ADVERTISEMENT

ಮುನಿರತ್ನ ಮೇಲೆ ಮೊಟ್ಟೆ ಎಸೆತ: ಶಾಸಕರ ಧ್ವನಿ ಅಡಗಿಸುವ ಕೆಲಸ; ಶಿವರಾಜ ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 13:03 IST
Last Updated 26 ಡಿಸೆಂಬರ್ 2024, 13:03 IST
ಡಾ.ಶಿವರಾಜ ಪಾಟೀಲ
ಡಾ.ಶಿವರಾಜ ಪಾಟೀಲ   

ರಾಯಚೂರು: ‘ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣ ಶಾಸಕರ ಧ್ವನಿ ಹತ್ತಿಕ್ಕುವ ಕಾರ್ಯವಾಗಿದೆ. ಇಂತಹ ಕೃತ್ಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

‘ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದ ವ್ಯಕ್ತಿಗಳು ಕಾಂಗ್ರೆಸ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ಶಾಸಕರೊಬ್ಬರಿಗೆ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡದ ಮುಖಂಡರು ಅವರ ಮೇಲೆ ಮೊಟ್ಟೆ ಎಸೆದು ಹಲ್ಲೆ ಮಾಡಿರುವುದು ದುರಾದೃಷ್ಟಕರ ಸಂಗತಿ’ ಎಂದು ನಗರದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಟೀಕಿಸಿದರು.

‘ಮುನಿರತ್ನ ವಿರುದ್ಧ ಸೋತು ಹತಾಶರಾದ ಕಾಂಗ್ರೆಸ್ ನಾಯಕರು ಇಂತಹ ಕೀಳು ಮಟ್ಟದ ರಾಜಕಾರಣಕ್ಕೆ ಇಳಿದಿರುವುದು ಸ್ಪಷ್ಟವಾಗುತ್ತಿದೆ. ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ವಿರೋಧ ಪಕ್ಷದ ಶಾಸಕರ, ನಾಯಕರ ಮೇಲೆ ಹಲ್ಲೆ, ದೌರ್ಜನ್ಯ ಮಾಡುತ್ತಿರುವ ಬಗ್ಗೆ ನೋಡಿದರೆ ಸ್ವಪಕ್ಷದ ನಾಯಕರೇ ಸರ್ಕಾರದಿಂದ ಅಸಮಾಧಾನಗೊಂಡು ಅಶಾಂತಿ ಸೃಷ್ಟಿಸುವ ಅನುಮಾನ ಮೂಡುತ್ತಿದೆ. ರಾಜಕೀಯ ಏನೇ ಇದ್ದರೂ ಜನರ ಪ್ರತಿನಿಧಿಯಾದ ಶಾಸಕರ ಧ್ವನಿ ಅಡಗಿಸುವ ಕೆಲಸ ಮಾಡುವುದು ಸರಿಯಲ್ಲ‘ ಎಂದು ಕಿಡಿಕಾರಿದರು.

ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ: ‘ಸಂವಿಧಾನ ಬದಲಾಣೆ ಮಾಡುವುದಾಗಿ ಬಿಜೆಪಿ ಎಲ್ಲಿಯೂ ಹೇಳಿಲ್ಲ. ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ‘ ಎಂದು ಶಿವರಾಜ ಪಾಟೀಲ ಹೇಳಿದರು.

ADVERTISEMENT

‘ಹಿಂದೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಹೆಗಡೆ ನೀಡಿದ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ. ಅವರು ವ್ಯಕ್ತಿಗತ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಅವರ ಹೇಳಿಕೆಗೂ ಬಿಜೆಪಿಗೆ ಸಂಬಂಧವಿಲ್ಲ’ ಎಂದರು.

‘ಅಂಬೇಡ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್‌, ಅನೇಕ ಬಾರಿ ಡಾ.ಅಂಬೇಡ್ಕರ್‌ಗೆ ಅವಮಾನ ಮಾಡಿದೆ. ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಮಾತನಾಡಿದ್ದರೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಅಂಬೇಡ್ಕರ್ ಬದುಕಿದ್ದಾಗ ನಿರಂತರವಾಗಿ ಅಪಮಾನ ಮಾಡಿದ್ದ ಕಾಂಗ್ರೆಸ್ಸಿಗರಿಗೆ ಅವರ ಹೆಸರು ಹೇಳುವ ನೈತಿಕ ಹಕ್ಕು ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.