ಎಚ್.ವಿಶ್ವನಾಥ್
ರಾಯಚೂರು: ‘ಅಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮನಲ್ಲ, ಭಾರತೀಯರ ರಾಮ. ಸ್ವಾರ್ಥಕ್ಕಾಗಿ ಬಳಸಿಕೊಂಡಿರುವುದೇ ವಿವಾದಕ್ಕೆ ಕಾರಣ. ರಾಮ ಮಂದಿರ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಉದ್ಘಾಟನೆ ಮಾಡುತ್ತಿರುವುದು ಅನೇಕರು ವಿರೋಧಿಸಿದರೂ ಬಿಜೆಪಿ ನಾಯಕರು ಇತರರ ಅಭಿಪ್ರಾಯ ಗೌರವಿಸುತ್ತಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ವಾಗ್ಧಾಳಿ ನಡೆಸಿದರು.
‘ಕಾಂಗ್ರೆಸ್ ನಾಯಕರು ರಾಮ ಮಂದಿರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯ. ಅಲ್ಪಸಂಖ್ಯಾತರ ಓಲೈಕೆ ಎನ್ನುವುದು ತಪ್ಪು. ಅನೇಕ ಮುಸ್ಲಿಮರು ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಾರೆ, ಅದು ಅವರ ನಂಬಿಕೆ. ಶ್ರೀರಾಮ ಕೇವಲ ಬಿಜೆಪಿಗೆ ಸೀಮಿತವಲ್ಲ’ ಎಂದು ಶುಕ್ರವಾರ ರಾಯಚೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
‘ಕುರುಬ ಸಮಾಜ ವಿವಿಧ ವರ್ಗಗಳಲ್ಲಿ ಹಂಚಿಕೆಯಾಗಿದೆ. ಕೆಲವು ಕಡೆ ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಭಾರತದಲ್ಲಿ ಕುರುಬರ ಜನಸಂಖ್ಯೆ 12 ಕೋಟಿ ಇದೆ. ವಿವಿಧ ಭಾಷೆ, ಸಂಸ್ಕೃತಿಯಲ್ಲಿ ಭಿನ್ನತೆಯಿದ್ದು ಎಲ್ಲರನ್ನೂ ಒಂದಡೆ ಸೇರಿಸಲು ಶೆವರ್ಡ್ ಸಂಸ್ಥೆ ಸ್ಥಾಪನೆ ಮಾಡಲಾಗಿದೆ. 2010ರಲ್ಲಿ ಶುರುವಾಗಿ 2014 ರಲ್ಲಿ ವಿದ್ಯುಕ್ತವಾಗಿ ಉದ್ಘಾಟನೆ ಆಯಿತು. ನಮ್ಮನ್ನು ನಾವು ಅರ್ಥೈಸಿಕೊಳ್ಳಬೇಕಿದೆ. ಕಳೆದ ಅಕ್ಟೋಬರ್ 2, 3ರಂದು ಬೆಳಗಾವಿಯಲ್ಲಿ 9ನೇ ರಾಷ್ಟ್ರೀಯ ಅಧಿವೇಶನ ನಡೆದಿದ್ದು ಜಮ್ಮು ಕಾಶ್ಮೀರ ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ಸಮಾಜದವರು ಸೇರಿದ್ದರು’ ಎಂದು ಹೇಳಿದರು.
‘ಕಾಂತರಾಜ ವರದಿ ಜಾರಿಯಾಗಬೇಕು. ಇದಕ್ಕೆ ವಿರೋಧ ಸಲ್ಲದು, ಹಾವನೂರು ಆಯೋಗ ವರದಿ ಜಾರಿಯ ಸಂದರ್ಭದಲ್ಲಿಯೂ ಇಂತಹ ವಿರೋಧವಿತ್ತು ಆದರೂ ಜಾರಿಯಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.