ಭರವಸೆ ತುಂಬುತ್ತಾರೆ. ಯೋಗಕ್ಷೇಮ ಖಾತರಿಪಡಿಸುವಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸುತ್ತಾರೆ’ ಎಂದು ಶ್ಲಾಘಿಸಿದರು.
‘ಸಮಾಜದಲ್ಲಿನ ವೈದ್ಯರ ಸೇವಾ ಮನೋಭಾವ ಮನಗಂಡು ಅನ್ವೇಷಣಾ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಸ್ಥೆಯ ಸೇವಾ ಕಾರ್ಯ ಹೀಗೇ ಮುಂದುವರಿಯಲಿ’ ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ ಮಾತನಾಡಿ, ‘ಹೆಸರಾಂತ ವೈದ್ಯ ಬಿ.ಸಿ.ರಾಯ್ ಅವರ ಸ್ಮರಣಾರ್ಥ ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದ ಕೊಡುಗೆ ಗುರುತಿಸಲು, ಸಾಧನೆ ತೋರಿದ ವೈದ್ಯರ ಸ್ಮರಿಸಲು ಈ ದಿನ ಸೂಕ್ತವಾಗಿದೆ’ ಎಂದರು.
‘ಪ್ರಶಸ್ತಿ ಪಡೆದ ವೈದ್ಯರಿಗೆ ಜವಾಬ್ದಾರಿ ಹೆಚ್ಚಿದೆ. ಇದನ್ನು ನಿಭಾಯಿಸಲು ಸೇವೆಯಲ್ಲಿ ತೊಡಗಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ವಿಶ್ರಾಂತ ಡೀನ್ ಡಾ.ಎಚ್.ಹನುಮಂತಪ್ಪ ಮಾತನಾಡಿ, ‘ನಂಬಿಕೆಯೇ ದೇವರು. ವೈದ್ಯರಲ್ಲಿ ನಂಬಿಕೆ ಇಡಬೇಕು. ಇಲ್ಲದಿದ್ದರೆ ಅವರ ಬಳಿ ಹೋಗಬಾರದು. ಇಂದು ವೈದ್ಯರು ಬರೆದುಕೊಟ್ಟ ಔಷಧಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿ ನೋಡುವ ಮನೋಭಾವ ಬೆಳೆಯುತ್ತಿದೆ. ಇದು ಸರಿಯಲ್ಲ. ಎಲ್ಲ ಔಷಧಗಳಲ್ಲಿಯೂ ಸೈಡ್ ಎಫೆಕ್ಟ್ ಇರುತ್ತದೆ. ನಕಾರಾತ್ಮಕ ಆಲೋಚನೆ ಬಿಡಬೇಕು. ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.
ಸಮಾರಂಭದಲ್ಲಿ ಡಾ.ಬಿ.ಸಿ.ರಾಯ್ ಭಾವಚಿತ್ರಕ್ಕೆ ಅನ್ವೇಷಣಾ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಅರ್ಯ ಅಮರ್‌ನಾಥರಾಜೇ ಅರಸ್ ಪುಷ್ಪನಮನ ಸಲ್ಲಿಸಿದರು.
ಸಿಗ್ಮಾ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಾದಪ್ಪ, ಜಯದೇವ ಹೃದ್ರೋಗ ಸಂಸ್ಥೆ ವೈದ್ಯಾಧಿಕಾರಿ ಡಾ.ಹರ್ಷ ಬಸಪ್ಪ, ಜೆಎಸ್‌ಎಸ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಿ.ಪಿ.ಮಧು, ಎ.ಕಾಮಾಕ್ಷಿ ಆಸ್ಪತ್ರೆ ಮೆಡಿಸನ್ ವಿಭಾಗದ ಮುಖ್ಯಸ್ಥ ಡಾ.ಎಸ್.ರವಿಶಂಕರ್, ಜೆಎಸ್‌ಎಸ್ ಆಸ್ಪತ್ರೆ ಸ್ತ್ರಿರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎಸ್.ಜಯಶ್ರೀ, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸಂದೀಪ್ ಅವರಿಗೆ ‘ವೈದ್ಯಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ, ಎಂ.ಜಿ.ಆರ್.ಅರಸ್, ಎಚ್.ಎಂ.ಟಿ.ಲಿಂಗರಾಜೇ ಅರಸ್, ಲಿಂಗರಾಜು ಭಾಗವಹಿಸಿದ್ದರು.
ಆರೋಗ್ಯ ಪೂರ್ಣ ಜೀವನದಲ್ಲಿ ವೈದ್ಯರ ಪಾತ್ರ ಪ್ರಮುಖ ಪ್ರಶಸ್ತಿ ಪಡೆದ ವೈದ್ಯರಿಗೆ ಜವಾಬ್ದಾರಿ ಹೆಚ್ಚಿದೆ ಗೂಗಲ್‌ನಲ್ಲಿ ಔಷಧ ಸರ್ಚ್ ಮಾಡುವ ಮನೋಭಾವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.