ADVERTISEMENT

‘ತೆರಿಗೆ ವಸೂಲಿಯ ಗುರಿ ಸಾಧಿಸಿ, ಅಭಿವೃದ್ಧಿಗೆ ನೆರವಾಗಿ’: ಸಾಜೀದ್ ಸಮೀರ್ ಮನವಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 6:46 IST
Last Updated 25 ಜುಲೈ 2025, 6:46 IST
ರಾಯಚೂರಿನಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿಗಾಗಿ ಸಮಿತಿಯ ಮೂಲಕ ಆಯ್ಕೆ ಮಾಡಿದ 25 ಸದಸ್ಯರಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಪ್ರಭಾರ ಮೇಯರ್ ಸಾಜೀದ್ ಸಮೀರ್ ಮಾತನಾಡಿದರು. ಆಯುಕ್ತ ಜುಬೀನ್ ಮೊಹಾಪಾತ್ರ ಹಾಗೂ ಮೇನಕಾ ಪಟೇಲ್‌ ಉಪಸ್ಥಿತರಿದ್ದರು
ರಾಯಚೂರಿನಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿಗಾಗಿ ಸಮಿತಿಯ ಮೂಲಕ ಆಯ್ಕೆ ಮಾಡಿದ 25 ಸದಸ್ಯರಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಪ್ರಭಾರ ಮೇಯರ್ ಸಾಜೀದ್ ಸಮೀರ್ ಮಾತನಾಡಿದರು. ಆಯುಕ್ತ ಜುಬೀನ್ ಮೊಹಾಪಾತ್ರ ಹಾಗೂ ಮೇನಕಾ ಪಟೇಲ್‌ ಉಪಸ್ಥಿತರಿದ್ದರು   

ರಾಯಚೂರು: ‘ಮಹಾನಗರಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸ್ವ ಸಹಾಯ ಸಂಘಗಳು ಕಾಲಮಿತಿಯಲ್ಲಿ ನಿಗದಿಪಡಿಸಿದ ತೆರಿಗೆ ವಸೂಲಿಯ ಗುರಿ ಸಾಧಿಸಿ ನಗರದ ಅಭಿವೃದ್ಧಿಗೆ ನೆರವಾಗಬೇಕು’ ಎಂದು ಮಹಾನಗರಪಾಲಿಕೆಯ ಪ್ರಭಾರ ಮೇಯರ್ ಸಾಜೀದ್ ಸಮೀರ್ ಮನವಿ ಮಾಡಿದರು.

ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿಗಾಗಿ ಸಮಿತಿಯ ಮೂಲಕ ಆಯ್ಕೆ ಮಾಡಿದ 25 ಸದಸ್ಯರಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

‘ಮಹಾನಗರಪಾಲಿಕೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಸ್ತುತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ವ-ಸಹಾಯ ಸಂಘದ ಸದಸ್ಯರು ಕಾರ್ಯ ನಿರ್ವಹಿಸಬೇಕು. ಪಾಲಿಕೆಯ ಅಭಿವೃದ್ಧಿಗೆ ನೆರವಾಗಬೇಕು’ ಎಂದು ತಿಳಿಸಿದರು.

ADVERTISEMENT

ಆಯುಕ್ತ ಜುಬೀನ್ ಮೊಹಾಪಾತ್ರ ಮಾತನಾಡಿ, ‘ಸ್ವ-ಸಹಾಯ ಸಂಘದ ಸದಸ್ಯರು ತೆರಿಗೆ ವಸೂಲಾತಿಯ ಬಗ್ಗೆ ಕಂದಾಯ ಶಾಖೆಯ ಅಧಿಕಾರಿ ಅಥವಾ ಸಿಬ್ಬಂದಿಗೆ ವರದಿ ಸಲ್ಲಿಸಬೇಕು. ಕ್ಷೇತ್ರದಲ್ಲಿ ಯಾವುದೇ ಅಡೆತಡೆ ಅಥವಾ ತೊಂದರೆಗಳು ಎದುರಾದಲ್ಲಿ ಮಹಾನಗರಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಸೂಚಿಸಿದರು.

‘ಸ್ವೀಕೃತ ತೆರಿಗೆ ಹಾಗೂ ಶುಲ್ಕ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು. ಮಹಾನಗರ ಪಾಲಿಕೆಯಿಂದ ಸೂಚಿಸಲಾಗುವ ದಾಖಲಾತಿಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕರ ವಸೂಲಾತಿಗಾಗಿ ಕ್ಷೇತ್ರ ಭೇಟಿ ನೀಡುವಾಗ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು’ ಎಂದು ಹೇಳಿದರು.

‘ಆಯ್ಕೆಯಾದ ಸ್ವ-ಸಹಾಯ ಗುಂಪಿನ ಮೂಲಕವೇ ಬೆಳಿಗ್ಗೆ 9ರಿಂದ ಸಂಜೆ 6ಗಂಟೆವರೆಗೂ ಕರ ವಸೂಲಾತಿ ಕಾರ್ಯ ಮಾಡಬೇಕು. ಯಾವುದೇ ಉಪಗುತ್ತಿಗೆ ನೀಡಬಾರದು. ಆಯ್ಕೆಯಾದ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಮಾತ್ರ ವಸೂಲಾತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇತರೆ ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಇತರೆ ವ್ಯಕ್ತಿ ಅಥವಾ ಸಂಸ್ಥೆ ತೊಡಗಿಸಿಕೊಂಡು ವಸೂಲಾತಿ ಮಾಡಲು ಅವಕಾಶ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆಯ್ಕೆಯಾದ ಮಹಿಳಾ ಸ್ವ-ಸಹಾಯ ಗುಂಪಿನ ಅಧ್ಯಕ್ಷರು ಕರ ವಸೂಲಾತಿಯಲ್ಲಿ ತೊಡಗಿಸಿಕೊಳ್ಳುವ ಗುಂಪಿನ ಸದಸ್ಯರ ಹೆಸರು, ದೂರವಾಣಿ ಸಂಖ್ಯೆ ಇತ್ಯಾದಿ ವಿವರವನ್ನು ಲಿಖಿತ ರೂಪದಲ್ಲಿ ನಗರ ಸ್ಥಳೀಯ ಸಂಸ್ಥೆಯ ಕಂದಾಯ ಶಾಖೆಗೆ ಸಲ್ಲಿಸಬೇಕು. ಮಹಾನಗರಪಾಲಿಕೆಯ ಆಯೋಜಿಸಲಾಗುವ ಪ್ರಗತಿ ಪರಿಶೀಲನಾ ಸಭೆಗೆ ನಿಯಮಿತವಾಗಿ ಹಾಜರಾಗಬೇಕು’ ಎಂದು ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ ಆಡಳಿತ ಉಪ ಆಯುಕ್ತ ಸಂತೋಷ ರಾಣಿ, ಮಹಾನಗರಪಾಲಿಕೆ ಸಮುದಾಯ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ, 14 ಸ್ವ-ಸಹಾಯ ಸಂಘದ 25 ಸದಸ್ಯರು ಉಪಸ್ಥಿತರಿದ್ದರು.

ಕರ ವಸೂಲಾತಿಗೆ ತೊಡಗಿಸಿಕೊಳ್ಳುವ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಪ್ರೋತ್ಸಾಹಧನ ಹೊರತುಪಡಿಸಿ ಇತರೆ ಯಾವುದೇ ಭತ್ಯೆಗೆ ಅರ್ಹರಿರುವುದಿಲ್ಲ
ಜುಬೀನ್ ಮೊಹಾಪಾತ್ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.