ADVERTISEMENT

ರಾಯಚೂರು ಕೃಷಿ ವಿವಿಗೆ ಹೆಚ್ಚು ಅನುದಾನ

ಕೃಷಿ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 13:15 IST
Last Updated 15 ಡಿಸೆಂಬರ್ 2019, 13:15 IST
ರಾಯಚೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಆರು ಪ್ರಗತಿಪರ ರೈತರಿಗೆ 2019–20ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನೀಡಿ ಗಣ್ಯರು ಗೌರವಿಸಿದರು
ರಾಯಚೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಆರು ಪ್ರಗತಿಪರ ರೈತರಿಗೆ 2019–20ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನೀಡಿ ಗಣ್ಯರು ಗೌರವಿಸಿದರು   

ರಾಯಚೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 2008 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರಾಯಚೂರು ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುದಾನ ಒದಗಿಸಿದ್ದರು. ಕಳೆದ 10 ವರ್ಷಗಳಲ್ಲಿ ವಿಶ್ವವಿದ್ಯಾಲಯವು ನಿರೀಕ್ಷೆಯಂತೆ ಕೆಲಸ ಮಾಡುತ್ತಿದೆ. ಹೆಚ್ಚಿನ ಅನುದಾನದ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ ನೀಡಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ರೈತರು ಕೃಷಿ ಆದಾಯ ಹೆಚ್ಚಿಸಿಕೊಳ್ಳಲು ನೆಲೆ–ಜಲ ಉಳಿಸಿ ಎನ್ನುವ ಶೀರ್ಷಿಕೆ ಚೆನ್ನಾಗಿದೆ. ವಿಶ್ವವಿದ್ಯಾಲಯವು ಈಗಾಗಲೇ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಆದರೆ, ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ಮಾಡಬೇಕು ಎಂದು ತಿಳಿಸಿದರು.

ADVERTISEMENT

ಪ್ರತಿ 10 ವರ್ಷಕೊಮ್ಮೆ ಪ್ರವಾಹ ಹಾವಳಿ ಉಂಟಾಗುತ್ತಿದೆ. ಈ ವರ್ಷ ಪ್ರವಾಹದಿಂದ ಗ್ರಾಮೀಣ ಭಾಗದಲ್ಲಿ ಜನರು ತೊಂದರೆ ಅನುಭವಿಸಿದರು. ಎನ್‌ಡಿಆರ್‌ಎಫ್‌ ನಿಯಮಾವಳಿ ಹೊರತಾಗಿಯೂ ರಾಜ್ಯ ಸರ್ಕಾರದಿಂದ ಹೆಚ್ಚಿನ ನೆರವು ಒದಗಿಸಲಾಗಿದೆ. ಇಲ್ಲಿಯವರೆಗೂ ಸುಮಾರು ಒಟ್ಟು ₹2,600 ಕೋಟಿ ಪರಿಹಾರ ಒದಗಿಸಲಾಗಿದೆ. ಬೆಳೆಹಾನಿಗೂ ಪರಿಹಾರ ಕೊಡಲಾಗುತ್ತಿದೆ ಎಂದು ಹೇಳಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ನೀರಾವರಿ ಸುಧಾರಣೆ ಆಗಬೇಕಿದೆ. ಆರ್‌ಟಿಪಿಎಸ್‌, ವೈಟಿಪಿಎಸ್‌ ಇದ್ದರೂ ನಾಯಿ ಮೊಲೆಯ ಹಾಲಿದ್ದಂತೆ ಆಗಿದೆ. ಅವುಗಳಿಂದ ಜಿಲ್ಲೆಗೆ ಏನೂ ಅನುಕೂಲವಾಗುತ್ತಿಲ್ಲ. ರಾಯಚೂರು ಕೃಷಿ ವಿಶ್ವವಿದ್ಯಾಲಯವು ಗೋವಿನ ಹಾಲು ಇದ್ದಂತೆ. ಈ ಭಾಗದ ರೈತರಿಗೆ ಏನಾದರೂ ಅನುಕೂಲ ಆಗುವುದಿದ್ದರೆ, ಈ ವಿಶ್ವವಿದ್ಯಾಲದಿಂದಲೇ ಆಗಬೇಕು ಎಂದು ತಿಳಿಸಿದರು.

ರೈತರ ಜೀವನಮಟ್ಟ ಸುಧಾರಿಸುವ ಕಾರ್ಯವನ್ನು ಕೃಷಿ ವಿಶ್ವವಿದ್ಯಾಲಯವು ಮಾಡಬೇಕು. ಜಿಲ್ಲೆಯ ಅಭಿವೃದ್ಧಿಗೆ ಬೇಕಾಗುವ ಯೋಜನೆಗಳನ್ನು ಸಿದ್ಧಪಡಿಸಿ ಕೊಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಶಾಸಕ ಬಸನಗೌಡ ದದ್ದಲ ಮಾತನಾಡಿ, ರೈತರು ಸ್ವಾವಲಂಬನೆ ಜೀವನ ರೂಪಿಸಿಕೊಳ್ಳುವುದು ಅಗತ್ಯವಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳಿಗೆ ಹೆಚ್ಚು ಮಹತ್ವ ಕೊಡಬೇಕು. ಕಾಲುವೆ ಕೊನೆಭಾಗದ ರೈತರಿಗೆ ಈಗಲೂ ನೀರು ತಲುಪುತ್ತಿಲ್ಲ ಎಂದು ಗಮನ ಸೆಳೆದರು.

ಪಶುಸಂಗೋಪನೆ ಸಚಿವ ಪ್ರಭು ಚವಾಣ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಶಾಸಕ ವೆಂಕಟರಾವ್‌ ನಾಡಗೌಡ ಹಾಗೂ ರಾಜಾ ವೆಂಕಟಪ್ಪ ನಾಯಕ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿದರು. ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ಸ್ವಾಗತಿಸಿದರು.

ಶಾಸಕ ಶಿವನಗೌಡ ನಾಯಕ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀರಲಕ್ಷ್ಮೀ ಆದಿಮನಿ, ಕುಲಸಚಿವ ಡಾ.ಎಂ.ಜಿ. ಪಾಟೀಲ, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಸಿದ್ದಪ್ಪ ಭಂಡಾರಿ, ಅಮರೇಶ ಬಲ್ಲಿದವ, ವೀರನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.