ADVERTISEMENT

ರಾಯಚೂರು: ಅಶುದ್ಧ ನೀರು ಕುಡಿದು 63 ಜನರು ಅಸ್ವಸ್ಥ, ಮಹಿಳೆ ಸಾವು

ವಿವಿಧ ಆಸ್ಪತ್ರೆಗಳಲ್ಲಿ ದಾಖಲು, ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 5:02 IST
Last Updated 1 ಜೂನ್ 2022, 5:02 IST

ರಾಯಚೂರು: ನಗರದಲ್ಲಿ ಕಲುಷಿತ ಕುಡಿಯುವ ನೀರು ಕುಡಿದು ವಾಂತಿ-ಭೇದಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದು, 63ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಿಗೆ ಮಂಗಳವಾರ ದಾಖಲಾಗಿದ್ದಾರೆ.

ಇಂದಿರಾನಗರದ ನಿವಾಸಿ ಮಲ್ಲಮ್ಮ ಮುದುಕಪ್ಪ (40) ಮೃತರಾಗಿದ್ದಾರೆ.

‘ಮೃತ ಮಹಿಳೆ ಮಲ್ಲಮ್ಮ ಮುದುಕಪ್ಪ ಅವರು ನಿರ್ಜಲೀಕರಣದಿಂದ ಮೃತಪಟ್ಟಿದ್ದು, 63ಕ್ಕು ಹೆಚ್ಚು ಜನರು ನಿರ್ಜಲೀಕರಣ, ವಾಂತಿ, ಭೇದಿ, ಮೂತ್ರಪಿಂಡದ ತೊಂದರೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಅನಾರೋಗ್ಯಕ್ಕೆ ಒಳಗಾದವರಲ್ಲಿ 23 ಮಕ್ಕಳಿದ್ದು, ಮೂರು ಜನರಲ್ಲಿ ಮೂತ್ರಪಿಂಡ, ಒಬ್ಬರಿಗೆ ಡಯಾಲೀಸಿಸ್ ಸಮಸ್ಯೆ ಕಾಡುತ್ತಿದೆ’ ಎಂದು ರಿಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ADVERTISEMENT

ನಗರಸಭೆಯಿಂದ ಪೂರೈಕೆಯಾ ಗುವ ನೀರನ್ನೇ ಅವಲಂಬಿ ಸಿರುವ ಕೊಳೆಗೇರಿ ನಿವಾಸಿಗಳ ಆರೋಗ್ಯವು ಕಲುಷಿತ ನೀರಿನಿಂದ ಏರುಪೇರಾಗಿದೆ. ನೀರು ಶುದ್ಧೀಕರಣ ಮಾಡುವುದು, ಪೈಪ್‌ಲೈನ್‌ ದುರಸ್ತಿ ಮಾಡುವಂತೆ ಸಂಘ–ಸಂಸ್ಥೆಗಳು ಮನವಿ ಸಲ್ಲಿಸುತ್ತಾ ಬಂದಿದ್ದರೂ ಸ್ಪಂದನೆ ಸಿಕ್ಕಿಲ್ಲ.

ಘಟನೆಯಿಂದ ಎಚ್ಚೆತ್ತು ಕೊಂಡಿರುವ ಆರೋಗ್ಯ ಇಲಾಖೆಯು ಇಂದಿರಾನಗರ ಸೇರಿದಂತೆ ವಿವಿಧ ಕೊಳೆಗೇರಿಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದೆ.

ನಗರಕ್ಕೆ ತುಂಗಭದ್ರಾ ನದಿಯ ನೀರನ್ನು ರಾಂಪುರ ಕೆರೆ ಮೂಲಕ ಹಾಗೂ ಕೃಷ್ಣಾನದಿ ನೀರನ್ನು ಚಿಕ್ಕಸುಗೂರು ಶುದ್ಧೀಕರಣ ಘಟಕ ದಿಂದ ಸರಬರಾಜು ಮಾಡುತ್ತಿದೆ. ಶುದ್ಧೀಕರಣಕ್ಕೆ ವೈಜ್ಞಾನಿಕ ವಿಧಾನ ಅಳವಡಿಸಿಲ್ಲ. ರಾಂಪೂರ ಶುದ್ಧೀಕರಣ ಘಟಕದ ಯಂತ್ರಗಳು ಕೆಟ್ಟಿವೆ.

ನೀರು ಪರೀಕ್ಷಿಸಲು ತಜ್ಞರ ನೇಮಿಸಿ: ರಜಾಕ್ ಉಸ್ತಾದ್
ರಾಯಚೂರು:
ನಗರಸಭೆಯಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ನೀರು ಪರೀಕ್ಷಿಸಲು ತಜ್ಞರನ್ನು ನೇಮಿಸದೆ ನಗರಸಭೆ ಜನರ ಜೀವನದ ಜತೆ ಚಲ್ಲಾಟವಾಗುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಮುಖಂಡ ಡಾ.ರಜಾಕ್ ಉಸ್ತಾದ್ ದೂರಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಸುಮಾರು 3 ಲಕ್ಷ ಜನಸಂಖ್ಯೆ ಇದ್ದು ಇಲ್ಲಿನ ಜನರಿಗೆ ಅಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ. ಕಲುಷಿತ ನೀರು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಗರಸಭೆ ಪೌರಾಯುಕ್ತರು ಸೋಮವಾರ ಪ್ರಕಟಣೆ ಹೊರಡಿಸಿದ್ದು, ನೀರು ಸೋಸಿ, ಕಾಯಿಸಿ ಕುಡಿಯಬೇಕು ಎಂದು ತಿಳಿಸಿದ್ದಾರೆ.

ಪ್ರತಿ ವರ್ಷ ನಗರಸಭೆಗೆ ಜನರು ತೆರಿಗೆ ಪಾವತಿಸುತ್ತಿದ್ದು ಶುದ್ಧ ನೀರು ಪೂರೈಸುವುದು ನಗರಸಭೆ ಕರ್ತವ್ಯ. ಜನರಿಗೆ ನೀರು ಕಾಯಿಸಿ ಕುಡಿಯಲು ಸೂಚನೆ ನೀಡಿದರೆ ನಗರಸಭೆ ಪಾತ್ರವೇನು ಎಂಬುದನ್ನು ಜನರಿಗೆ ತಿಳಿಸಲಿ ಎಂದರು.

ಈ ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು. ಕೂಡಲೇ ನೀರು ಪರೀಕ್ಷೆಗೆ ತಜ್ಞರನ್ನು ನೇಮಿಸಬೇಕು. ಶುದ್ಧ ಕುಡಿವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.