ADVERTISEMENT

ಗ್ರಾಮಗಳಲ್ಲೂ ಸಂಗೀತ ಸುಧೆ ಹರಡಲಿ: ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ

ನಾದಲೋಕ ಕಲಾ ಬಳಗದಿಂದ ‘ಗಾನ ಸಿಂಚನ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 14:29 IST
Last Updated 2 ಮಾರ್ಚ್ 2021, 14:29 IST
ರಾಯಚೂರು ತಾಲ್ಲೂಕು ಮಿಟ್ಟಿಮಲ್ಕಾಪುರ ಗ್ರಾಮದ ಆರೂಢ ಜ್ಯೋತಿ ಶಾಂತಾಶ್ರಮದಲ್ಲಿ ನಾದಲೋಕ ಕಲಾ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಗಾನ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿದರು
ರಾಯಚೂರು ತಾಲ್ಲೂಕು ಮಿಟ್ಟಿಮಲ್ಕಾಪುರ ಗ್ರಾಮದ ಆರೂಢ ಜ್ಯೋತಿ ಶಾಂತಾಶ್ರಮದಲ್ಲಿ ನಾದಲೋಕ ಕಲಾ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಗಾನ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿದರು   

ರಾಯಚೂರು: ದೇಶವು ಸಮಗ್ರವಾಗಿ ಅಭಿವೃದ್ಧಿ ಆಗುವುದಕ್ಕೆ ಗ್ರಾಮೀಣ ಭಾಗದಲ್ಲೂ ಗಮನ ಹರಿಸಬೇಕಿದೆ. ವಿವಿಧ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇವಲ ರಾಯಚೂರು ಕೇಂದ್ರಿತವಾಗಿ ಆಯೋಜಿಸಬಾರದು. ಗ್ರಾಮೀಣ ಭಾಗಗಳಲ್ಲಿಯೂ ಸಂಗೀತ ಸುಧೆ ಮತ್ತು ಇತರೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಿಟ್ಟಿಮಲ್ಕಾಪುರ ಗ್ರಾಮದ ಆರೂಢಜ್ಯೋತಿ ಶಾಂತಾಶ್ರಮದಲ್ಲಿ ರಾಯಚೂರಿನ ನಾದಲೋಕ ಕಲಾ ಬಳಗದಿಂದ ಮಂಗಳವಾರ ಆಯೋಜಿಸಿದ್ದ ‘ಗಾನ ಸಿಂಚನ’ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಪಂಡಿತ್‌ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಸಂಗೀತಾಭ್ಯಾಸ ಮಾಡಿಕೊಂಡಿರುವ ರಾಘವೇಂದ್ರ ಆಶಾಪೂರ, ಈಗ ನೂರಾರು ಜನರಿಗೆ ಸಂಗೀತ ಅಭ್ಯಾಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ನಾಡಿನ ಎರಡು ಮಹಾನ್‌ ರತ್ನಗಳಲ್ಲಿ ಪುಟ್ಟರಾಜ ಗವಾಯಿಗಳು ಒಬ್ಬರಾಗಿದ್ದಾರೆ. 111 ವರ್ಷ ಬದುಕಿದ ತುಮಕೂರಿನ ಸಿದ್ಧಗಂಗಾ ಶ್ರೀ ಕೂಡಾ ಮಹಾರತ್ನರಾಗಿದ್ದರೆ ಎಂದು ಹೇಳಿದರು.

ADVERTISEMENT

ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ವೈದ್ಯ, ಎಂಜಿನಿಯರ್ ಮಾಡಬೇಕು ಎನ್ನುವ ಕನಸು ಹೊತ್ತಿದ್ದಾರೆ. ಆದರೆ ಉತ್ತಮ ರೈತನಾಗುವುದಕ್ಕೆ ಹಾಗೂ ಮಠಗಳ ಮೂಲಕ ಸಮಾಜ ಸೇವೆ ಮಾಡುವ ಸನ್ಯಾಸಿ ಆಗುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ ಎಂದು ವಿಷಾದಿಸಿದರು.

