ADVERTISEMENT

ರಾಯಚೂರು | ಏರುಗತಿಯಲ್ಲಿ ಚಿಕನ್‌ ಮಾಂಸ ದರ

ಬೇಸಿಗೆ ಇದ್ದರೂ ಜಿಲ್ಲೆಯಲ್ಲಿ ಬೇಡಿಕೆಗೆ ಬರವಿಲ್ಲ

ನಾಗರಾಜ ಚಿನಗುಂಡಿ
Published 16 ಮೇ 2020, 17:40 IST
Last Updated 16 ಮೇ 2020, 17:40 IST
ರಾಯಚೂರಿನಲ್ಲಿ ಚಿಕನ್‌ ಮಾಂಸದ ದರವು ಏರಿಕೆಯಾದ ಬಗ್ಗೆ ವ್ಯಾಪಾರಿಯು ಫಲಕ ಹಾಕಿರುವುದು
ರಾಯಚೂರಿನಲ್ಲಿ ಚಿಕನ್‌ ಮಾಂಸದ ದರವು ಏರಿಕೆಯಾದ ಬಗ್ಗೆ ವ್ಯಾಪಾರಿಯು ಫಲಕ ಹಾಕಿರುವುದು   

ರಾಯಚೂರು: ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆಯಾದ ನಂತರ ಜನಜೀವನ ಸಹಜವಾಗಿದ್ದು, ಚಿಕನ್‌ ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಆದರೆ, ಪೂರೈಕೆ ಕೊರತೆಯಿಂದಾಗಿ ಚಿಕನ್‌ ಮಾಂಸದ ದರವು ವಾರದಿಂದ ವಾರಕ್ಕೆ ಏರುಗತಿಯಲ್ಲಿದೆ.

ಮೇ ಆರಂಭದಲ್ಲಿ ಕೆಜಿಗೆ ₹180 ರಷ್ಟಿದ್ದ ದರವು, ಎರಡು ವಾರದಲ್ಲಿ ಕೆಜಿಗೆ ₹240 ಕ್ಕೆ ಹೆಚ್ಚಳವಾಗಿದೆ. ದರ ಏರಿಕೆಯಿಂದ ಕಡುಬಡವರು ಮತ್ತು ಕೆಳಮಧ್ಯಮವರ್ಗದ ಜನರು ಮಾಂಸಾಹಾರ ಸೇವನೆಯನ್ನು ಅನಿವಾರ್ಯವಾಗಿ ಕಡಿಮೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಸಾಮಾನ್ಯವಾಗಿ ಪ್ರತಿ ಬುಧವಾರ ಮತ್ತು ಭಾನುವಾರ ಚಿಕನ್‌, ಮಟನ್‌ ಹಾಗೂ ಮೀನು ಖರೀದಿಗೆ ಜನರು ಧಾವಿಸುತ್ತಿದ್ದರು. ಇದೀಗ ವಾರಕ್ಕೊಮ್ಮೆ ಮಾಂಸಾಹಾರ ಸೇವನೆಯೂ ಕಷ್ಟ ಎನ್ನುತ್ತಿದ್ದಾರೆ.

ಆಶಾಪುರ ರಸ್ತೆ, ಸ್ಟೇಷನ್‌ ಸರ್ಕಲ್‌, ಸದರ್‌ ಬಜಾರ್‌ ಹಾಗೂ ಅಸ್ಕಿಹಾಳ ಮಾರ್ಗದಲ್ಲಿರುವ ಚಿಕನ್‌, ಮಟನ್‌ ಮಾಂಸದ ಅಂಗಡಿಗಳ ಎದುರು ಮೇ ಮೊದಲವಾರ ಜನರು ಸರದಿ ನಿಂತಿದ್ದ ದೃಶ್ಯ ಕಂಡು ಬಂದಿತ್ತು. ಈಗ ಸರದಿ ನಿಲ್ಲುವ ಸ್ಥಿತಿಯಿಲ್ಲ. ದರ ಏರಿಕೆಯಿಂದ ಬೇಡಿಕೆಯೂ ಕಡಿಮೆಯಾಗುತ್ತಿದೆ. ಆದರೆ ದರ ಮಾತ್ರ ಇಳಿಕೆ ಆಗುತ್ತಿಲ್ಲ. ಸಾಮಾನ್ಯವಾಗಿ ಪ್ರತಿವರ್ಷ ಏಪ್ರಿಲ್‌ ಹಾಗೂ ಮೇ ತಿಂಗಳುಗಳಲ್ಲಿ ಚಿಕನ್‌, ಮೊಟ್ಟೆ ದರಗಳು ಅಲ್ಪ ಇಳಿಕೆ ಆಗುತ್ತಿತ್ತು. ಈ ವರ್ಷ ಕೊರೊನಾ ಹಾವಳಿಯಿಂದಾಗಿ ಎಲ್ಲವೂ ತಿರುವು ಮುರುವಾಗಿದೆ.

