ADVERTISEMENT

ರಾಯಚೂರು | ಸೆಪ್ಟೆಂಬರ್‌ನಲ್ಲಿ ಗೂಡ್ಸ್ ರೈಲು, ಗೋದಾಮು ಉದ್ಘಾಟನೆ: ಸೋಮಣ್ಣ

ಸಿಂಧನೂರುವರೆಗೆ ಬೆಂಗಳೂರು-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ವಿಸ್ತರಣೆ ಸೇವೆಗೆ ಸಚಿವ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 2:35 IST
Last Updated 13 ಜುಲೈ 2025, 2:35 IST
ಸಿಂಧನೂರಿನ ರೈಲು ನಿಲ್ದಾಣದಲ್ಲಿ ಶನಿವಾರ ಸಿಂಧನೂರುವರೆಗೆ ವಿಸ್ತರಣೆಗೊಂಡ ಬೆಂಗಳೂರು–ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಸಂಚಾರ ಸೇವೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು
ಸಿಂಧನೂರಿನ ರೈಲು ನಿಲ್ದಾಣದಲ್ಲಿ ಶನಿವಾರ ಸಿಂಧನೂರುವರೆಗೆ ವಿಸ್ತರಣೆಗೊಂಡ ಬೆಂಗಳೂರು–ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಸಂಚಾರ ಸೇವೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು   

ಸಿಂಧನೂರು: ‘ಗಿಣಿಗೇರಾ-ರಾಯಚೂರು ರೈಲ್ವೆ ಮಾರ್ಗ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಭಾಗ ವ್ಯಾಪಾರ-ವಹಿವಾಟುಗಳಿಗೆ ಅತ್ಯಂತ ಅನುಕೂಲಕರವಾಗಿದೆ. ಗೂಡ್ಸ್ ರೈಲು ಸಂಚಾರ ಹಾಗೂ ರಸಗೊಬ್ಬರ ದಾಸ್ತಾನು ಮಾಡಲು ಗೋದಾಮು ನಿರ್ಮಿಸಿ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ನಾನೇ ಬಂದು ಉದ್ಘಾಟನೆ ಮಾಡುತ್ತೇನೆ’ ಎಂದು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ರೈಲು ನಿಲ್ದಾಣದಲ್ಲಿ ಸಿಂಧನೂರುವರೆಗೆ ವಿಸ್ತರಣೆಗೊಂಡ ಬೆಂಗಳೂರು–ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಸಂಚಾರ ಸೇವೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಸಿಂಧನೂರು, ಬಳ್ಳಾರಿ, ಗುಂತಗಲ್ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶೌಚಾಲಯ, ವಿಶ್ರಾಂತಿ ಗೃಹ, ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ ಸೌಲಭ್ಯವನ್ನು ಎಂಟು ದಿನಗಳೊಳಗೆ ಒದಗಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘ಪ್ರತಿದಿನ ಈ ರೈಲು ಮಧ್ಯಾಹ್ನ 1.30 ಗಂಟೆಗೆ ಸಿಂಧನೂರಿನಿಂದ ಹೊರಡಲಿದೆ. ನಂತರ ಗದಗ, ಅಣ್ಣಿಗೇರಿ, ಶಿಶ್ವಿನಹಳ್ಳಿ ಮೂಲಕ ಸಂಜೆ 6 ಗಂಟೆಗೆ ಹುಬ್ಬಳ್ಳಿಗೆ ತೆರಳಲಿದೆ. ಅಲ್ಲಿಂದ 6.45ಕ್ಕೆ ಹೊರಟು ರಾತ್ರಿ 3.55ಕ್ಕೆ ಬೆಂಗಳೂರಿಗೆ ತಲುಪಲಿದೆ. ಪ್ರತಿದಿನ ಬೆಂಗಳೂರಿನಿಂದ ರಾತ್ರಿ 12.15ಕ್ಕೆ ಹೊರಡುವ ಈ ರೈಲು ಬೆಳಿಗ್ಗೆ 9 ಗಂಟೆಗೆ ಹುಬ್ಬಳ್ಳಿ, ಮಧ್ಯಾಹ್ನ 2.30ಕ್ಕೆ ಸಿಂಧನೂರು ನಿಲ್ದಾಣ ತಲುಪಲಿದೆ’ ಎಂದು ತಿಳಿಸಿದರು.

