ADVERTISEMENT

ಲಿಂಗಸುಗೂರು: ಸಿಪಿಐ ಅಮಾನತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮೇ 2025, 13:23 IST
Last Updated 14 ಮೇ 2025, 13:23 IST
ಲಿಂಗಸುಗೂರು ಪಟ್ಟಣದಲ್ಲಿ ಪ್ರಗತಿಪರ ಜಂಟಿ ಸಂಘಟನೆ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು
ಲಿಂಗಸುಗೂರು ಪಟ್ಟಣದಲ್ಲಿ ಪ್ರಗತಿಪರ ಜಂಟಿ ಸಂಘಟನೆ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು   

ಲಿಂಗಸುಗೂರು: ಪಟ್ಟಣದಲ್ಲಿ ಗೃಹಣಿ ಶಾಂತಲಾ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸದೇ  ರಕ್ಷಣೆ ಮಾಡುತ್ತಿರುವ ಸಿಪಿಐ ಪುಂಡಲಿಕ ಪಟಾತರ ಅವರನ್ನು ಅಮಾನತು ಮಾಡಬೇಕು ಎಂದು ಜನವಾದಿ ಮಹಿಳಾ ಸಂಘಟನೆ, ಎಸ್‌ಎಫ್‌ಐ, ಡಿವೈಎಫ್‌ಐ, ಸಿಐಟಿಯು ಹಾಗೂ ಪ್ರಗತಿಪರ ಜಂಟಿ ಸಂಘಟನೆ ನೇತ್ರತ್ವದಲ್ಲಿ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಗುರುಭವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ವಿವಿಧ ರಸ್ತೆಗಳ ಮೂಲಕ  ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘ ಜಿಲ್ಲಾ ಉಪಾಧ್ಯಕ್ಷ ಅಪ್ಪಣ್ಣ ಕಾಂಬಳೆ, ‘ಪಟ್ಟಣದ ನಿವಾಸಿ ಶಾಂತಲಾ ಅವರಿಗೆ ಗಂಡ ಸುನೀಲ ಹಾಗೂ ಕುಟಂಬಸ್ಥರು ವರದಕ್ಷಣೆ ಹಾಗೂ ಮಕ್ಕಳಾಗಿಲ್ಲ ಎಂದು ನಿರಂತರವಾಗಿ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದರಿಂದ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟು ಏ9ರಂದು ಸಾವಿಗೀಡಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಶಾಂತಲಾ ಅವರ ತಂದೆ ದಶರಥ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಒಂದು ತಿಂಗಳಾದರೂ ಆರೋಪಿಗಳನ್ನು ಬಂಧಿಸುವಲ್ಲಿ ಸಿಪಿಐ ಪುಂಡಲಿಕ ವಿಫಲರಾಗಿದ್ದಾರೆ. ಆರೋಪಿಗಳ ಜೊತೆ ಶಾಮೀಲಾಗಿ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಬಂಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ. ಸಿಪಿಐ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಈ ಪ್ರಕರಣದ ತನಿಖೆಗೆ ದಕ್ಷ ಅಧಿಕಾರಿಯನ್ನು ನೇಮಕ ಮಾಡಿ ಆರೋಪಿಗಳನ್ನು ಹಾಗೂ ಪ್ರಕರಣಕ್ಕೆ ಪ್ರಚೋದಿಸಿದವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ದಶರಥ ಪಾಚಿಂಗಿ, ಆಂಜನೇಯ ನಾಗಲಾಪುರ, ಚೆನ್ನಬಸವ ವಂದ್ಲಿಹೊಸೂರು, ಮಹಾಂತೇಶ ಬುದ್ದಿನ್ನಿ, ದಾವೂದ್, ಶಂಶುದ್ಧೀನ್, ನಾರಾಯಣ ಗೊಂದಳಿ, ತುಕಾರಾಂ ಗೊಂದಳಿ, ಶಂಕರ, ಅನಿಲ, ಪ್ರಜ್ವಲ, ನಾರಾಯಣ, ಕೃಷ್ಣ, ಹನುಮಂತ ನಾಗಲಾಪುರ, ಗಂಗಪ್ಪ, ದೇವು ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.