ADVERTISEMENT

ನೆಲಸಮಗೊಳ್ಳುತ್ತಿರುವ ಜಲದುರ್ಗ ಕೋಟೆ: ಅಭಿವೃದ್ಧಿ ಹೆಸರಲ್ಲಿ ಕೋಟ್ಯಂತರ ಹಣ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 4:12 IST
Last Updated 29 ಜುಲೈ 2024, 4:12 IST
ಲಿಂಗಸುಗೂರು ತಾಲ್ಲೂಕು ಕೃಷ್ಣಾ ನದಿ ನಡುಗಡ್ಡೆ ಪ್ರದೇಶದಲ್ಲಿರುವ ಐತಿಹಾಸಿಕ ಜಲದುರ್ಗ ಕೋಟೆಯ ಪ್ರವೇಶ ದ್ವಾರ ಭಾಗಶಃ ಕುಸಿದು ನೆಲಸಮಗೊಂಡಿರುವುದು
ಲಿಂಗಸುಗೂರು ತಾಲ್ಲೂಕು ಕೃಷ್ಣಾ ನದಿ ನಡುಗಡ್ಡೆ ಪ್ರದೇಶದಲ್ಲಿರುವ ಐತಿಹಾಸಿಕ ಜಲದುರ್ಗ ಕೋಟೆಯ ಪ್ರವೇಶ ದ್ವಾರ ಭಾಗಶಃ ಕುಸಿದು ನೆಲಸಮಗೊಂಡಿರುವುದು   

ಲಿಂಗಸುಗೂರು: ಕೃಷ್ಣಾ ನದಿ ನಡುಗಡ್ಡೆ ಪ್ರದೇಶದಲ್ಲಿರುವ ಆದಿಲ್‍ಶಾಹಿ ಮತ್ತು ವಿಜಯನಗರ ಅರಸರ ಸುಪರ್ದಿಯಲ್ಲಿದ್ದ ಜಲದುರ್ಗ ಕೋಟೆ ವರ್ಷದಿಂದ ವರ್ಷಕ್ಕೆ ನೆಲಸಮಗೊಳ್ಳುತ್ತ ಸಾಗಿದೆ. ಪ್ರವಾಸಿಗರ ಅನುಕೂಲಕ್ಕೆಂದು ಅಭಿವೃದ್ಧಿಗಾಗಿ ಕೈಗೆತ್ತಿಕೊಂಡ ಕೋಟ್ಯಂತರ ಅನುದಾನ ವ್ಯರ್ಥವಾಗಿದ್ದು ಹೇಳುವವರು, ಕೇಳುವವರು ಇಲ್ಲವಾಗಿದೆ.

ಪ್ರವಾಸೋದ್ಯಮ ಇಲಾಖೆ ಯೋಜನೆಯಡಿ 2019-20ರಲ್ಲಿ ಜಲದುರ್ಗ ಕೋಟೆ ಒಳಗಡೆ ಪ್ರವಾಸಿಗರಿಗೆ ಉದ್ಯಾನ, ಹೈಟೆಕ್‍ ಶೌಚಾಲಯ, ಹುಲ್ಲಿನ ಹಾಸು, ವಿಶ್ರಾಂತಿ ಬೆಂಚ್‍ಗಳು, ತಿರುಗಾಡಲು ಪಾದಚಾರಿ ರಸ್ತೆ, ಶುದ್ಧ ಹಾಗೂ ಸಮರ್ಪಕ ಕುಡಿವ ನೀರು ಪೂರೈಕೆ, ನೈರ್ಮಲ್ಯೀಕರಣ ವ್ಯವಸ್ಥೆಗೆಂದು ₹1 ಕೋಟಿ ಅನುದಾನ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ.

ಈ ಮುಂಚೆ ಕೋಟೆ ಭಾಗಶಃ ಪ್ರದೇಶವರೆಗೆ ಕಾಂಕ್ರಿಟ್‍ ರಸ್ತೆ, ಶುದ್ಧ ಕುಡಿವ ನೀರು ಪೂರೈಕೆ, ಅಲ್ಲಲ್ಲಿ ವೀಕ್ಷಣಾ ಸ್ಥಳಗಳನ್ನು ಗುರುತಿಸಿ ಲಕ್ಷಾಂತರ ಹಣ ಖರ್ಚು ಮಾಡಲಾಗಿತ್ತು. ಇಷ್ಟೊಂದು ಪ್ರಮಾಣದ ಹಣ ಖರ್ಚು ಮಾಡುತ್ತ ಬಂದಿದ್ದರೂ ಕೋಟೆ, ಮರಣದಂಡನೆ ನೀಡುವ ಬುರುಜು, ಇತರೆ ಕುರುಹುಗಳು ಕಾಣಸಿಗದಂತಾಗಿರುವುದು ವಿಪರ್ಯಾಸವೇ ಸರಿ.