ADVERTISEMENT

ಕೊರೊನಾ ಸೋಂಕು ಹರಡಬಹುದು ಎನ್ನುವ ವದಂತಿಯಿಂದ ಜನರು ಕಳೆದ ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಚಿಕನ್‌ ಮಾಂಸದತ್ತ ದೃಷ್ಟಿ ಹರಿಸಲಿಲ್ಲ. ಪಾರಂಗಳಲ್ಲಿ ಕೋಳಿಗಳನ್ನು ಕೊಲ್ಲಲಾಯಿತು. ಪ್ರತಿ ಕೆಜಿಗೆ ಚಿಕನ್‌ ಮಾಂಸ ₹100 ತನಕ ಇಳಿಕೆಯಾಗಿತ್ತು. ‘ದೇಹದ ತಾಪಮಾನ ಏರಿಕೆಯಾದರೆ ಕೊರೊನಾ ಸೋಂಕು ಬರುವುದಿಲ್ಲ ಎಂದು ಜನಸಾಮಾನ್ಯರಲ್ಲಿ ಚರ್ಚೆ ಆಗುತ್ತಿದೆ. ದರ ಏರಿಕೆಯಾದರೂ ಕೆಲವರು ಚಿಕನ್‌ ಮಾಂಸದ ಖರೀದಿಗೆ ಬರುತ್ತಿದ್ದಾರೆ’ ಎಂದು ಚಿಕನ್‌ ಮಾಂಸದ ವ್ಯಾಪಾರಿಯೊಬ್ಬರು ಹೇಳಿದರು.

‘ಚಿಕನ್‌, ಮಟನ್‌ ಮಾಂಸದ ದರಗಳು ಏರಿಕೆಯಾದರೂ ಇಳಿಕೆಯಾದರೂ ಶ್ರೀಮಂತರಿಗೆ ವ್ಯತ್ಯಾಸ ಆಗುವುದಿಲ್ಲ. ಬಡವರಿಗೆ ಇದರಿಂದ ಬಹಳ ಕಷ್ಟವಾಗುತ್ತದೆ. ಮಟನ್‌ ದರವು ಕೆಜಿ ₹600 ಆಗಿದೆ. ಕನಿಷ್ಠ ಪಕ್ಷ ಚಿಕನ್‌ ಮಾಂಸ ಖರೀದಿಸುತ್ತಿದ್ದರು. ಈಗ ಅದು ಕೂಡಾ ಕೈಗೆ ನಿಲುಕದ ಪರಿಸ್ಥಿತಿ ಬಂದಿದೆ. ದರ ಏರಿಕೆಯನ್ನು ಸರ್ಕಾರ ತಡೆಯಬೇಕು. ಪ್ರತಿದಿನ ಜನರು ಯಾರೂ ಮಾಂಸ ತಿನ್ನುವುದಿಲ್ಲ. ವಾರಕ್ಕೊಮ್ಮೆಯಾದರೂ ಮಾಂಸಾಹಾರ ತಿನ್ನುವವರಿಗೆ ಅನುಕೂಲ ಮಾಡಬೇಕು’ ಎಂದು ಐಬಿ ಕಾಲೋನಿಯ ಮಂಜುನಾಥ ಒತ್ತಾಯಿಸಿದರು.

ಸುಗುಣಾ ಮತ್ತು ವೆಂಕೋಬಾ ಚಿಕನ್‌ ಮಾಂಸ ಮಾರಾಟದ ಅಂಗಡಿಗಳು ಜಿಲ್ಲೆಯಾದ್ಯಂತ ಇವೆ. ಸದ್ಯಕ್ಕೆ ಜಿಲ್ಲೆಯಿಂದ ಜಿಲ್ಲೆಗೆ ಸಾಕಷ್ಟು ಪ್ರಮಾಣದಲ್ಲಿ ಕೋಳಿಗಳ ಸಾಗಣೆ ಆಗುತ್ತಿಲ್ಲ. ಅದಕ್ಕಾಗಿ ಸ್ಥಳೀಯವಾಗಿ ದೊರೆಯುತ್ತಿರುವ ಕೋಳಿ ಮಾಂಸವನ್ನೆ ಮಾರಾಟ ಮಾಡಬೇಕಿದೆ. ಚಿಕನ್‌ ದರ ಇನ್ನೂ ಏರಿಕೆ ಆಗುತ್ತದೆ ಎನ್ನುವ ಸುಳಿವನ್ನು ವ್ಯಾಪಾರಿಗಳು ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.