ADVERTISEMENT

ರಾಯಚೂರು: 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ

ಬೆಳಗಾಗುತ್ತಲೇ ಕೈಗಾಡಿ ಹಿಡಿದು ನೀರಿಗಾಗಿ ಅಲೆದಾಡುತ್ತಿರುವ ಮಹಿಳೆಯರು

ಚಂದ್ರಕಾಂತ ಮಸಾನಿ
Published 6 ಮೇ 2025, 5:49 IST
Last Updated 6 ಮೇ 2025, 5:49 IST
ಸಿರವಾರ ತಾಲ್ಲೂಕಿನ ಅತನೂರಲ್ಲಿ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡದ ಕಾರಣ ಗ್ರಾಮಸ್ಥರು ಕೈಗಾಡಿಗಳನ್ನು ಖರೀದಿಸಿ ಅದರಲ್ಲೇ ನಿತ್ಯ ನೀರು ತುಂಬಿಕೊಂಡು ಹೋಗುತ್ತಿದ್ದಾರೆ/ ಚಿತ್ರ: ಶ್ರೀನಿವಾಸ ಇನಾಂದಾರ್
ಸಿರವಾರ ತಾಲ್ಲೂಕಿನ ಅತನೂರಲ್ಲಿ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡದ ಕಾರಣ ಗ್ರಾಮಸ್ಥರು ಕೈಗಾಡಿಗಳನ್ನು ಖರೀದಿಸಿ ಅದರಲ್ಲೇ ನಿತ್ಯ ನೀರು ತುಂಬಿಕೊಂಡು ಹೋಗುತ್ತಿದ್ದಾರೆ/ ಚಿತ್ರ: ಶ್ರೀನಿವಾಸ ಇನಾಂದಾರ್   

ರಾಯಚೂರು: ಜಿಲ್ಲೆಯಲ್ಲಿ ಬಿಸಿಲು ಬೆಂಕಿ ಉಗುಳುತ್ತಿದೆ. ಅನೇಕ ಕೆರೆ ಕಟ್ಟೆಗಳಲ್ಲಿನ ನೀರು ಬತ್ತತೊಡಗಿವೆ. 65 ಗ್ರಾಮಗಳು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದು, ಮಹಿಳೆಯರಿಗೆ ರಣ ಬಿಸಿಲಲ್ಲಿ ನೀರು ಹೊತ್ತು ತರುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ.

ಊರಿನ ಜನ ಪಿಡಿಒಗಳಿಗೆ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಪತ್ರಕೊಡುತ್ತಲೇ ಇದ್ದಾರೆ. ಮುದ್ರಣ ಮಾಧ್ಯಮಗಳು ಜನರ ಕುಡಿಯುವ ನೀರಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲತ್ತಲೇ ಇವೆ. ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಹೆಚ್ಚಾಗುತ್ತಿವೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಗ್ರಾಮಸ್ಥರು ಸಹನೆ ಕಳೆದುಕೊಳ್ಳಲು ಆರಂಭಿಸಿದ್ದಾರೆ.

ಮಸ್ಕಿ ತಾಲ್ಲೂಕಿನ ಬೆಂಚಮರಡಿ ಗ್ರಾಮದಲ್ಲಿ ನಡೆದ ಘಟನೆ ಇದಕ್ಕೆ ನಿದರ್ಶನವಾಗಿದೆ. ಸಮಸ್ಯೆಗೆ ಪರಿಹರಿಸಬೇಕಿದ್ದ ಅಧಿಕಾರಿಗಳು ಕುಡಿಯಲು ನೀರು ಕೇಳಿದ ಗ್ರಾಮಸ್ಥರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಜನರಲ್ಲಿ ಆಕ್ರೋಶ ಹೆಚ್ಚಿಸಿದೆ.

ADVERTISEMENT

ಕೃಷ್ಣಾ ನದಿ ಬತ್ತಿ ಬರಿದಾಗಿದೆ. ಮಾನ್ವಿ ತಾಲ್ಲೂಕಿನ ರಾಜಲಬಂಡಾದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ನದಿ ದಂಡೆಯ ಗ್ರಾಮಗಳೂ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಆರಂಭಿಸಿವೆ. ಕಾಲುವೆಗಳಿಂದ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿದರೂ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಅನೇಕ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ.

ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ಅನುಷ್ಠಾನಗೊಳಿಸಿದರೂ ಐದು ವರ್ಷಗಳಿಂದ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಯೋಜನೆಯ ಉದ್ದೇಶವೇ ಸಫಲವಾಗಿಲ್ಲ. ಪರಿಣಾಮ ಜನ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಬೇಕಾಗಿದೆ,

ಜಿಲ್ಲೆಯ ಮಸ್ಕಿ ತಾಲ್ಲೂಕಿನಲ್ಲಿ 23, ಲಿಂಗಸೂಗೂರಲ್ಲಿ 21, ರಾಯಚೂರಲ್ಲಿ 12 ಹಾಗೂ ದೇವದುರ್ಗ ತಾಲ್ಲೂಕಿನ 9 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಮೇ ಮಧ್ಯಂತರದಲ್ಲಿ ಅಕಾಲಿಕ ಮಳೆ ಬಾರದಿದ್ದರೆ ಮತ್ತಷ್ಟು ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ದೇವದುರ್ಗ ತಾಲ್ಲೂಕಿನಲ್ಲಿ 54, ಲಿಂಗಸುಗೂರು ತಾಲ್ಲೂಕಿನಲ್ಲಿ 14, ಮಾನ್ವಿಯಲ್ಲಿ 22, ರಾಯಚೂರು 72, ಸಿಂಧನೂರು 10, ಮಸ್ಕಿ 23 ಹಾಗೂ ಸಿರವಾರ ತಾಲ್ಲೂಕಿನಲ್ಲಿ 15 ಸೇರಿದಂತೆ ಒಟ್ಟು 211 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿಟ್ಟುಕೊಳ್ಳಲಾಗಿದೆ.