ADVERTISEMENT

ಪ್ರವಾಸಕ್ಕೆಂದು ರಾಜ್ಯದ ವಿವಿಧ ಜಿಲ್ಲೆ ಮತ್ತು ಅಂತರರಾಜ್ಯದಿಂದ ಆಗಮಿಸುವ ಪ್ರವಾಸಿಗರು ವರ್ಷದಿಂದ ವರ್ಷಕ್ಕೆ ನೆಲಸಮಗೊಳ್ಳುತ್ತಿರುವ ಕೋಟೆ ಕೊತ್ತಲು ಕುರುಹುಗಳು ಕಂಡು ನಿರಾಶೆಗೊಳ್ಳುತ್ತಾರೆ. ಸ್ವಲ್ಪ ವಿಶ್ರಾಂತಿ ಪಡೆದು ನಿಸರ್ಗ ಸೌಂದರ್ಯ ಸವಿಯಲು ಅಗತ್ಯ ಸೌಲಭ್ಯ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ.

‘ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬಂದು ಹೋಗುವ ಪ್ರವಾಸಿಗರಿಗೆ ವಾಸ್ತವ್ಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಹೈಟೆಕ್‍ ಶೌಚಾಲಯ, ಶುದ್ಧ ಕುಡಿವ ನೀರು ಇತರೆ ಸೌಲಭ್ಯಗಳಿಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ. ಒಂದಡೆ ಕೋಟೆ ಕುರುಹುಗಳ ನಾಶ, ಇನ್ನೊಂದಡೆ ಸೌಲಭ್ಯಗಳ ಮರೀಚಿಕೆ’ ಎಂದು ಪ್ರವಾಸಿಗ ಅಕ್ರಂಪಾಷ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಶಾಸಕ ಮಾನಪ್ಪ ವಜ್ಜಲ ಈಚೆಗೆ ಅಧಿವೇಶನದಲ್ಲಿ ಚರ್ಚಿಸಿದಾಗ, ‘ಜಲದುರ್ಗ ಪ್ರೇಕ್ಷಣೀಯ ಪ್ರದೇಶವು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಈಗಾಗಲೇ ಅಭಿವೃದ್ಧಿಗೆ ಅನುದಾನ ನೀಡಿದೆ. ಅಭಿವೃದ್ಧಿ ಬಗ್ಗೆ ಯಾವುದೇ ಸಭೆಗಳು ನಡೆದಿಲ್ಲ. ಪ್ತಸಕ್ತ ಸಾಲಿನಲ್ಲಿ ಅಭಿವೃದ್ಧಿಗಾಗಿ ಅನುದಾನದ ಲಭ್ಯತೆ ಆಧರಿಸಿ ಹೆಚ್ಚುವರಿ ಕಾಮಗಾರಿ ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದಾರೆ’ ಎಂಬ ಉತ್ತರ ಸರ್ಕಾರದಿಂದ ಸಿಕ್ಕಿದೆ.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರಿ) ರಾಜೇಂದ್ರ ಜಾಲ್ದಾರ್‌ ಅವರನ್ನು ಸಂಪರ್ಕಿಸಿದಾಗ, ‘ಜಲದುರ್ಗ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳ ಸ್ಥಿತಿಗತಿ ಹೀಗೆಯೇ ಇದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ರಯತ್ನಿಸುತ್ತೇವೆ’ ಎಂದರು.

ಲಿಂಗಸುಗೂರು ತಾಲ್ಲೂಕು ಕೃಷ್ಣಾ ನದಿ ನಡುಗಡ್ಡೆ ಪ್ರದೇಶದಲ್ಲಿರುವ ಐತಿಹಾಸಿಕ ಜಲದುರ್ಗ ಕೋಟೆಯ ಒಳ ಆವರಣದಲ್ಲಿ ನಿರ್ಮಿಸಿದ ಹೈಟೆಕ್ ಉದ್ಯಾನ ಮುಳ್ಳುಕಂಟೆ ಬೆಳೆದು ಪಾಳು ಬಿದ್ದಿರುವುದು
‘ಜಲದುರ್ಗ ಕೋಟೆಯಲ್ಲಿ ಆವರಣದಲ್ಲಿ ಪ್ರವಾಸಿಗರಿಗಾಗಿ ₹1ಕೋಟಿ ಅನುದಾನದಲ್ಲಿ ಉದ್ಯಾನ ಹೈಟೆಕ್‍ ಶೌಚಾಲಯ ಆಸನ ಹುಲ್ಲಿನ ಹಾಸು ಶುದ್ಧ ಕುಡಿಯುವ ನೀರು ಶೌಚಾಲಯ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿದ್ದೇವೆ
ಬಸವರಾಜ ಬಸ್ತಾನಿ ಲೊಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.