ಲಿಂಗಸುಗೂರು: ತಾಲ್ಲೂಕಿನ ಐದನಾಳ ಕೆರೆ ಮೇಲುಸ್ತುವಾರಿ ಮತ್ತು ನಿರ್ವಹಣೆ ವೈಫಲ್ಯತೆಯಿಂದ ನೀರು ಸಂಗ್ರಹ ವಾಗದಿರುವುದರಿಂದ ಅಂತರ್ಜಲ ಮಟ್ಟ ಕುಸಿತವಾಗಿದೆ. ರೈತರ ಜಮೀನಿಗೆ ನೀರು ಹರಿಸುವಿಕೆ ಸ್ಥಗಿತಗೊಂಡು ಸಂಕಷ್ಟ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
10.77 ಚದರ ಕಿಲೋ ಮೀಟರ್ ಜಲಾನಯನ ಪ್ರದೇಶ ಹೊಂದಿರುವ ಕೆರೆ, 14.54 ಹೆಕ್ಟೇರ್ ಮುಳುಗಡೆ ಪ್ರದೇಶ ಹೊಂದಿದೆ. ಕೆರೆಯ 1.60 ಕಿ.ಮೀ ಕಾಲುವೆ ಮೂಲಕ 15.93 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. 6.40 ಮೀ ಎತ್ತರದ ಕೆರೆಯ ಒಡ್ಡು ಭಾಗಶಃ ಹೂಳು ತುಂಬಿ ವಿನಾಶದ ಹಂಚಿಗೆ ತಲುಪಿದೆ. ಕೆರೆಕೋಡಿ ಕಿತ್ತಿ ಹಾಳಾಗಿದೆ, ಒತ್ತುವರಿ ಆಗಿದ್ದು ಮುಳ್ಳುಕಂಟಿ ಆವರಿಸಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಿದರ್ಶನವಾಗಿದೆ.
25 ವರ್ಷಗಳಿಂದ ಕೆರೆ ನಿರ್ವಹಣೆ ಹೆಸರಲ್ಲಿ ಮುಳ್ಳುಕಂಟಿ ತೆಗೆಸಿ ಲಕ್ಷಾಂತರ ಹಣ ಲೂಟಿ ಹೊಡೆಯುತ್ತಿರುವುದು 2023-24ರ ಕಾಮಗಾರಿಯಲ್ಲಿ ಬಹಿರಂಗಗೊಂಡಿದೆ. ಮೂರು ತಿಂಗಳ ಹಿಂದೆ ಮುಳ್ಳುಕಂಟಿ ಕಡಿದು, ಕೆರೆ ಕಾಮಗಾರಿಗೆ ₹5 ಲಕ್ಷ ಅನುದಾನ ಬಂದಿತ್ತು, ಕಾಮಗಾರಿ ಮುಗಿಯಿತು ಎಂದು ಹಾರಿಕೆ ಉತ್ತರ ನೀಡಿದ್ದರು. ರೈತರ ಸಾಮೂಹಿಕವಾಗಿ ಪ್ರತಿಭಟನೆ ನಂತರ ಎಂಜಿನಿಯರ್‌ಗಳು ₹70 ಲಕ್ಷದ ಕ್ರಿಯಾಯೋಜನೆ ನೀಡಿದ್ದು ರೈತರನ್ನು ಕಂಗೆಡಿಸಿದೆ.
ಎರಡೂವರೆ ದಶಕಗಳಿಂದ ಗುತ್ತಿಗೆದಾರರು ಮತ್ತು ಎಂಜಿನಿಯರ್ ಕಾಮಧೇನುವಾಗಿದ್ದ ಐದನಾಳ ಕೆರೆ ವರ್ಷ ಶಾಪವಾಗಿ ಪರಿಣಮಿಸಿದೆ. ಪ್ರತಿಭಟನೆ ನಂತರದಲ್ಲಿ ಮಣ್ಣಿನ ಏರಿ ನೆಲಸಮಕ್ಕೆ ಮುಂದಾದಾಗ ಪುನಃ ರೈತರು ಪ್ರತಿಭಟನೆ ನಡೆಸಿ ಒಡ್ಡು ಹಾಳುಮಾಡದಂತೆ ತಡೆಯೊಡ್ಡಿದ್ದಾರೆ. ಹೂಳು ತೆಗೆದು, ಮುಳ್ಳುಕಂಟಿ ಸ್ವಚ್ಛಗೊಳಿಸಿ, ಕೆರೆ ಕೋಡಿ ಎತ್ತರಿಸಿ, ಒಡ್ಡು ನಿರ್ಮಾಣ ಆರಂಭಿಸುವಂತೆ ತಡೆಯಲಾಗಿದೆ.
