ADVERTISEMENT

ಸಿಂಧನೂರು: ಅಂಬಾಮಠಕ್ಕೆ ಡಿಸಿ, ಜಿ.ಪಂ ಸಿಇಒ ಭೇಟಿ ಪೂರ್ವ ಸಿದ್ಧತೆಗಳ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 6:36 IST
Last Updated 27 ಡಿಸೆಂಬರ್ 2025, 6:36 IST
ಸಿಂಧನೂರು ತಾಲ್ಲೂಕಿನ ಅಂಬಾಮಠಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ ಭೇಟಿ ನೀಡಿ ಶುಕ್ರವಾರ ಅಂಬಾದೇವಿ ಜಾತ್ರಾ ಮಹೋತ್ಸವ ಹಾಗೂ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಪೂರ್ವಸಿದ್ದತೆ ಕಾರ್ಯಗಳನ್ನು ವೀಕ್ಷಣೆ ಮಾಡಿದರು
ಸಿಂಧನೂರು ತಾಲ್ಲೂಕಿನ ಅಂಬಾಮಠಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ ಭೇಟಿ ನೀಡಿ ಶುಕ್ರವಾರ ಅಂಬಾದೇವಿ ಜಾತ್ರಾ ಮಹೋತ್ಸವ ಹಾಗೂ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಪೂರ್ವಸಿದ್ದತೆ ಕಾರ್ಯಗಳನ್ನು ವೀಕ್ಷಣೆ ಮಾಡಿದರು   

ಸಿಂಧನೂರು: ಜನವರಿ 3ರಂದು ತಾಲ್ಲೂಕಿನ ಸುಕ್ಷೇತ್ರ ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಚಿವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಶುಕ್ರವಾರ ಅಂಬಾಮಠಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.

ಅಂಬಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ಜಿಲ್ಲಾಧಿಕಾರಿ, ಶಿಲಾಮಂಟಪ ನಿರ್ಮಾಣ ಮತ್ತು ಕೆತ್ತನೆ ಕಾರ್ಯ, ಮಹಾರಥ ಬೀದಿ, ವಿದ್ಯುತ್ ದೀಪಾಲಂಕಾರ, ವಿವಿಧ ಅಂಗಡಿಗಳನ್ನು ಹಾಕುವ ಜಾಗ, ಪ್ರಸಾದ ನಿಲಯವನ್ನು ವೀಕ್ಷಿಸಿದರು.

ನಂತರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ ಮಾತನಾಡಿ,‘ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ 4 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಯಾವುದೇ ಅಡಚಣೆಗಳು ಉಂಟಾಗದಂತೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘ಜಾತ್ರಾ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯವಿರುವ ಕಡೆಗಳಲ್ಲಿ ಆರೋಗ್ಯ ಶಿಬಿರಗಳು ಮತ್ತು ಪ್ರಾಥಮಿಕ ಚಿಕಿತ್ಸೆ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು. ಭಕ್ತರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗದಂತೆ ಆರೋಗ್ಯ ಇಲಾಖೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಭಕ್ತರಿಗೆ ವಸತಿ ಸೌಕರ್ಯ, ಪ್ರಸಾದ ವ್ಯವಸ್ಥೆಗೆ ಸೂಕ್ತ ಕ್ರಮವಹಿಸಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ಅಂಬಾಮಠದ ಅಂಬಾದೇವಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಂಗನಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಸರ್ಕಲ್ ಇನ್‌ಸ್ಪೆಕ್ಟರ್ ವಿನಾಯಕ, ಗ್ರಾಮೀಣ ಪೊಲೀಸ್ ಠಾಣೆಯ ಸಬ್‍ ಇನ್‌ಸ್ಪೆಕ್ಟರ್ ಮೌನೇಶ ರಾಠೋಡ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಕೆಆರ್‌ಯುಐಡಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಮಹ್ಮದ್ ಸೋಹೆಲ್, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದೇವಸ್ಥಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಜಾತ್ರೆಯನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ
ನಿತೀಶ್ ಕೆ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.