
ಜಾಲಹಳ್ಳಿ: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ಹಾಗೂ ನಿಯಮಗಳನ್ನು ಗಾಳಿಗೆ ತೂರಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಸಂಘಟನೆಯ ಮುಖಂಡ ನರಸಣ್ಣ ನಾಯಕ ಮಾತನಾಡಿದರು, ‘ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಯಾವುದೇ ಉಪಯೋಗವಿಲ್ಲದಂತಾಗಿದೆ. ಕಳೆದ ಒಂದು ವರ್ಷದಿಂದ ಸಿಬ್ಬಂದಿ ಮಧ್ಯೆ ಒಳ ಜಗಳ ನಡೆದಿದೆ. ಹಣಕಾಸಿನ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ ಅನೇಕ ಬಾರಿ ಅಡಳಿತ ಮಂಡಳಿ ಸದಸ್ಯರು ದೂರು ನೀಡಿದರೂ ಸಹಕಾರ ಸಂಘಗಳ ನಿಬಂಧಕರು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ದೂರಿದರು.
ಭೇಟಿ: ಜಿಲ್ಲಾ ಸಹಕಾರ ಸಂಘದ ಅಧಿಕಾರಿಗಳಾದ ಶೇಖ್ ಹುಸೇನ್ ಹಾಗೂ ಅಮರೇಶ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ‘ಮುಂದಿನ 15 ದಿನಗಳಲ್ಲಿ ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಸ್ಥಳೀಯ ಸಂಘದ ಮೂರು ಜನ ಸಿಬ್ಬಂದಿಯನ್ನು ಬೇರೆ ಕಡೆಗೆ ನಿಯೋಜನೆ ಮಾಡಲಾಗುವುದು’ ಎಂದು ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಹನುಮಂತಪ್ಪ ಮಡಿವಾಳ, ರಂಗನಾಥ ನಾಯಕ, ಹನುಮಂತ ಭೋಜಾ, ಬಸವರಾಜ ನಾಯಕ ವಂದಲಿ, ದುರಗಪ್ಪ ನಾಯಕ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.