ADVERTISEMENT

ರಾಯಚೂರು: ಭೂ ಪರಿಹಾರ ಹೆಚ್ಚಿಸಲು ವಿವಿಧ ಗ್ರಾಮಗಳ ರೈತರ ಆಗ್ರಹ

ಗದಗ-ವಾಡಿ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 12:43 IST
Last Updated 26 ನವೆಂಬರ್ 2021, 12:43 IST
ಲಿಂಗಸುಗೂರಿಗೆ ಶುಕ್ರವಾರ ಭೇಟಿ ನೀಡಿದ್ದ ಗದಗ– ವಾಡಿ ರೈಲ್ವೆ ಮಾರ್ಗ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಅಶೋಕ ಅವರಿಗೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಮನವಿ ಸಲ್ಲಿಸಿದರು
ಲಿಂಗಸುಗೂರಿಗೆ ಶುಕ್ರವಾರ ಭೇಟಿ ನೀಡಿದ್ದ ಗದಗ– ವಾಡಿ ರೈಲ್ವೆ ಮಾರ್ಗ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಅಶೋಕ ಅವರಿಗೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಮನವಿ ಸಲ್ಲಿಸಿದರು   

ಲಿಂಗಸುಗೂರು: ‘ಗದಗ-ವಾಡಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ಕಾರ ನಿಗದಿಪಡಿಸಿರುವ ಭೂ ಪರಿಹಾರ ಅವೈಜ್ಞಾನಿಕವಾಗಿದ್ದು, ಕೂಡಲೇ ₹ 50 ಲಕ್ಷಕ್ಕೂ ಹೆಚ್ಚು ಭೂ ಸ್ವಾಧೀನ ಪರಿಹಾರ ನೀಡಬೇಕು‘ ಎಂದು ವಿವಿಧ ಗ್ರಾಮಗಳ ರೈತರು ಮನವಿ ಸಲ್ಲಿಸಿದರು.

ಶುಕ್ರವಾರ ಲಿಂಗಸುಗೂರಿಗೆ ಭೇಟಿ ನೀಡಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ಅಶೋಕ ಅವರಿಗೆ ಮನವಿ ಸಲ್ಲಿಸಿ, ಈಗಾಗಲೆ ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೂರು ಸುತ್ತಿನ ಮಾತುಕತೆಗಳಾಗಿವೆ. ಆ ಸಂದರ್ಭದಲ್ಲಿ ತಮ್ಮ ಜಮೀನುಗಳಿಗೆ ಹೆಚ್ಚುವರಿ ಭೂ ಪರಿಹಾರ ನಿಗದಿಪಡಿಸುವಂತೆ ತಕರಾರರು ಅರ್ಜಿ ಕೂಡ ಸಲ್ಲಿಸಲಾಗಿತ್ತು. ಆದಾಗ್ಯೂ ಕೂಡ ಮನಸೋ ಇಚ್ಛೆ ದರ ನಿಗದಿಪಡಿಸಿ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಆರೋಪಿಸಿದರು.

ಸಾಗುವಳಿ ಜಮೀನುಗಳಿಗೆ ಒಣ ಬೇಸಾಯ, ನೀರಾವರಿ ಮತ್ತು ಕೃಷಿಯೇತರ ಜಮೀನಾಗಿ ಪರಿವರ್ತಿತ ಜಮೀನುಗಳಿಗೆ ಪ್ರತ್ಯೇಕ ಬೆಲೆ ನಿಗದಿ ಪಡಿಸಬೇಕಿತ್ತು. ಆದರೆ, ಈಗ ಕೆಲ ರೈತರಿಗೆ ನೀಡಿರುವ ನೋಟಿಸ್‍ನಲ್ಲಿ ₹ 5 ಲಕ್ಷದಿಂದ ₹ 10ಲಕ್ಷದ ವರೆಗೆ ನಿಗದಿ ಮಾಡಿರುವುದು ಬಹಿರಂಗಗೊಂಡಿದೆ. ಈ ರೀತಿ ಅವೈಜ್ಞಾನಿಕ ಬೆಲೆ ನಿಗದಿ ರೈತ ಸಮೂಹವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಪುನರ್‍ ಪರಿಶೀಲಿಸಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ದರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಲ್ಲೂಕಿನ ಬನ್ನಿಗೋಳ, ಜಾಂತಾಪುರ, ಮುದಗಲ್ಲ, ಕಡದರಹಾಳ, ಹುನಕುಂಟಿ, ಕಸಬಾಲಿಂಗಸುಗೂರು, ಹುಲಿಗುಡ್ಡ, ಕರಡಕಲ್ಲ, ಚಿಕಲೆರದೊಡ್ಡಿ, ಹೊನ್ನಹಳ್ಳಿ, ಯರಡೋಣಿ, ಅಡವಿಭಾವಿ, ಗುಂತಗೋಳ ಸೇರಿದಂತೆ ಇತರೆ ಗ್ರಾಮಗಳ ಜಮೀನು ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಗೊಂಡಿದೆ. ಬಹುತೇಕ ರೈತರಿಗೆ ಇಂದಿಗೂ ನೋಟಿಸ್‍ ಬಂದಿಲ್ಲ. ಬಂದಿರುವ ನೋಟಿಸ್‍ಗಳಲ್ಲಿ ಮನಸೋ ಇಚ್ಛೆ ದರ ನಿಗದಿಪಡಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಗದಗ– ವಾಡಿ ರೈಲ್ವೆ ಮಾರ್ಗಕ್ಕೆ ಸ್ವಾಧೀನಪಡಿಸಿಕೊಂಡ ಕುಷ್ಟಗಿ, ಸುರಪುರ ತಾಲ್ಲೂಕುಗಳಲ್ಲಿ ನೀಡಿರುವ ಬೆಲೆ ಕೂಡ ತಾಲ್ಲೂಕಿನ ರೈತರ ಜಮೀನಿಗೆ ನೀಡಿಲ್ಲ. ವಾಸ್ತವ ದರ ನಿಗದಿಪಡಿಸದ ಹೊರತು ಜಮೀನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ.ರೈತರನ್ನು ದಿಕ್ಕು ತಪ್ಪಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು.

ಮುಖಂಡರಾದ ಎನ್‍. ಬಸವರಾಜ, ಮುದಕಪ್ಪ ನೀರಲಕೇರಿ, ಗೋವಿಂದ ನಾಯಕ, ಗುಂಡಯ್ಯ ಸೊಪ್ಪಿಮಠ, ಕುಪ್ಪಣ್ಣ ಮಾಣಿಕ್‍ ಸೇರಿದಂತೆ ಚಿಕಲೇರದೊಡ್ಡಿ, ಗುರುಗುಂಟಾ, ಕರಡಕಲ್ಲ, ಹುಲಿಗುಡ್ಡ, ಕಸಬಾಲಿಂಗಸುಗೂರು, ಯರಡೋಣ, ಬನ್ನಿಗೋಳ, ಜಾಂತಾಪುರ ಇತರೆ ಗ್ರಾಮದ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.