ಮಿಟ್ಟಿಮಲ್ಕಾಪುರ ಗ್ರಾಮದ ಆರೂಢಜ್ಯೋತಿ ಶಾಂತಾಶ್ರಮದ ನಿಜಾನಂದ ಮಹಾಸ್ವಾಮಿ ಮಾತನಾಡಿ, ಗುರುಸೇವೆ ಮಾಡದೆ ದೊರೆಯದಣ್ಣ ಮುಕ್ತಿ ಎನ್ನುವ ಮಾತು ನೆನಪಿಡಬೇಕು. ಜ್ಞಾನಾರ್ಜನೆಗೆ ಎಲ್ಲರೂ ಹೆಚ್ಚು ಮಹತ್ವ ನೀಡಬೇಕು. ರಾಯಚೂರಿನಲ್ಲಿ ಸಾಕಷ್ಟು ಸಂಗೀತ ವಿದ್ವಾಂಸರಿದ್ದಾರೆ, ಹಿಂದೆ ಇದ್ದರು. ದೇಶ, ವಿದೇಶಗಳಲ್ಲಿ ರಾಯಚೂರಿಗೆ ಒಳ್ಳೆಯ ಹೆಸರು ಅವರು ತಂದಿದ್ದಾರೆ. ಆದರೆ, ದೀಪದ ಕೆಳಗಿನ ಕತ್ತಲೆಯನ್ನು ಹೋಗಲಾಡಿಸುವ ಕೆಲಸವನ್ನು ಅವರೂ ಮಾಡಿಲ್ಲ ಎಂದು ವಿಷಾದಿಸಿದರು.

ಆದರೆ, ರಾಘವೇಂದ್ರ ಆಶಾಪೂರ ಅವರಿಗೆ ಹೊರ ಜಿಲ್ಲೆಗಳಿಗೆ ಹೋಗುವುದಕ್ಕೆ ಅವಕಾಶ ಇದ್ದರೂ ಹೋಗಿಲ್ಲ. ಯಾವುದೇ ಜಾತಿ, ಆಸ್ತಿ ಅಂತಸ್ತುಗಳನ್ನು‌ ಲೆಕ್ಕಹಾಕದೆ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿರುವುದು ಶ್ಲಾಘನೀಯ ಎಂದರು.

ನಿವೃತ್ತ ವಾಯುಸೈನಿಕ ವಿಜಯಾನಂದ ರಾಗಲಪರ್ವಿ ಮಾತನಾಡಿ, ರೈತರು ದೇಶದ ಬೆನ್ನೆಲೆಬು ಎಂದು ಹೊಗಳುತ್ತಾರೆ. ವಾಸ್ತವದಲ್ಲಿ ರೈತರಿಗೆ ವಧು ಕೊಡುವುದಕ್ಕೆ ಹಿಂದೇಟು ಹಾಕುವ ಸ್ಥಿತಿ ಇದೆ. ಈ ಬಗ್ಗೆ ರೈತರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ರೈತರು ಒಗ್ಗಟ್ಟಾಗುವುದು ತುಂಬಾ ಮುಖ್ಯವಿದೆ ಎಂದು ಹೇಳಿದರು.

ಖಾರಾಬದಿನ್ನಿಯ ದೊಡ್ಡಬಸಯ್ಯ ಶಾಸ್ತ್ರೀ ಅವರು ವಿಶೇಷ ಉಪನ್ಯಾಸ ನೀಡಿ, ಗದುಗಿನ ಪುಟ್ಟರಾಜ ಗವಾಯಿಗಳಲ್ಲಿ ತಾವು ಪಡೆದ ಸಂಗೀತ ಹಾಗೂ ಗುರುವಿನ ಮಹಿಮೆಯನ್ನು ವಿವರಿಸಿದರು.

ಮಿಟ್ಟಿ ಮಲ್ಕಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಹೊಸಮಲಿಯಾಬಾದ್‌ ಕಾರ್ಯಕ್ರಮ ಉದ್ಘಾಟಿಸಿದರು. ವಾದ್ಯ ಕಲಾವಿದ ಸುಧಾಕರ್‌ ಅಸ್ಕಿಹಾಳ ಇದ್ದರು.ನಾದಲೋಕ ಕಲಾಬಳಗದ ಅಧ್ಯಕ್ಷ ರಾಘವೇಂದ್ರ ಆಶಾಪೂರ ಸ್ವಾಗತಿಸಿ, ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.