ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ಕಾರ್ಮಿಕರ ಕಾಲೊನಿಗಳಿಗೆ ಮಣ್ಣು ಮಿಶ್ರಿತ ಕಲುಷಿತ ನೀರು ಪೂರೈಕೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಕಂಪನಿ ವತಿಯಿಂದ ಟಣಮಕಲ್ಲು ಗ್ರಾಮದಿಂದ ಹಟ್ಟಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ನಳದಲ್ಲಿ ಬರುವ ನೀರು ಗಬ್ಬು ವಾಸನೆಯಿಂದ ಕೂಡಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲೊನಿ ನಿವಾಸಿಗಳು ಇದ್ದಾರೆ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ.
ಮಣ್ಣು ಮಿಶ್ರಿತ ನೀರು ಸೇವನೆಯಿಂದ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದು, ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿದ್ದಾರೆ.
ಕುಡಿಯಲು ಯೋಗ್ಯವಲ್ಲದ ಮಣ್ಣು ಮಿಶ್ರಿತ ಬಳಕೆಗೆ ಬಾರದ ನೀರನ್ನು ಗಣಿ ಕಾರ್ಮಿಕರಿಗೆ ಕುಡಿಯಲು ಪೂರೈಕೆ ಮಾಡಲಾಗುತ್ತಿದ್ದು, ರೋಗಗಳು ಹರಡಿದರೆ ಗಣಿ ಕಂಪನಿಯ ಅಧಿಕಾರಿಗಳೇ ಹೊಣೆಗಾರರು ಎಂದು ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ನಿರ್ಲಕ್ಷ್ಯ ವಹಿಸಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಮಣ್ಣು ಮಿಶ್ರಿತ ನೀರು ಪೂರೈಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಕಾರ್ಮಿಕರಿಗೆ ಶುದ್ಧ ನೀರು ಪೂರೈಸಿ ಸಮಸ್ಯೆ ಬಗೆಹರಿಸಲಾಗುವುದುಪ್ರಕಾಶ ಕಾರ್ಯನಿರ್ವಾಹಕ ನಿರ್ದೇಶಕ ಹಟ್ಟಿ ಚಿನ್ನದ ಗಣಿ ಕಂಪನಿ
ಮಣ್ಣು ಮಿಶ್ರಿತ ನೀರು ಪೂರೈಕೆಯಿಂದ ಬಡಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಗಣಿ ಕಂಪನಿಯ ಅಧಿಕಾರಿಗಳು ಗಮನಹರಿಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಲಿಲಾಲು ಪೀರ್ ಮಾನವ ಬಂಧುತ್ವ ವೇದಿಕೆ ಹಟ್ಟಿ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.