ADVERTISEMENT

ವೈಜ್ಞಾನಿಕ ಕೃಷಿ ಪದ್ದತಿಗೆ ರೈತರನ್ನು ಪ್ರೋತ್ಸಾಹಿಸಿ: ಡಾ.ವಿಲಾಸ ಎ.ಟೊಣಪಿ ಸಲಹೆ

ಹೈದರಾಬಾದ್ ಐಸಿಎಆರ್ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 14:22 IST
Last Updated 13 ನವೆಂಬರ್ 2021, 14:22 IST
ರಾಯಚೂರಿನ ವಿರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಡಿಪ್ಲೊಮಾ ಪದವಿ (ಡಿಎಎಸ್ಇ) ಪ್ರಮಾಣ ಪತ್ರಗಳ ಪ್ರದಾನ ಸಮಾರಂಭ ಹಾಗೂ ಹೊಸ ಕೃಷಿ ಪರಿಕರ ಮಾರಾಟಗಾರರ ತಂಡಕ್ಕೆ ಚಾಲನೆ ನೀಡುವ ಸಮಾರಂಭವನ್ನು ಹೈದರಾಬಾದ್ ಐಸಿಎಆರ್ ನಿರ್ದೇಶಕ ಡಾ.ವಿಲಾಸ ಎ.ಟೊಣಪಿ ಉದ್ಘಾಟಿಸಿ ಮಾತನಾಡಿದರು
ರಾಯಚೂರಿನ ವಿರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಡಿಪ್ಲೊಮಾ ಪದವಿ (ಡಿಎಎಸ್ಇ) ಪ್ರಮಾಣ ಪತ್ರಗಳ ಪ್ರದಾನ ಸಮಾರಂಭ ಹಾಗೂ ಹೊಸ ಕೃಷಿ ಪರಿಕರ ಮಾರಾಟಗಾರರ ತಂಡಕ್ಕೆ ಚಾಲನೆ ನೀಡುವ ಸಮಾರಂಭವನ್ನು ಹೈದರಾಬಾದ್ ಐಸಿಎಆರ್ ನಿರ್ದೇಶಕ ಡಾ.ವಿಲಾಸ ಎ.ಟೊಣಪಿ ಉದ್ಘಾಟಿಸಿ ಮಾತನಾಡಿದರು   

ರಾಯಚೂರು: ರೈತರಿಗೆ ಅನುಕೂಲವಾಗಲು ಹಾಗೂ ಕೃಷಿ ಅಭಿವೃದ್ಧಿಗೆ ನೂತನ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಕೃಷಿ ಪದ್ದತಿಯ ಬಗ್ಗೆ ತಿಳಿದುಕೊಂಡು ರೈತರಿಗೆ ಮಾಹಿತಿ ನೀಡುವುದು ಕೃಷಿ ಪರಿಕರ ಮಾರಾಟಗಾರರ ಮುಖ್ಯ ಕಾರ್ಯವಾಗಬೇಕು ಎಂದು ಹೈದರಾಬಾದ್‌ ಐಸಿಎಆರ್ ನಿರ್ದೇಶಕ ಡಾ.ವಿಲಾಸ ಎ.ಟೊಣಪಿ ಸಲಹೆ ನೀಡಿದರು.

