ಸಿಂಧನೂರು: ರೈತ, ಕಾರ್ಮಿಕ, ಎಡ ಪಕ್ಷಗಳು, ದಲಿತ, ಪ್ರಗತಿಪರ ಸೇರಿದಂತೆ ಎಲ್ಲ ಜನಪರ ಸಂಘಟನೆಗಳು ಒಳಗೊಂಡು ‘ಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು-ಇಂದು’ ಮುಖ್ಯ ಘೋಷವಾಕ್ಯದಡಿ ಮೇ17 ಮತ್ತು 18 ರಂದು ನಗರದ ಸತ್ಯಗಾರ್ಡನ್‍ನಲ್ಲಿ 11ನೇ ಮೇ ಸಾಹಿತ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮೇ ಸಾಹಿತ್ಯ ಮೇಳ ಬಳಗದ ರಾಜ್ಯ ಘಟಕದ ಪ್ರಧಾನ ಸಂಚಾಲಕ ಬಸವರಾಜ ಸೂಳಿಬಾವಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೇ15, 16 ರಂದು ಅನಿಕೇತನ ಕಾಲೇಜಿನಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದ್ದು ರಾಜ್ಯದ 20ಕ್ಕೂ ಅಧಿಕ ಕಲಾವಿದರು ಭಾಗವಹಿಸಲಿದ್ದಾರೆ. 17 ರಂದು ಬೆಳಿಗ್ಗೆ 9.30ಕ್ಕೆ ಆಯ್ದಕ್ಕಿ ಲಕ್ಕಮ್ಮ, ಗುರು ಖಾದ್ರಿಪೀರ ಪುಸ್ತಕ ಮಳಿಗೆ, ಬಸವರಾಜ ಕೊಡಗುಂಟಿ, ಶಂಕರಗೌಡ ಬೆಟ್ಟದೂರು, ಸಾಜಿದ್ ವಾಜಿದ್ ಚಿತ್ರಕಲಾ ಪ್ರದರ್ಶನ ಮಳಿಗೆ ಉದ್ಘಾಟಿಸುವರು. ಬಳಿಕ ವಿವಿಧ ಕಲಾ ತಂಡಗಳ ಸದಸ್ಯರು ಹೋರಾಟದ ಹಾಡುಗಳನ್ನು ಹಾಡಲಿದ್ದಾರೆ ಎಂದು ವಿವರಿಸಿದರು.
ಬೆಳಿಗ್ಗೆ 10.30ಕ್ಕೆ ಮೇ ಸಾಹಿತ್ಯ ಮೇಳವನ್ನು ಮೆದಿಕಿನಾಳ ಭೂ ಹೋರಾಟದ ಸಂಗಮ್ಮ, ದಲಿತ ಚಳವಳಿಯ ಭೀಮಣ್ಣ ನಗನೂರು, ಕಾರ್ಮಿಕ ಚಳವಳಿಯ ನರಸಿಂಹಪ್ಪ, ಮದ್ಯ ವಿರೋಧಿ ಹೋರಾಟದ ಚಿನ್ನಮ್ಮ ಮುದ್ದನಗುಡ್ಡಿ, ರೈತ ಚಳವಳಿಯ ತಿಮ್ಮನಗೌಡ ಒಗ್ಗೂಡಿ ಉದ್ಘಾಟಿಸುವರು.
ಮುಂಬಯಿಯ ರಾಮ್ ಪುನಿಯಾನಿ, ಔರಂಗಬಾದ್‍ನ ಮಾಲತಿ ವರಾಳೆ, ನವದೆಹಲಿಯ ಶಂಸುಲ್ ಇಸ್ಲಾಂ, ಬೆಂಗಳೂರಿನ ಎ.ನಾರಾಯಣ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಎಸ್.ದೇವೇಂದ್ರಗೌಡ ಹಾಗೂ ಅಶೋಕ ನಂಜಲದಿನ್ನಿ ನಿರ್ಣಯಗಳನ್ನು ಮಂಡಿಸಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ ಹೊಸಪೇಟೆಯ ಬಹುತ್ವ ಪ್ರತಿಷ್ಠಾನದಿಂದ ‘ನಾ ಯಾರು’ ಎಂಬ ರಂಗ ಪ್ರಸ್ತುತಿ ನಡೆಯಲಿದೆ ಎಂದು ತಿಳಿಸಿದರು.
ಎರಡೂ ದಿನ ವಿವಿಧ ವಿಷಯಗಳ ಕುರಿತು ಗೋಷ್ಠಿ, ಕವಿಗೋಷ್ಠಿಗಳು ನಡೆಯಲಿವೆ. ಸಂಜೆ 4 ಗಂಟೆಗೆ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, 8 ಜನರಿಗೆ ರವಿರಾವ್ ಮೈಸೂರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರೊ.ಅಮರೇಶ ನುಗಡೋಣಿ ಹೊಸಪೇಟೆ ಸಮಾರೋಪ ಮಾತು ಆಡಲಿದ್ದಾರೆ. ಬಾಬು ಬಂಡಾರಿಗಲ್ ಅಧ್ಯಕ್ಷತೆ ವಹಿಸುವರು. ಮೇಳದಲ್ಲಿ ರಾಜ್ಯದ ವಿವಿಧೆಡೆಯಿಂದ 1,200ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬಳಗದ ಎಸ್.ದೇವೇಂದ್ರಗೌಡ ಮಾತನಾಡಿದರು.
ಚಂದ್ರಶೇಖರ ಗೊರಬಾಳ, ಟಿ.ಹುಸೇನಸಾಬ, ಕರೇಗೌಡ ಕುರುಕುಂದಿ, ಅಶೋಕ ನಂಜಲದಿನ್ನಿ, ಬಸವರಾಜ ಬಾದರ್ಲಿ, ಮಂಜುನಾಥ ಗಾಂಧಿನಗರ, ರಾಮಯ್ಯ ಜವಳಗೇರ, ಪೂಜಾ ಸಿಂಗೇ, ಬಿ.ಎನ್.ಯರದಿಹಾಳ, ಸೋಮಶೇಖರ, ಹಾಜಿಸಾಬ್ ಆಯನೂರು, ಎಂ.ಕೆ.ಸಾಹೇಬ್, ಕೃಷ್ಣಮೂರ್ತಿ, ಶರಣು ಶೆಟ್ಟರ್, ಪ್ರಕಾಶ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.