ರಾಯಚೂರು: ‘ರೈತರು ಉತ್ಕೃಷ್ಟ ಬೀಜೋತ್ಪಾದನೆ ಮಾಡಬೇಕು. ಗುಣಮಟ್ಟದ ಹೈಬ್ರೀಡ್ ಬೀಜ ಬಿತ್ತನೆ ಮಾಡಿ ಹೆಚ್ಚಿನ ಇಳುವರಿ ಪಡೆಯುವುದರ ಜತೆಗೆ ಉತ್ತಮ ಆದಾಯ ಪಡೆದುಕೊಳ್ಳಬೇಕು’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ.ಹನುಮಂತಪ್ಪ ಸಲಹೆ ನೀಡಿದರು.
ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಮುಂಗಾರು ಬೀಜ ದಿನೋತ್ಸವ ಉದ್ಘಾಟಿಸಿ ಮಾತನಾಡಿದರು.
‘ವಿಶ್ವವಿದ್ಯಾಲಯದ ಬೀಜ ಘಟಕವು ರೈತರ ಮೂಲಕ ತೊಗರಿ, ಹೆಸರು, ಸೂರ್ಯಕಾಂತಿ, ಶೇಂಗಾ, ಭತ್ತ, ರಾಗಿ, ಸೋಯಾ ಅವರೆ ಬೀಜಗಳ ಉತ್ಪಾದನೆ ಮಾಡುತ್ತಿದೆ. ರೈತರಿಗೆ ವಿತರಣೆಯನ್ನೂ ಮಾಡುತ್ತಿದೆ. ಕೆಲವೊಮ್ಮೆ ಕಲಬುರಗಿ ಹಾಗೂ ರಾಯಚೂರಿನಲ್ಲಿ ಪೊಲೀಸ್ ರಕ್ಷಣೆಯಲ್ಲಿ ರೈತರಿಗೆ ಬಿತ್ತನೆ ಬೀಜ ಪೂರೈಸಲಾಗಿದೆ’ ಎಂದು ತಿಳಿಸಿದರು.
‘ರೈತರು ಕೃಷಿ ತಜ್ಞರೊಂದಿಗೆ ಚರ್ಚಿಸಿ ತಮ್ಮ ಭೂಮಿಗೆ ಸೂಕ್ತವಾದ ಬೆಳೆಯ ತಳಿ ಆಯ್ಕೆ ಮಾಡಿಕೊಳ್ಳಬೇಕು. ಈ ಮೂಲಕ ಉತ್ಪಾದನೆಯನ್ನೂ ಹೆಚ್ಚಿಸಿಕೊಳ್ಳಬೇಕು’ ಎಂದು ಹೇಳಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ವಿಶೇಷಾಧಿಕಾರಿ ಅರುಣಕುಮಾರ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 170 ಬೀಜ ಬೆಳೆಗಾರರು ಇದ್ದಾರೆ. ಪ್ರಸಕ್ತ ವರ್ಷ 3500 ಕ್ವಿಂಟಲ್ ತೊಗರಿ, 40 ಕ್ವಿಂಟಲ್ ಸೂರ್ಯಕಾಂತಿ ಹಾಗೂ 5 ಕ್ವಿಂಟಲ್ ಹೆಸರು ಬೀಜ ಉತ್ಪಾದನೆ ಮಾಡಲಾಗಿದೆ’ ಎಂದು ತಿಳಿಸಿದರು.
ಐದು ಎಕರೆ ಭೂಮಿಯಲ್ಲಿ 9.5 ಕ್ವಿಂಟಲ್ ಜಿಆರ್‌ಜಿ 152 ತೊಗರಿ ಬೆಳೆದ ಪ್ರಗತಿಪರ ರೈತ ಕೆ.ಶ್ರೀನಿವಾಸ ಅವರನ್ನು ಕುಲಪತಿ ಹನುಮಂತಪ್ಪ ಸನ್ಮಾನಿಸಿದರು.
ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಅಮರೇಗೌಡ ಎ. ಅಧ್ಯಕ್ಷತೆ ವಹಿಸಿದ್ದರು.
ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಮಲ್ಲಿಕಾರ್ಜುನ ಡಿ, ಮಲ್ಲೇಶ ಕೊಲಿಮಿ, ಮಧುಸೂದನ ರೆಡ್ಡಿ, ತಿಮ್ಮಣ್ಣ ಚವಡಿ, ಡೀನ್ ನಾರಾಯಣರಾವ್ ಕೆ, ಕುಲಸಚಿವ ದುರುಗೇಶ ಕೆ.ಎಸ್., ವಿಸ್ತರಣಾ ನಿರ್ದೇಶಕ ಶಿವಶಂಕರ ಎನ್., ಸಹ ವಿಸ್ತರಣಾ ನಿರ್ದೇಶಕ ಎ.ಆರ್.ಕುರುಬರ, ಬೀಜ ಬೆಳೆಗಾರ ಎಸ್.ಎಂ.ಸಿದ್ದಾರೆಡ್ಡಿ, ರಾಜ್ಯ ಬೀಜ ನಿಗಮದ ಉಪ ವ್ಯವಸ್ಥಾಪಕ ಪ್ರಭು ತುರಾಯಿ, ಶರಣಪ್ಪ, ವಿಜಯಕುಮಾರ, ಅಜಯಕುಮಾರ ಕೆ. ಉಪಸ್ಥಿತರಿದ್ದರು.