‘ಎಸ್ಟಿಮೇಟ್ ಸಮೇತ ಕೆಲಸ ಮಾಡಲು ಪಟ್ಟು ಹಿಡಿದಿದ್ದೇವೆ. ಕೇವಲ ₹5 ಲಕ್ಷ ಬಂದಿದೆ ಎಂದು ಹೇಳಿದ್ದರು. ಪ್ರತಿಭಟನೆ ನಂತರ ₹70 ಲಕ್ಷದ ಎಸ್ಟಿಮೇಟ್ ನೀಡಿದ್ದಾರೆ. ಎಸ್ಟಿಮೇಟ್ ಆಧರಿಸಿ ಕಾಮಗಾರಿ ಮಾಡಿಸದೆ ಬಿಡುವುದಿಲ್ಲ’ ಎಂದು ರೈತರಾದ ಬಸವರಾಜ ಸೂಗೂರೆಡ್ಡಿ, ಲಕ್ಷ್ಮಣ ಕಟ್ಟಿಮನಿ, ಬಸವಂತಪ್ಪ ಮೂಲಿಮನಿ ಎಚ್ಚರಿಕೆ ನೀಡಿದ್ದಾರೆ.
2023-24ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆ ರಾಯಚೂರು, ಕೊಪ್ಪಳ ಸೇರಿದಂತೆ ಕೆರೆ ನಿರ್ವಹಣೆಗೆ ₹6.61 ಕೋಟಿ ಹಣ ನಿಗದಿಪಡಿಸಿದೆ. ಈಗಾಗಲೇ ₹5.41 ಕೋಟಿ ವೆಚ್ಚ ಮಾಡಲಾಗಿದೆ. ಕೆಕೆಆರ್‌ಡಿಬಿಯಿಂದ ಲಿಂಗಸುಗೂರು ಕ್ಷೇತ್ರಕ್ಕೆ ₹10 ಕೋಟಿ ಅನುದಾನ ಬಂದಿದೆ. ಚೆಕ್ ಡ್ಯಾಮ್ ಹೆಸರಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆಸಿರುವ ಬಗ್ಗೆ ಸಂಘ ಸಂಸ್ಥೆಗಳು ಆರೋಪ ಮಾಡಿವೆ.
‘ಸಣ್ಣ ನೀರಾವರಿ ಇಲಾಖೆ ಹಾಗೂ ಕೆಕೆಆರ್‌ಡಿಬಿಯ ನಿರ್ವಹಣೆ ವೆಚ್ಚದಲ್ಲಿ ₹ 82.43 ಕೋಟಿ ಹಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಹಣ ಖರ್ಚು ಮಾಡುತ್ತಿದೆ. ಕಳಪೆ ಕಾಮಗಾರಿಗಳ ಬಗ್ಗೆ ದೂರು ಸಲ್ಲಿಸಿದರು ಕೇಳುವವರಿಲ್ಲ. ಹೀಗಾಗಿ ಕೆರೆಗಳು ಹಾಳಾಗಿ, ಅಂತರ್ಜಲ ಮಟ್ಟ ಕುಸಿತಗೊಂಡು ರೈತರ ಪರದಾಟ ಹೆಚ್ಚಿದ್ದು ಸೂಕ್ತ ತನಿಖೆ ನಡೆಸಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅಮರೇಶ ಗೋಸ್ಲೆ.
‘ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಏನೇ ಮಾಹಿತಿ ಕೇಳಿದರೂ ಕುಷ್ಟಗಿ ಬರಲು ಹೇಳುತ್ತಾರೆ. ಕುಷ್ಟಗಿಯವರು ಕೊಪ್ಪಳದತ್ತ ಬೆರಳು ತೋರಿಸುತ್ತಾರೆ. ಕ್ಷೇತ್ರದಲ್ಲಿ ಅಧಿಕಾರಿಗಳು ಬರದೆ ರಾಜಕೀಯ ಪುಡಾರಿಗಳ ಹೆಸರಲ್ಲಿ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ಹಣ ಲೂಟಿ ಹೊಡೆಯುತ್ತಿದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಪ್ರಭುಲಿಂಗ ಮೇಗಳಮನಿ ಆಗ್ರಹಪಡಿಸಿದ್ದಾರೆ.
ಕೆರೆಗಳ ನಿರ್ವಹಣೆ ವೈಫಲ್ಯತೆ, ಮಾಹಿತಿದಾರರ ಆರೋಪ, ಐದನಾಳ ಕೆರೆ ಮೂರು ತಿಂಗಳಿಂದ ಫೋಕ್‍ಲೈನ್ ಬಿಟ್ಟು ನಾಪತ್ತೆಯಾಗಿರುವ ಗುತ್ತಿಗೆದಾರರ ಕುರಿತು ಮಾಹಿತಿ ಪಡೆಯಲು ಸಂಬಂಧಿಸಿದ ಕಿರಿಯ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಪ್ರಜಾವಾಣಿ ಸಂಪರ್ಕಿಸಲು ಮೊಬೈಲ್ ಕರೆ ಮಾಡಿದರು ಕೂಡ ಸ್ವೀಕರಿಸಿರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.