270 ಕೆರೆಗಳಿದ್ದರೂ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ

ರಾಯಚೂರು ಜಿಲ್ಲೆಯಲ್ಲಿ ಒಟ್ಟು 270 ಕೆರೆಗಳಿವೆ. ಸಿಂಧನೂರಲ್ಲಿ 76, ಸಿರವಾರ ತಾಲ್ಲೂಕಿನಲ್ಲಿ 42, ಮಸ್ಕಿಯಲ್ಲಿ 22, ರಾಯಚೂರಲ್ಲಿ 14, ಮಾನ್ವಿಯಲ್ಲಿ 12, ದೇವದುರ್ಗತಾಲ್ಲೂಕಿನಲ್ಲಿ 5, ಲಿಂಗಸುಗೂರಲ್ಲಿ 3 ಹಾಗೂ ಲಿಂಗಸುಗೂರು ತಾಲ್ಲೂಕಿನಲ್ಲಿ 2 ಕುಡಿಯುವ ನೀರಿನ ಕೆರೆಗಳಿವೆ. ಅವುಗಳಲ್ಲಿ ಬಹುತೇಕ ಅರ್ಧದಷ್ಟು ಖಾಲಿ ಆಗಿವೆ. 14 ಕೆರೆಗಳು ಸಂಪೂರ್ಣ ಖಾಲಿ ಆಗಿವೆ.

ಜಿಲ್ಲೆಯಲ್ಲಿ ಒಟ್ಟು 704 ಆರ್.ಒ ಪ್ಲಾಂಟ್‌ಗಳಿದ್ದರೂ ನಿರ್ವಹಣೆ ಕೊರತೆಯಿಂದ 165 ಕಾರ್ಯನಿರ್ವಹಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮುಂದಿನ ಆರು ತಿಂಗಳಲ್ಲಿ ಉಂಟಾಗಬಹುದಾದ ನೀಲನಕ್ಷೆ ಸಿದ್ಧಪಡಿಸತೊಡಿದ್ದಾರೆ. ₹6 ಕೋಟಿ ಅಂದಾಜು ವೆಚ್ಚದ ಪಟ್ಟಿಯನ್ನೂ ತಯಾರಿಸಿದ್ದಾರೆ. ಅದಕ್ಕೆ ಸರ್ಕಾರದ ಅನುಮತಿ ಸಿಗುವ ವರೆಗೂ ಬೇಸಿಗೆ ಮುಗಿಯಲಿದೆ.

ಜಿಲ್ಲೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂಥ ಸ್ಥಿತಿ ನಿರ್ಮಾಣವಾಗಿಲ್ಲ. ಕೆಲ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಕೊಡಲಾಗುತ್ತಿದೆ.
-ರಾಹುಲ್ ಪಾಂಡ್ವೆ, ಜಿಲ್ಲಾ ಪಂಚಾಯಿತಿ ಸಿಇಒ
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಕ್ಷೇತ್ರಗಳ ಶಾಸಕರು ಗ್ರಾಮಗಳಿಗೆ ಭೇಟಿಕೊಟ್ಟರೆ  ಜನರ ಎದುರಿಸುತ್ತಿರುವ ಕುಡಿಯುವ ನೀರಿನ ಗಂಭೀರ ಸಮಸ್ಯೆಯ ಅರಿವಾಗಲಿದೆ.
-ರಂಗನಾಥ ಪೊಲೀಸ್‌ಪಾಟೀಲ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ರಾಯಚೂರು ಜಿಲ್ಲೆಯಲ್ಲಿ 63 ಖಾಸಗಿ ಕೊಳವೆಬಾವಿಗಳ ನೀರನ್ನು ಬಾಡಿಗೆ ಪಡೆಯಲಾಗಿದೆ. 30 ಹಳ್ಳಿಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ
-ಶಿವಾನಂದ ಭಜಂತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ
ರಾಯಚೂರು ತಾಲ್ಲೂಕಿನ ಕಲ್ಮಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಳವಾಯಿ ಕ್ಯಾಂಪ್‌ನಲ್ಲಿ ಮಧ್ಯಾಹ್ನ ನೆತ್ತಿ ಸುಡುವ ಬಿಸಿಲಲ್ಲಿ ನೀರು ಒಯ್ಯುತ್ತಿರುವ ಮಹಿಳೆಯರು
ರಾಯಚೂರು ತಾಲ್ಲೂಕಿನ ಆತನೂರು ಬಳಿ ಕೃಷ್ಣಾ ನದಿ ಸಂಪೂರ್ಣ ಬತ್ತಿದೆ
ಮಾನ್ವಿ ತಾಲ್ಲೂಕಿನ ರಾಜಲಬಂಡಾ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.