ADVERTISEMENT

ಮೈಸೂರು | ದುಡಿಯುವ ವರ್ಗದ ಆಸ್ತಿ ಶ್ರೀಮಂತರ ಪಾಲು: ಸಾತಿ ಸುಂದರೇಶ್‌

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 5:24 IST
Last Updated 23 ಡಿಸೆಂಬರ್ 2025, 5:24 IST
ಮೈಸೂರಿನ ಗಾಂಧಿ ವೃತ್ತದ ಬಳಿ ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಮೆರವಣಿಗೆ ನಡೆಸಿದರು ಪ್ರಜಾವಾಣಿ ಚಿತ್ರ
ಮೈಸೂರಿನ ಗಾಂಧಿ ವೃತ್ತದ ಬಳಿ ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಮೆರವಣಿಗೆ ನಡೆಸಿದರು ಪ್ರಜಾವಾಣಿ ಚಿತ್ರ   

ಮೈಸೂರು: ‘ದುಡಿಯುವ ವರ್ಗದ ಆಸ್ತಿಯನ್ನು ಹಿಂದೆ ಬ್ರಿಟಿಷರು ದೋಚಿದರು, ಇಂದು ಬಿಜೆಪಿ ಅಂಬಾನಿ, ಅದಾನಿಗೆ ಧಾರೆಯೆರೆಯುತ್ತಿದೆ. ಜನರನ್ನು ಕಾರ್ಪೊರೇಟ್‌ ಕಂಪನಿಗಳ ಜೀತದಾಳುಗಳನ್ನಾಗಿ ಮಾಡುವ ಕಾಯ್ದೆ ಜಾರಿಯಾಗುತ್ತಿವೆ. ಹೀಗಾಗಿ ಪಕ್ಷವು ಅಸಮಾನತೆ ವಿರುದ್ಧ ಹೋರಾಡಬೇಕಿದೆ’ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ)ದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ತಿಳಿಸಿದರು.

ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಶ್ರಮ ಶಕ್ತಿಯ ಸಂಘರ್ಷ ಶತಮಾನದ ಪಯಣ’ ಮೆರವಣಿಗೆಯ ಬಳಿಕ ಗಾಂಧಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ಸಮತಾ ರಾಜ್ಯದ ಕನಸು ಹೊಂದಿದ್ದ ನಾಯಕರು ಭಾರತದಲ್ಲಿ ನೂರು ವರ್ಷದ ಹಿಂದೆ ಸಿಪಿಐ ಪಕ್ಷ ಕಟ್ಟಿದರು. ಎಲ್ಲರಿಗೂ ಸಮಾನ ಅವಕಾಶ, ಭೂಮಿ, ಉದ್ಯೋಗ, ಶಿಕ್ಷಣ ಇರಬೇಕು. ದುಡಿಯುವ ಜನರ ಕೈಯಲ್ಲಿ ಉದ್ಯೋಗ ಇರಬೇಕು ಎಂಬ ಆಶಯ ಹೊಂದಿದ್ದರು. ರಷ್ಯಾದಲ್ಲಿ ಈ ಕನಸು ನನಸಾಗಿತ್ತು. ಆದರೆ ಭಾರತದಲ್ಲಿ ಆರಂಭದಿಂದಲೇ ಅನೇಕ ಸವಾಲು ಎದುರಿಸಬೇಕಾಯಿತು’ ಎಂದು ಮಾಹಿತಿ ನೀಡಿದರು.

