ರಾಯಚೂರು ಜಿಲ್ಲೆ ಚಿಂಚರಕಿ ಸರ್ಕಾರಿ ಶಾಲೆಯಲ್ಲಿ ಸ್ಥಳೀಯರು ನೀಡಿದ ಆಹಾರ ಪದಾರ್ಥಗಳಿಂದ ತಯಾರಿಸಿದ ಬಿಸಿಯೂಟ ಮಾಡುತ್ತಿರುವ ಮಕ್ಕಳು
ಕವಿತಾಳ (ರಾಯಚೂರು ಜಿಲ್ಲೆ): ಸಮೀಪದ ಚಿಂಚರಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಹಾರ ಪದಾರ್ಥ ಪೂರೈಕೆಯಾಗದೇ ಒಂದು ವಾರದಿಂದ ಮಧ್ಯಾಹ್ನದ ಬಿಸಿಯೂಟ ಸ್ಥಗಿತವಾಗಿದೆ.
ಬಿಸಿಯೂಟ ಇಲ್ಲದೆ ಮಕ್ಕಳು ಪರದಾಟ ಗಮನಿಸಿದ ಸ್ಥಳೀಯರು 4 ದಿನದಿಂದ ಅಕ್ಕಿ ಹಾಗೂ ಮತ್ತಿತರ ಅಗತ್ಯ ಸಾಮಗ್ರಿಯನ್ನು ಶಾಲೆಗೆ ನೀಡುತ್ತಿದ್ದು, ಅದರಿಂದಲೇ ಬಿಸಿಯೂಟ ತಯಾರಿಸಲಾಗುತ್ತಿದೆ.
1ರಿಂದ 8ನೇ ತರಗತಿಯವರೆಗೆ 189 ಮಕ್ಕಳು ಶಾಲೆಯಲ್ಲಿದ್ದಾರೆ. ಚಿಂಚಕರಿಯಲ್ಲದೆ, ಸಮೀಪದ ಮದರಕಲ್ ಮತ್ತು ಮಲ್ಲಾಪುರದಿಂದಲೂ ಮಕ್ಕಳೂ ಬರುತ್ತಾರೆ.
ಅಕ್ಷರ ದಾಸೋಹ ಯೋಜನೆಯಡಿ ಅಕ್ಕಿ, ಬೇಳೆ, ಎಣ್ಣೆ, ಖಾರದ ಪುಡಿ, ಉಪ್ಪು, ಬೆಲ್ಲ, ಸಕ್ಕರೆ ಸೇರಿ ಯಾವುದೇ ಪದಾರ್ಥ ಪೂರೈಕೆ ಆಗಿಲ್ಲಎಂದು ಪಾಲಕರಾದ ಮೌನೇಶ, ಅಂಬಣ್ಣ ಆರೋಪಿಸಿದರು.
ಸ್ಥಳೀಯ ಮಕ್ಕಳು ಮಧ್ಯಾಹ್ನದ ಊಟಕ್ಕೆ ಮನೆಗೆ ಹೋಗುತ್ತಾರೆ. ಬೇರೆ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ನಾಲ್ಕು ದಿನಗಳಿಂದ ಸ್ಥಳೀಯರು ಅಕ್ಕಿ, ಬೇಳೆ ಹಾಗೂ ಮತ್ತಿತರ ಸಾಮಗ್ರಿ ನೀಡುತ್ತಿದ್ದು, ಬಿಸಿಯೂಟ ನೀಡಲಾಗುತ್ತಿದೆ. ಆಹಾರ ಪಧಾರ್ಥ ಪೂರೈಕೆಗೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮುದೆಪ್ಪ ಒತ್ತಾಯಿಸಿದರು.
ಆಹಾರ ಪದಾರ್ಥ ಖಾಲಿಯಾದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ ಎಂದು ಪ್ರಭಾರ ಮುಖ್ಯ ಶಿಕ್ಷಕಿ ಜುಬೇದಾ ಬೇಗಂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.