
ರಾಯಚೂರು: ಹೊಸ ವರ್ಷಾಚರಣೆಯಲ್ಲಿ ಒಂದೇ ದಿನದಲ್ಲಿ ಒಂದು ಲಕ್ಷ ಬಿಯರ್ ಮಾರಾಟವಾಗುವ ನಿರೀಕ್ಷೆ ಕೈಕೊಟ್ಟಿದೆ. ಮದ್ಯ ಹಾಗೂ ಬಿಯರ್ ಮಾರಾಟವು ಕಳೆದ ವರ್ಷದ ಬಾಕ್ಸ್‌ಗಳ ಸಂಖ್ಯೆಗೂ ತಲುಪಲಾಗದೆ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಿರೀಕ್ಷೆಯಂತೆ ಏರಿಕೆ ಕಂಡು ಬಂದಿಲ್ಲ. ಅಬಕಾರಿ ಇಲಾಖೆಗೂ ನಿರೀಕ್ಷಿತ ಆದಾಯ ಬಂದಿಲ್ಲ. ಮದ್ಯ ಪ್ರಿಯರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುವುದು ಸಹ ಇಳಿಕೆಗೆ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಿಸಲು ಆರಂಭಿಸಿದ್ದಾರೆ.
2025ನೇ ವರ್ಷದ ಕೊನೆಯ ಒಂದೇ ದಿನದಲ್ಲಿ 9,172 ಬಾಕ್ಸ್ ಮದ್ಯ ಹಾಗೂ 5,010 ಬಾಕ್ಸ್ ಬಿಯರ್ ಮಾರಾಟವಾಗಿದೆ. 2024ನೇ ವರ್ಷ ಕೊನೆಗೊಂಡ ದಿನದಂದು 13,311 ಬಾಕ್ಸ್ ಮದ್ಯ ಹಾಗೂ 7,230 ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 4,139 ಬಾಕ್ಸ್ ಮದ್ಯ ಹಾಗೂ 2,490 ಬಾಕ್ಸ್ ಬಿಯರ್ ಕಡಿಮೆ ಮಾರಾಟವಾಗಿದೆ.
2024ರ ಡಿಸೆಂಬರ್ ತಿಂಗಳೊಂದರಲ್ಲೇ 1,69,301 ಬಾಕ್ಸ್ ಮದ್ಯ, 93,361 ಬಾಕ್ಸ್ ಬಿಯರ್ ಹಾಗೂ 2025ರ ಡಿಸೆಂಬರ್‌ನಲ್ಲಿ 1,67,271 ಬಾಕ್ಸ್ ಮದ್ಯ, 85,421 ಬಾಕ್ಸ್ ಬಿಯರ್ ಮಾರಾಟವಾಗಿದೆ.
‘2024ರ ಜನವರಿಯಿಂದ ಡಿಸೆಂಬರ್ ವರೆಗೆ 18,45,676 ಬಾಕ್ಸ್ ಮದ್ಯ, 10,37,592 ಬಾಕ್ಸ್ ಬಿಯರ್ ಮಾರಾಟವಾಗಿದೆ. 2025ರ ಜನವರಿಯಿಂದ ಡಿಸೆಂಬರ್ ಅವರೆಗೆ 17,55,282 ಬಾಕ್ಸ್ ಮದ್ಯ ಹಾಗೂ 9,10,878 ಬಾಕ್ಸ್ ಬಿಯರ್ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಕೆ.ಮಹೇಂದ್ರ ಹೇಳುತ್ತಾರೆ.
ಅತಿವೃಷ್ಟಿಯಿಂದಾಗಿ ರೈತರಿಗೆ ಕೈಗೆ ನಿರೀಕ್ಷಿತ ಆದಾಯ ಕೈ ಸೇರಿಲ್ಲ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಮಾರುಕಟ್ಟೆಗೂ ಮಂದಗತಿಯಲ್ಲಿ ಸಾಗಿದೆ. ರಾಜ್ಯ ಸರ್ಕಾರ ಮೇನಲ್ಲಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡ 195ರಿಂದ ಶೇ 200ಕ್ಕೆ, ಐಎಂಎಲ್ ಬ್ರ್ಯಾಂಡ್‌ಗಳ ಬೆಲೆಯನ್ನೂ ಕ್ವಾರ್ಟರ್‌ಗೆ ₹ 15ರಿಂದ ₹20ರ ವರೆಗೆ ಏರಿಸಿದೆ. ಈ ಅಂಶಗಳೇ ಹೊಸ ವರ್ಷದಲ್ಲೂ ಮದ್ಯ ಹಾಗೂ ಬಿಯರ್ ಮಾರಾಟ ಕುಡಿಯಲು ಕಾರಣ ಎಂದು ವ್ಯಾಪಾರಿ ಅಕ್ಷಯ ಹೇಳುತ್ತಾರೆ.
ಹೊಸ ವರ್ಷಾಚರಣೆಯ ಪೂರ್ವದಲ್ಲೇ ಮದ್ಯ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿತ್ತು. ಡಿಸೆಂಬರ್ 31ರಂದು ಮಾತ್ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೂ ಮದ್ಯ ಮಾರಾಟಕ್ಕೆ ವಿಶೇಷ ಅನುಮತಿ ಕೊಟ್ಟಿತ್ತು. ಈ ಸಡಿಲಿಕೆಯನ್ನು ಒಂದೇ ದಿನಕ್ಕೆ ಮಾತ್ರ ಸೀಮಿತಗೊಳಿಸಿತ್ತು.
ಹೊಸ ವರ್ಷ ಸ್ವಾಗತದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಬಾರ್‌ಗಳು, ಪಬ್‌ಗಳು, ವೈನ್ ಶಾಪ್‌ಗಳು ಮತ್ತು ಅಧಿಕೃತ ಮದ್ಯ ಮಾರಾಟ ಕೇಂದ್ರಗಳಿಗೆ ಅನ್ವಯವಾಗುವಂತೆ ಅದೇಶ ಹೊರಟಿಸಿತ್ತು. ಮದ್ಯ ಮಾರಾಟ ಸಮಯ ವಿಸ್ತರಣೆ ವ್ಯಾಪಕ ಚರ್ಚೆಗೂ ಅವಕಾಶ ಮಾಡಿಕೊಟ್ಟಿತ್ತು. ಆದರೆ ರಾಯಚೂರು ಜಿಲ್ಲೆಯಲ್ಲಿ ಕಳೆದ ವರ್ಷದಷ್ಟೂ ಮದ್ಯ ಹಾಗೂ ಬಿಯರ್ ಮಾರಾಟವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.