ADVERTISEMENT

ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿಗರಿಗೆ ಹೂ ನೀಡಿದ ರಾಜವಂಶಸ್ಥ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 2:49 IST
Last Updated 28 ಸೆಪ್ಟೆಂಬರ್ 2021, 2:49 IST
ಮೈಸೂರು ಟ್ರಾವೆಲ್‌ ಅಸೋಸಿಯೇಷನ್‌, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್‌ ಮಾಲೀಕರ ಸಂಘವು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಅರಮನೆಯ ವರಹಾ ದ್ವಾರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೂ ನೀಡುವ ಮೂಲಕ ಪ್ರವಾಸಿಗರನ್ನು ಸೋಮವಾರ ಸ್ವಾಗತಿಸಿದರು
ಮೈಸೂರು ಟ್ರಾವೆಲ್‌ ಅಸೋಸಿಯೇಷನ್‌, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್‌ ಮಾಲೀಕರ ಸಂಘವು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಅರಮನೆಯ ವರಹಾ ದ್ವಾರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೂ ನೀಡುವ ಮೂಲಕ ಪ್ರವಾಸಿಗರನ್ನು ಸೋಮವಾರ ಸ್ವಾಗತಿಸಿದರು   

ಮೈಸೂರು: ಇಲ್ಲಿನ ಅರಮನೆಗೆ ಸೋಮವಾರ ಬಂದ ಪ್ರವಾಸಿಗರಿಗೆ ಅಚ್ಚರಿ ಕಾದಿತ್ತು. ಬಾಗಿಲಿನಲ್ಲೇ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೂ ನೀಡುವ ಮೂಲಕ ಬರಮಾಡಿಕೊಂಡರು. ಅಪರೂಪದ ಈ ಕ್ಷಣವನ್ನು ಹಲವು ಪ್ರವಾಸಿಗರು ಸಂಭ್ರಮಿಸಿದರು.

ಮೈಸೂರು ಟ್ರಾವೆಲ್‌ ಅಸೋಸಿಯೇಷನ್‌, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್‌ ಮಾಲೀಕರ ಸಂಘವು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಅರಮನೆಯ ವರಹಾ ದ್ವಾರದಲ್ಲಿ ಈ ಕಾರ್ಯಕ್ರಮ ಏರ್ಪಡಿಸಿತ್ತು. ಅರಮನೆಗೆ ಬಂದವರಿಗೆ ಹೂ ನೀಡಿ ಸ್ವಾಗತಿಸಿದ್ದು ಮಾತ್ರವಲ್ಲ, ಸಿಹಿಯನ್ನೂ ಹಂಚಲಾಯಿತು.

ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ‘ಸಿಂಹಾಸನವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಬೇಕೋ ಬೇಡವೊ, ಅರಮನೆಯಲ್ಲಿ ಜಟ್ಟಿ ಕಾಳಗ ನಡೆಸಬೇಕೋ ಬೇಡವೊ ಎಂಬ ವಿಚಾರವನ್ನು ಅರಮನೆ ಕಚೇರಿ ಮಾಹಿತಿ ನೀಡಲಿದೆ’ ಎಂದರು.

ADVERTISEMENT

ಹೋಟೆಲ್ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾರಾಯಣಗೌಡ ಪ್ರತಿಕ್ರಿಯಿಸಿ, ‘ಕೆಲದಿನಗಳಿಂದ ಪ್ರವಾಸಿಗರು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೋಟೆಲ್ ಉದ್ಯಮ ಚೇತರಿಕೆಗೆ ಇನ್ನಷ್ಟು ಕಾಲ ಬೇಕು’ ಎಂದು ಹೇಳಿದರು.

ಮೈಸೂರು ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ಜಯಕುಮಾರ್ ಮಾತನಾಡಿ, ‘ಬಹಳಷ್ಟು ಮಂದಿ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದಾರೆ. ಹೀಗಾಗಿ, ಜಂಬೂಸವಾರಿ ಬನ್ನಿಮಂಟಪದವರೆಗೂ ಹೋಗಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.