ADVERTISEMENT

‘ಪಕ್ಷವು ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುತ್ತದೆ ಎಂಬುದನ್ನು ಮನಗಂಡ ಬ್ರಿಟಿಷರು, ಪಕ್ಷ ಸಂಘಟನೆ ಮಾಡುವ ಕಡೆ ನಮ್ಮ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದರು. ಪೇಷಾವರ್‌, ಲಾಹೂರ್‌, ಕಾನ್ಪುರ ಪಿತೂರಿ ಹೆಸರಿನಲ್ಲಿ ನಾಯಕರನ್ನು ಜೈಲಿಗಟ್ಟಿದರು. ಅಂತಹ ವಿರೋಧದ ನಡುವೆ ಪಕ್ಷ ಕಟ್ಟಿದ್ದೇವೆ. ಬ್ರಿಟಿಷರ ವಿರುದ್ಧವಷ್ಟೇ ಅಲ್ಲದೆ ದೇಶಿಯ ಭೂ ಮಾಲೀಕರು, ಸಮಾಜದಲ್ಲಿದ್ದ ಅಸ್ಪಶ್ಯತೆ, ಜಾತಿ ಪದ್ಧತಿ ವಿರುದ್ಧ ಹೋರಾಡಿ ಸಮಾಜ ಬದಲಾಯಿಸುವ ಸವಾಲು ಪಕ್ಷಕ್ಕಿತ್ತು. ಸ್ವಾತಂತ್ಯ ಸಂಗ್ರಾಮದಲ್ಲಿ ಪಕ್ಷದ ನೂರಾರು ಬಲಿದಾನದ ಕಥೆಗಳಿವೆ’ ಎಂದರು.

‘ಅದೇ ಸಮಯದಲ್ಲಿ ನಾಗ್ಪುರದಲ್ಲಿ ಆರ್‌ಎಸ್ಎಸ್‌ ಸಂಘಟನೆಯೂ ಆರಂಭವಾಗುತ್ತದೆ. ಆದರೆ ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರ್ಯಕರ್ತರ ಬಲಿದಾನ ಮಾಡಿಕೊಂಡಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ದೇಶಭಕ್ತರೆಂದರೆ ಸ್ವಾತಂತ್ರ್ಯಕ್ಕಾಗಿ ದುಡಿದವರನ್ನು ಕೊಲೆ ಮಾಡಿದವರೇ ಅಥವಾ ದೇಶಕ್ಕಾಗಿ ಬಲಿದಾನ ಮಾಡಿದವರೇ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಟೀಕಿಸಿದರು.

‘ಆರ್‌ಎಸ್‌ಎಸ್‌ ಬೆಂಬಲಿತ ಬಿಜೆಪಿ ಸರ್ಕಾರವು ದುಡಿಯುವ ಜನರ ಆಸ್ತಿಯನ್ನು ದುರುಪಯೋಗ ಮಾಡುತ್ತಿದೆ. ಜನರು ಈ ಸತ್ಯ ಅರಿತು ದ್ವೇಷ ಬಿತ್ತುವ ಬಿಜೆಪಿ ರಾಜಕಾರಣದ ಬದಲಾಗಿ, ಪ್ರೀತಿ ಹಂಚುವ ಕಮ್ಯುನಿಸ್ಟ್‌ ಸಿದ್ಧಾಂ‌ತ ಪಸರಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಮುಖಂಡ ಎಚ್‌.ಆರ್‌.ಶೇಷಾದ್ರಿ, ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಎಚ್‌.ಎಂ.ಸಂತೋಷ್‌, ಸೋಮರಾಜೇ ಅರಸ್‌, ಎಚ್‌.ಬಿ.ರಾಮಕೃಷ್ಣ, ಜಿಲ್ಲಾ ಕಾರ್ಯದರ್ಶಿ ಜಗದೀಶ್‌ ಸೂರ್ಯ, ಸಿಪಿಐಎಂಎಲ್‌ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ, ಎಸ್‌ಯುಸಿಐ ಕಾರ್ಯದರ್ಶಿ ರವಿ, ಚಿಂತಕ ನಾ.ದಿವಾಕರ್‌, ಎಐಟಿಯುಸಿ ಅಧ್ಯಕ್ಷ ಎನ್‌.ಕೆ.ದೇವದಾಸ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.