ಉಮೇಶ ಹಿರೇಮಠ ನಿರೂಪಿಸಿದರು. ವಿಜಯಕುಮಾರ ಡಿ.ಕೆ. ವಂದಿಸಿದರು.
ತಜ್ಞರಿಂದ ಮಾಹಿತಿ ಪಡೆದ ರೈತರು
ಕಾರ್ಯಕ್ರಮದ ಆರಂಭದಲ್ಲೇ ರೈತರಿಗೆ ಮುಂಗಾರು ಬೆಳೆಗಳ ಬಗ್ಗೆ ಸಮಗ್ರ ತಾಂತ್ರಿಕ ಮಾಹಿತಿ ಸುಧಾರಿತ ಬೀಜೋತ್ಪಾದನಾ ಮತ್ತು ರೈತರ ಸಹಭಾಗಿತ್ವದ ಬೀಜೋತ್ಪಾದನಾ ಕಾರ್ಯಕ್ರಮಗಳು ಹಾಗೂ ಮಣ್ಣು ಪರೀಕ್ಷೆಯ ಬಗ್ಗೆ ತಜ್ಞರು ಮಾಹಿತಿ ನೀಡಿದರು. ಪ್ರದರ್ಶನದಲ್ಲಿ ರೈತರು ಮುಂಗಾರು ಬೆಳೆಗಳ ಸುಧಾರಿತ ತಳಿಗಳ ಬೀಜ ಜೈವಿಕ ಗೊಬ್ಬರ ಕೀಟನಾಶಕಗಳ ಮಾಹಿತಿ ಪಡೆದರು.
ಮೂರು ತಾಸು ತಡವಾದ ಕಾರ್ಯಕ್ರಮ
ಮಂಗಾರು ಬೀಜ ದಿನೋತ್ಸವ ಕಾರ್ಯಕ್ರಮ ಬೆಳಿಗ್ಗೆ ಸರಿಯಾಗಿ 10ಕ್ಕೆ ಶುರುವಾಗಬೇಕಿತ್ತು. ಆದರೆ ಮೂರು ತಾಸು ತಡವಾಗಿ ಆರಂಭವಾಯಿತು. ರೈತರು ಬೆಳಿಗ್ಗೆಯೇ ಬಂದಿದ್ದರೂ ವಿಶ್ವವಿದ್ಯಾಲಯದ ಕುಲಪತಿ ಸೇರಿ ಅಧಿಕಾರಿಗಳೇ ವೇದಿಕೆಗೆ ಬಂದಿರಲಿಲ್ಲ. ಘಟಿಕೋತ್ಸವದ ಸಿದ್ಧತೆ ಪರಿಶೀಲಿಸಿ ಕುಲಪತಿ ಹನುಮಂತಪ್ಪ ಅವರು ಮಧ್ಯಾಹ್ನ 1 ಗಂಟೆಗೆ ವೇದಿಕೆ ಬಂದರು. ಅಷ್ಟರಲ್ಲಿ ಮಳೆ ಬರಲು ಶುರುವಾಯಿತು. ವೇದಿಕೆ ಕಾರ್ಯಕ್ರಮ ಮುಗಿಯುವ ವರೆಗೂ ಮಳೆ ಅಬ್ಬರಿಸಿತು. ಕೇವಲ 20 ನಿಮಿಷದಲ್ಲೇ ವೇದಿಕೆ ಕಾರ್ಯಕ್ರಮ ಮುಗಿಯಿತು. ಇದರಿಂದ ರೈತರು ತೊಂದರೆ ಅನುಭವಿಸಬೇಕಾಯಿತು. ಬೀಜ ಘಟಕದ ವಯಿಂದ ಆವರಣದಲ್ಲಿ ಪೆಂಡಾಲ್ ಹಾಕಲಾಗಿತ್ತು. ರೈತರಿಗೆ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಉದ್ಘಾಟಕರು ಸಮಯಕ್ಕೆ ಸರಿಯಾಗಿ ಬಂದಿದ್ದರೆ ಕಾರ್ಯಕ್ರಮ ಇನ್ನೂ ಚೆನ್ನಾಗಿ ನಡೆಯುತ್ತಿತ್ತು ಎಂದು ರೈತರು ಆಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.