ADVERTISEMENT

ರಾಯಚೂರಲ್ಲಿ ಎಸಿಬಿ ದಾಳಿ: ಕಸದ ಡಬ್ಬಿಯಲ್ಲಿ ನಗದು, ಚಿನ್ನಾಭರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 9:41 IST
Last Updated 16 ಮಾರ್ಚ್ 2022, 9:41 IST
   

ರಾಯಚೂರು: ಇಲ್ಲಿನ ಬಸವೇಶ್ವರ ನಗರದಲ್ಲಿರುವ ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್‌ (ಕೆಬಿಜೆಎನ್‌ಎಲ್‌) ಉಪವಿಭಾಗ–13 ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕರೆಡ್ಡಿ ಪಾಟೀಲ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳ ತಂಡವು ಪರಿಶೀಲನೆ ಮುಂದುವರಿಸಿದ್ದು, ಮನೆಯ ಕಸದ ಡಬ್ಬಿಯಲ್ಲೂ ನಗದು ಹಾಗೂ ಚಿನ್ನಾಭರಣಗಳನ್ನು ಇಟ್ಟಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನೆಯ ಅಕ್ಕಪಕ್ಕದ ಖಾಲಿ ನಿವೇಶನಗಳಲ್ಲೂ ಹಣ ಅಡಗಿಸಿರಬಹುದು ಎನ್ನುವ ಸಂದೇಹದಿಂದ ಅಧಿಕಾರಿಗಳ ತಂಡವು ಪರಿಶೀಲನೆ ಆರಂಭಿಸಿದೆ. ಭಾರಿ ಪ್ರಮಾಣದಲ್ಲಿ ನಗ, ನಾಣ್ಯ ಪತ್ತೆಯಾಗುತ್ತಲೇ ಇದೆ. ಬೇನಾಮಿ ಆಸ್ತಿಯನ್ನು ಮಾಡಿರಬಹುದು ಎನ್ನುವ ಅನುಮಾನ ಇರುವುದರಿಂದ ಕೆಲವು ಸಂಬಂಧಿಗಳನ್ನು ಈ ಬಗ್ಗೆ ಅಧಿಕಾರಿಗಳು ವಿಚಾರಿಸುತ್ತಿದ್ದಾರೆ.

ಅಶೋಕರೆಡ್ಡಿ ಅವರು ಕಾರ್ಯನಿರ್ವಹಿಸುವ ದೇವದುರ್ಗ ತಾಲ್ಲೂಕಿನ ಅಮರಾಪುರ ಕ್ರಾಸ್‌ ಹತ್ತಿರ ಇರುವ ಕಚೇರಿಯಲ್ಲಿ ಹಾಗೂ ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಕುದ್ರಾಪುರ ಸ್ವಗ್ರಾಮದ ಮನೆಗಳಲ್ಲೂ ಅಧಿಕಾರಿಗಳ ತಂಡವು ಪರಿಶೀಲನೆ ಮಾಡುತ್ತಿದೆ.

’ದಾಳಿಯಲ್ಲಿ ಎಷ್ಟು ನಗದು, ಚಿನ್ನಾಭರಣಗಳು ಪತ್ತೆಯಾಗಿವೆ ಎಂಬುದರ ಬಗ್ಗೆ ಬೆಂಗಳೂರು ಕಚೇರಿಯಿಂದಲೇ ಮಾಹಿತಿ ನೀಡುತ್ತಾರೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.