ಮೈಸೂರು: ಯುವ ಮನಸ್ಸುಗಳ ಸಂಭ್ರಮಕ್ಕೆ ವೇದಿಕೆಯಾಗುವ ‘ಯುವ ಸಂಭ್ರಮ’ ಕಾರ್ಯಕ್ರಮಕ್ಕೆ ಸೆ. 10ರಂದು ಚಾಲನೆ ದೊರೆಯಲಿದ್ದು, ಪ್ರತಿಭಾ ಪ್ರದರ್ಶನಕ್ಕೂ ವೇದಿಕೆ ಸಿಗಲಿದೆ.
ಪ್ರತಿ ವರ್ಷ ನಾಡ ಹಬ್ಬ ದಸರೆಗೆ ಮುನ್ನುಡಿಯಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಚಾಮರಾಜನಗರದಿಂದ ಬೀದರ್‌ವರೆಗೆ ರಾಜ್ಯದ ಎಲ್ಲ ಜಿಲ್ಲೆಯ ಕಾಲೇಜುಗಳು ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಈ ಬಾರಿ ಸೆ. 10ರಿಂದ 17ರವರೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಪ್ರತಿ ದಿನ ಸಂಜೆ ಕಾರ್ಯಕ್ರಮಗಳು ನಡೆಯಲಿವೆ.
ಯಾರು ಅತಿಥಿ: ಪ್ರತಿ ವರ್ಷ ಯುವ ಸಂಭ್ರಮದ ಉದ್ಘಾಟನೆಗೆ ಚಿತ್ರರಂಗದ ಖ್ಯಾತನಾಮರನ್ನು ಆಹ್ವಾನಿಸಿ ವೇದಿಕೆ ಕಳೆಗಟ್ಟುವಂತೆ ಮಾಡಲಾಗುತ್ತಿದೆ. ಅಂತೆಯೇ ಈ ವರ್ಷ ಸಹ ವಿಶೇಷ ಅತಿಥಿಗಳು ಇರಲಿದ್ದಾರೆ.
ಸದ್ಯ ಯುವಜನರ ಟ್ರೆಂಡಿಂಗ್ ಗೀತೆಯಾಗಿರುವ ‘ಬ್ಯಾಂಗಲ್ ಬಂಗಾರಿ’ ಹಾಡಿಗೆ ಹೆಜ್ಜೆ ಹಾಕಿರುವ ನಟ, ಡಾ. ರಾಜಕುಮಾರ್ ಕುಟುಂಬದ ಕುಡಿ ಯುವ ರಾಜಕುಮಾರ್ ಸೆ. 10ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜೊತೆಗೆ ಮೈಸೂರಿನವರೇ ಆದ ನಟಿ ಅಮೃತಾ ಅಯ್ಯಂಗಾರ್ ಸಹ ಭಾಗಿ ಆಗಲಿದ್ದಾರೆ.
ಹಲವು ನಿಬಂಧನೆ: ರಾಜ್ಯದ 20ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ತಂಡ
ಗಳು, ಪಿಯು– ಪದವಿ ಕಾಲೇಜು, ಐಟಿಐ, ವೈದ್ಯಕೀಯ, ಎಂಜಿನಿಯರಿಂಗ್, →ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲಿದ್ದಾರೆ. ಪ್ರತಿ ದಿನ ಸಂಜೆ 5ರಿಂದ ರಾತ್ರಿ 10ರವರೆಗೆ ಕಾರ್ಯಕ್ರಮ ನಡೆಯಲಿದೆ. ದಿನಕ್ಕೆ 40–50 ತಂಡದಂತೆ 350–400 ತಂಡಗಳು ಭಾಗಿಯಾಗುವ ನಿರೀಕ್ಷೆ ಇದೆ. ಇಲ್ಲಿ ಉತ್ತಮ ಪ್ರದರ್ಶನ ತೋರುವ ತಂಡಗಳು ಯುವ ದಸರಾದಲ್ಲಿ ಪ್ರದರ್ಶನ ನೀಡುವ ಅವಕಾಶವನ್ನೂ ಪಡೆಯಲಿವೆ. ಕಾರ್ಯಕ್ರಮ ಪ್ರದರ್ಶನಕ್ಕೆ ಹಲವು ನಿಬಂಧನೆಗಳನ್ನು ವಿಧಿಸಲಾಗಿದೆ. ಎಲ್ಲಿಯೂ ರಾಷ್ಟ್ರಗೀತೆ–ನಾಡಗೀತೆಯನ್ನು ಬಳಸುವಂತೆ ಇಲ್ಲ. ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳ ಭಾವಚಿತ್ರವನ್ನು ವೇದಿಕೆಯಲ್ಲಿ ಪ್ರದರ್ಶಿಸುವಂತೆ ಇಲ್ಲ ಎಂಬುದು ಸೇರಿದಂತೆ ವಿವಿಧ ನಿಬಂಧನೆಗಳನ್ನು ಹಾಕಲಾಗಿದೆ.
ವಿವಿಧ ಥೀಮ್‌ಗಳಿಗೆ ಅವಕಾಶ: ಈ ಬಾರಿ ಯುವ ಸಂಭ್ರಮದಲ್ಲಿ ವಿವಿಧ ಥೀಮ್ ಆಧಾರಿತ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ, ಕಾನೂನು ಸುವ್ಯವಸ್ಥೆ, ಸಂವಿಧಾನ ಮತ್ತು ಶಾಸನ, ಹಕ್ಕು ಮತ್ತು ಕರ್ತವ್ಯಗಳು, ಮಾದಕ ವ್ಯಸನಮುಕ್ತ ಸಮಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ದಸರಾ, ಡಾ.ಬಿ.ಆರ್.ಅಂಬೇಡ್ಕರ್, ಕರ್ನಾಟಕ ಜಾನಪದ ವೈವಿಧ್ಯತೆ/ಪರಂಪರೆ, ಜಿಲ್ಲಾ ಕೇಂದ್ರಿತ ನೃತ್ಯ ಪರಂಪರೆ, ಕನ್ನಡ ಸಾಹಿತ್ಯ-ಕವಿ, ಕರ್ನಾಟಕ ಸಾಹಿತ್ಯ ಪರಂಪರೆ, ದೇಶಭಕ್ತಿ, ಸ್ವಾತಂತ್ರ್ಯ ಚಳವಳಿ/ಹೋರಾಟಗಾರರ ಕೊಡುಗೆ, ಭಾರತೀಯ ಯೋಧರ ಪಾತ್ರ, ವಿವಿಧತೆಯಲ್ಲಿ ಏಕತೆ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆಯಲ್ಲಿ ಯುವಜನತೆ ಪಾತ್ರ ಮೊದಲಾದ ವಿಷಯ ಆಧಾರಿತ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ
ವೇದಿಕೆ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.