ನಗರದ ವಿರಶೈವ ಕಲ್ಯಾಣ ಮಂಟಪದಲ್ಲಿ ಕೇಂದ್ರದ ಮ್ಯಾನೇಜ್ ಹೈದರಾಬಾದ್ ಸಂಸ್ಥೆ, ರಾಯಚೂರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯಗಳು, ಆತ್ಮಾ ಯೋಜನೆ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಶನಿವಾರ ಆಯೋಜಿಸಿದ್ದ ಡಿಪ್ಲೊಮಾ ಪದವಿ (ಡಿಎಎಸ್ಇ) ಪ್ರಮಾಣ ಪತ್ರಗಳ ಪ್ರದಾನ ಸಮಾರಂಭ ಹಾಗೂ ಹೊಸ ಕೃಷಿ ಪರಿಕರ ಮಾರಾಟಗಾರರ ತಂಡಕ್ಕೆ ಚಾಲನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೃಷಿ ಅಭಿವೃದ್ಧಿಗೆ ಕಾಲಕಾಲಕ್ಕೆ ಬದಲಾದ ತಂತ್ರಜ್ಞಾನ ಅಳವಡಿಕೆ ಮುಖ್ಯವಾಗಿದೆ. ಈ ಹಿಂದೆ ರೈತರು ಕೇವಲ ಸಾಂಪ್ರದಾಯಿಕ ಕೃಷಿಗೆ ಮುಂದಾಗುತ್ತಿದ್ದರು. ಆಧುನಿಕ ಯುಗದಲ್ಲಿ ಮಾಹಿತಿ, ತಂತ್ರಜ್ಞಾನದ ಸಹಾಯದಿಂದ ರೈತರಿಗೆ ಅನೇಕ ಸೌಲತ್ತುಗಳು ಲಭ್ಯವಾಗಲಿದೆ. ಕೃಷಿ ವಿಶ್ವವಿದ್ಯಾಲಯ ಹಾಗೂ ರೈತರ ನಡುವೆ ಸಂಪರ್ಕ ಸಾಧ್ಯವಾಗದೇ ಕೃಷಿ ಸಂಶೋಧನೆ, ಅಗತ್ಯ ಮಾಹಿತಿ ರೈತರಿಗೆ ಲಭ್ಯವಾಗುತ್ತಿರಲಿಲ್ಲ. ಆದರೆ 2016ರಿಂದ ಕೇಂದ್ರ ಸರ್ಕಾರ ನ್ಯಾಷನಲ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್ಟೆನ್ಶನ್ (ಎಂಎಎನ್ಎಜಿಇ) ರಾಜ್ಯ ಕೃಷಿ ನಿರ್ವಹಣೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆ (ಎಸ್ಎಎಂಇಟಿಐ) ಸಂಸ್ಥೆಗಳನ್ನು ಕೈಷಿ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜಿಸಿದ್ದರಿಂದ ಕೃಷಿ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಿದೆ ಎಂದರು.

ADVERTISEMENT

ಡಿಪ್ಲೊಮಾ ಪದವಿ ಪಡೆದ ಅಭ್ಯರ್ಥಿಗಳು ಕೃಷಿಯಲ್ಲಿ ಬಳಕೆ ಮಾಡಬಹುದಾದ ಹೊಸ ಪರಿಕರ ಪರಿಚಯಿಸಿ ವೈಜ್ಞಾನಿಕವಾಗಿ ಬಳಸುವುದಕ್ಕೆ ಬುನಾದಿಯಾಗಬೇಕು. ಸರ್ಕಾರ ತಂತ್ರಜ್ಞಾನಕ್ಕೆ ಸಾಕಷ್ಟು ಒತ್ತು ನೀಡಿದ್ದು ಕೃಷಿ ಕ್ಷೇತ್ರದಲ್ಲಿ ಅದರ ಬಳಕೆ ಸಾಧ್ಯತೆಯ ಬಗ್ಗೆ ರೈತರಿಗೆ ಮನದಟ್ಟುವ ಕಾರ್ಯ ಕೃಷಿ ಇಲಾಖೆ ಹಾಗೂ ಇತರೆ ಸಂಸ್ಥೆಗಳು ಕೊಂಡಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕೃಷಿ ತಂತ್ರಜ್ಞರ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಂ.ಸಿದ್ದಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಪರಿಕರಗಳ ತಂಡ ದೇಸಿ ಸಂಸ್ಥೆಗಳನ್ನು ಉತ್ತೇಜನ ನೀಡುವ ಅವಶ್ಯವಾಗಿದೆ. ಎಲ್ಲರ ಸಹಕಾರದಿಂದ ಕೃಷಿ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಕೊಟ್ರೇಶಪ್ಪ ಕೋರಿ ಮಾತನಾಡಿದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ರಮೇಶ ಬಾಬು, ಎಂಎಎನ್ಎಜಿಇ, ಎಸ್ಎಎಂಇಟಿಐ ರಾಜ್ಯ ನೋಡಲ್ ಅಧಿಕಾರಿ ಡಾ.ಎಂ.ಗೋಪಾಲ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಸುನಿಲ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ನಯೀಮ್ ಹುಸೇನ್, ವೀರಣ್ಣ ಕಮತರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.