
ಲಿಂಗಸುಗೂರು: ಡಾ.ರವಿಕುಮಾರ ಹೇರೂರು ನರಕಲದಿನ್ನಿ ಸ್ಮರಣಾರ್ಥ ಪಟ್ಟಣದ ಬಸವಸಾಗರ ಕ್ರಾಸ್ ಬಳಿ ನ.13ರಂದು ಬೆಳಿಗ್ಗೆ 10.30ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತಿನ ಅಧ್ಯಕ್ಷ ಆನಂದ ಹೇರೂರು ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಆಯುರ್ವೇದ ವೈದ್ಯರಾಗಿದ್ದ ಡಾ.ರವಿಕುಮಾರ ಹೇರೂರು ಸ್ಮರಣಾರ್ಥ ಡಾ.ನಿರ್ಮಲಾ ಕನ್ನಾಳ, ಡಾ.ಅಕ್ಷಯಕುಮಾರ ಹೇರೂರು ಅವರ ನೇತ್ರತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಶಿಬಿರ ನಡೆಯಲಿದೆ’ ಎಂದರು.
‘ಹಲ್ಲುನೋವು, ಮುಖದ ಕರಿ ಬಂಗು, ಅಸ್ತಮಾ, ಮೂಲವ್ಯಾಧಿ, ಮೊಣಕಾಲು ನೋವು, ಅಲರ್ಜಿ, ಗ್ಯಾಸ್ಟ್ರಿಕ್ ಹಾಗೂ ಕಣ್ಣಿನ ತೊಂದರೆಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ಮಾಡಿ ಔಷಧ ನೀಡಲಾಗುತ್ತದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಜನರು ಶಿಬಿರವನ್ನು ಸುದಪಯೋಗಪಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಸಿದ್ಧರಾಮಾನಂದಪುರಿ ಸ್ವಾಮೀಜಿ, ಚಿದಾನಂದಯ್ಯ ಗುರುವಿನ, ಮಾದಯ್ಯ ಗುರುವಿನ, ಮಾಜಿ ಸಂಸದ ವಿರೂಪಾಕ್ಷಪ್ಪ, ಅರವಿಂದ ಆಯುರ್ವೇದ ಸೇವಾಶ್ರಮದ ಅಧ್ಯಕ್ಷ ದ್ಯಾಮಣ್ಣ ಹೇರೂರು, ಕುಮಾರಸ್ವಾಮಿ ಕಸಬಾಲಿಂಗಸುಗೂರು, ರಾಜಾ ಚನ್ನಪ್ಪ ನಾಯಕ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ವೈದ್ಯರಾದ ರಾಘವೇಂದ್ರ ಸುಗಂಧಿ ಹಾಗೂ ಗಣೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.