ADVERTISEMENT

ರಾಯಚೂರು | ಎಪಿಎಂಸಿ; ಕರ ಸಂಗ್ರಹ ಅಲ್ಪ ಇಳಿಕೆ

ಸೆಸ್‌ ಕಡಿಮೆ ಮಾಡುವಂತೆ ವ್ಯಾಪಾರಿಗಳ ಒತ್ತಾಯ

ನಾಗರಾಜ ಚಿನಗುಂಡಿ
Published 23 ಜುಲೈ 2020, 19:30 IST
Last Updated 23 ಜುಲೈ 2020, 19:30 IST
ರಾಯಚೂರಿನ ಎಪಿಎಂಸಿ ಒಂದು ನೋಟ
ರಾಯಚೂರಿನ ಎಪಿಎಂಸಿ ಒಂದು ನೋಟ   

ರಾಯಚೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ಹಣಕಾಸು ವರ್ಷದ ಆರಂಭಿಕ ಮೂರು ತಿಂಗಳಲ್ಲಿ ₹3 ಕೋಟಿ ಕರ ಸಂಗ್ರಹವಾಗಿದ್ದು, ಹಿಂದಿನ ವರ್ಷದ ಈ ಅವಧಿಗೆ ಹೋಲಿಸಿದರೆ ₹47 ಲಕ್ಷ ಕಡಿಮೆ ಆಗಿದೆ.

ಲಾಕ್‌ಡೌನ್‌ ಮಧ್ಯೆಯೂ ಸರ್ಕಾರವು ಎಪಿಎಂಸಿ ವಹಿವಾಟು ಸ್ಥಗಿತ ಮಾಡಿರಲಿಲ್ಲ. ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಸಕಾಲಕ್ಕೆ ಮಾರಾಟ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಏಪ್ರಿಲ್‌ 1 ರಿಂದ ಜೂನ್‌ ಅಂತ್ಯದವರೆಗೂ ಕರ ಸಂಗ್ರಹ ಆಗಿದೆ. ಹಿಂದಿನ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ₹3.47 ಕೋಟಿ ಕರ ಸಂಗ್ರಹವಾಗಿತ್ತು.

2019–20 ಹಣಕಾಸು ವರ್ಷ ಒಟ್ಟು ₹20 ಕೋಟಿ ಕರ ಸಂಗ್ರಹಿಸಲಾಗಿದೆ. ನಿಗದಿತ ಗುರಿಯಲ್ಲಿ ಶೇ 86 ರಷ್ಟು ಸಾಧನೆಯಾಗಿದೆ. ಈ ವರ್ಷ ಕರ ಸಂಗ್ರಹ ಗಣನೀಯ ಕಡಿಮೆ ಆಗುವ ನಿರೀಕ್ಷೆ ಇದೆ. ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆ ಹೊರಗಡೆಯೂ ಮಾರಾಟ ಮಾಡುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರಿಂದ ರೈತರೆಲ್ಲರೂ ಎಪಿಎಂಸಿಗೆ ಬರುವ ಅನಿವಾರ್ಯತೆ ದೂರವಾಗಲಿದೆ.

ADVERTISEMENT

ಈ ಮೊದಲು ಪ್ರತಿ ಕ್ವಿಂಟಲ್‌ ಕೃಷಿ ಉತ್ಪನ್ನಕ್ಕೆ ₹1.5 ಕರ ಕೊಡಬೇಕಿತ್ತು. ಸರ್ಕಾರವು ಕರವನ್ನು ₹1 ಕ್ಕೆ ಇಳಿಕೆ ಮಾಡಿತ್ತು. ಕರವನ್ನು ₹20 ಪೈಸೆಗೆ ಇಳಿಕೆ ಮಾಡುವಂತೆ ಎಪಿಎಂಸಿ ವ್ಯಾಪಾರಿಗಳು ರಾಜ್ಯದಾದ್ಯಂತ ವಹಿವಾಟು ಸ್ಥಗಿತಗೊಳಿಸಿ ಬಂದ್ ಆಚರಿಸುತ್ತಿದ್ದಾರೆ. ಸರ್ಕಾರವು ಬೇಡಿಕೆ ಈಡೇರಿಸುವವರೆಗೆ ವಹಿವಾಟು ನಡೆಸುವುದಿಲ್ಲ ಎನ್ನುವ ಬಿಗಿಪಟ್ಟು ಹಾಕಿದ್ದಾರೆ.

ಜುಲೈ 22 ರವರೆಗೂ ಲಾಕ್‌ಡೌನ್‌ ಇದ್ದ ಕಾರಣ ರೈತರು ಕೃಷಿ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಬಂದಿಲ್ಲ. ಇದೀಗ ಅನ್‌ಲಾಕ್‌ ಶುರುವಾಗಿದ್ದು, ಕೃಷಿ ಉತ್ಪನ್ನವು ಮಾರುಕಟ್ಟೆ ಬರುತ್ತದೆ. ವಹಿವಾಟು ಸ್ಥಗಿತವನ್ನು ಹೀಗೇ ಮುಂದುವರಿಸಿದರೆ, ಇನ್ನು ಮುಂದೆ ಸಂಕಷ್ಟ ಶುರವಾರಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.