‘ಗಿಣಿಗೇರಾ-ರಾಯಚೂರು, ಶಹಪುರ-ವಾಡಿ, ಕುಷ್ಟಗಿ-ಜುಮಾಲಪುರ, ಶಹಾಪುರ-ಜುಮಲಾಪುರ, ಲಿಂಗಸುಗೂರು-ಗುರುಗುಂಟಾ, ಆಲಮಟ್ಟಿ-ಯಾದಗಿರಿ, ಆಲಮಟ್ಟಿ-ಚಿತ್ರದುರ್ಗ, ಆಲಮಟ್ಟಿ-ಬಾಗಲಕೋಟೆ, ಗಂಗಾವತಿ-ದರೋಜಿ, ಕೊಟ್ಟೂರು-ಚಿತ್ರದುರ್ಗ, ಚಿಕ್ಕಮಗಳೂರು-ಬಳ್ಳಾರಿ, ಹುಬ್ಬಳ್ಳಿ-ಹೊಸಪೇಟೆ, ಕಡಪ-ಚಿಕ್ಕಮಗಳೂರು ಮತ್ತಿತರ ರೈಲ್ವೆ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ನಿಗದಿತ ಕಾಲಾವಧಿಯಲ್ಲಿ ಕೆಲಸ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗವುದು’ ಎಂದರು.

ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ್, ಶಾಸಕರಾದ ಹಂಪನಗೌಡ ಬಾದರ್ಲಿ, ಡಾ.ಶಿವರಾಜ ಪಾಟೀಲ, ಮಾನಪ್ಪ ವಜ್ಜಲ್, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರ, ಬಸನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ, ಬಸವರಾಜ ದಢೇಸುಗೂರು, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ಡಾ.ಬಸವರಾಜ ಕ್ಯಾವಟರ್, ಎಂ.ದೊಡ್ಡಬಸವರಾಜ, ರಾಜೇಶ ಹಿರೇಮಠ, ಡಿವೈಎಸ್‍ಪಿ ಬಿ.ಎಸ್.ತಳವಾರ ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಹಲವಾರು ಕೆಲಸಗಳು ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ವಿಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಸಭೆ ನಡೆಸಿ ರೈಲ್ವೆ ಯೋಜನೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು
– ವಿ.ಸೋಮಣ್ಣ, ಕೇಂದ್ರ ಸಚಿವ

‘ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡಲಿ’

‘ಪ್ರಧಾನಿ ಮೋದಿ ಅವರು ನನೆಗುದಿಗೆ ಬಿದ್ದ ಎಲ್ಲ ರೈಲ್ವೆ ಯೋಜನೆಗಳನ್ನು ಪುನಾರಂಭಗೊಳಿಸಿ ಅಗತ್ಯ ಅನುದಾನ ನೀಡಿದ್ದರಿಂದ ರೈಲ್ವೆ ಕಾಮಗಾರಿಗಳು ದೇಶದಾದ್ಯಂತ ಪ್ರಗತಿಯಲ್ಲಿ ಸಾಗುತ್ತಿವೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಶೀಘ್ರ ಬಿಡುಗಡೆ ಮಾಡಲಿ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ‘ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ನಕ್ಸಲ್ ಪ್ರದೇಶವಾದ ಛತ್ತೀಸ್‌ಗಢದ ಕೊಂಡಗಾಂವ್‍ನಲ್ಲಿ ₹8 ಸಾವಿರ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರೈಲು ನಿಲ್ದಾಣ ನಿರ್ಮಿಸಲಾಗಿದ್ದು ಸಂಚಾರವೂ ಆರಂಭಗೊಂಡಿದೆ. ಆದಿವಾಸಿಗಳು ವಾಸಿಸುವ ಕೊರೊರಾದಲ್ಲಿ ರೈಲು ನಿಲ್ದಾಣ ನಿರ್ಮಿಸಿ ಅಗತ್ಯ ಸೌಕರ್ಯ ಒದಗಿಸಲಾಗಿದೆ’ ಎಂದರು.

ಮುಂಗಡ ಟಿಕೆಟ್ ಬುಕಿಂಗ್‍ಗೆ ಮನವಿ

ಸಿಂಧನೂರು: ನಗರದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮುಂಗಡ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಹಾಗೂ ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ ಅವರು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು. ‘ಜಿಲ್ಲೆಯಲ್ಲಿ ಸಿಂಧನೂರು ತಾಲ್ಲೂಕು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ವಿವಿಧ ಕೈಗಾರಿಕೆ ಘಟಕ ರೈಸ್‌ಮಿಲ್‌ ಟ್ರ್ಯಾಕ್ಟರ್ ಶೋರೂಂ ಆಟೊ ಮೊಬೈಲ್ಸ್ ಹೆಚ್ಚಿನ ಪ್ರಮಾಣದಲ್ಲಿವೆ. ಪ್ರಮುಖ ನಗರಗಳಿಗೆ ಹಾದುಹೋಗಲು ಕೇಂದ್ರ ಸ್ಥಾನವಾಗಿದೆ. ಹಾಗಾಗಿ ಸರಕುಗಳನ್ನು ಸಾಗಿಸಲು ಹಾಗೂ ಪ್ರಯಾಣಿಕರಿಗೆ ಮುಂಗಡ ಬುಕಿಂಗ್ ವ್ಯವಸ್ಥೆ ಕಲ್ಪಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.