ADVERTISEMENT

ಚಿನ್ನದ ಬೆಲೆ ಜಿಗಿತ: ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಹರ್ಷ

ಅಮರೇಶ ನಾಯಕ
Published 30 ಜುಲೈ 2020, 13:09 IST
Last Updated 30 ಜುಲೈ 2020, 13:09 IST
30 ಪೊಟೊ 1: ಹಟ್ಟಿಚಿನ್ನದಗಣಿ ಕಂಪನಿಯ ಹೊರ ನೋಟ.
30 ಪೊಟೊ 1: ಹಟ್ಟಿಚಿನ್ನದಗಣಿ ಕಂಪನಿಯ ಹೊರ ನೋಟ.   

ಹಟ್ಟಿ ಚಿನ್ನದ ಗಣಿ: ಕೊರೊನಾ ಭೀತಿಯಲ್ಲಿಯೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದಕ್ಕೆ ಪೂರಕವಾಗಿ ಚಿನ್ನದ ಬೇಡಿಕೆಯೂ ಹೆಚ್ಚಿದ ಪರಿಣಾಮ ಇಲ್ಲಿನ ರಾಜ್ಯ ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಮಿಕರು ಹರ್ಷಗೊಂಡಿದ್ದಾರೆ.

ಪ್ರಸ್ತುತ ಪ್ರತಿ 10 ಗ್ರಾಂ ಚಿನ್ನಕ್ಕೆ ₹ 53 ಸಾವಿರವಿದೆ. ಲಾಕ್‌ಡೌನ್‌ ಪರಿಣಾಮ ಮಾರ್ಚ್‌ 24 ರಿಂದ ಏಪ್ರಿಲ್ ಅಂತ್ಯದವರೆಗೆ ಗಣಿ ಕಂಪನಿಯಲ್ಲಿ ಚಿನ್ನ ಉತ್ಪಾದನೆ ನಡೆಯಲಿಲ್ಲ. ಸರ್ಕಾರ ಸೂಚನೆಯಂತೆ ಮೇ ನಂತರ ಉತ್ಪಾದನೆ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಕಾರ್ಮಿಕರಿಗೆ ಕೋವಿಡ್‌ ಪಾಸಿಟಿವ್ ಕಾಣಿಸಿಕೊಂಡಿತು. ಆದರೂ ಕಾರ್ಮಿಕರು ಎದೆಗುಂದಲಿಲ್ಲ. ಇದರ ನಡುವೆಯೂ ಕೋವಿಡ್‌ ನಿಯಮಗಳ ಪಾಲನೆ ಮಾಡುತ್ತಾ ಕೆಲಸ ಮಾಡಿದರು.

ಕಂಪನಿಯಲ್ಲಿ ಮೇ ತಿಂಗಳಲ್ಲಿ 80 ಕೆ.ಜಿ ಚಿನ್ನ ಉತ್ಪಾದಿಸಲಾಯಿತು. ಅಗತ್ಯ ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ಮೂಲಕ ಜೂನ್ ಆರಂಭದಿಂದಲೇ ಭೂ ಕೆಳಮೈ ಕಾರ್ಮಿಕರು ಗೇಜ್‌ನಲ್ಲಿ ಇಳಿಯುವುದಕ್ಕೆ ಅವಕಾಶ ನೀಡಲಾಯಿತು. ಪಾಳಿ ಪ್ರಕಾರ ಉತ್ಪಾದನೆ ಕೈಗೊಳ್ಳಲಾಯಿತು. ಜೂನ್‌ನಲ್ಲಿ 140 ಕೆ.ಜಿ ಚಿನ್ನ ಉತ್ಪಾದಿಸಲಾಯಿತು. ಜುಲೈ ಅಂತ್ಯದವರೆಗೆ 145 ಕೆ.ಜಿ ಚಿನ್ನ ಉತ್ಪಾದಿಸುವ ಸಾಧ್ಯತೆಯಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ADVERTISEMENT

ಸಾಮಾನ್ಯ ದಿನಗಳಲ್ಲಿ ಹಟ್ಟಿ ಕಂಪನಿಯು ಮಾಸಿಕ 170 ರಿಂದ 180 ಕೆ.ಜಿ ಚಿನ್ನ ಉತ್ಪಾದಿಸುತ್ತದೆ. ಕೊರೊನಾ ಭೀತಿಯ ನಡುವೆಯೂ ಮಾಸಿಕ 75 ರಿಂದ 80 ಕೆ.ಜಿ ಚಿನ್ನ ಉತ್ಪಾದಿಸಲಾಗುತ್ತಿದೆ. 4 ಸಾವಿರ ಕಾರ್ಮಿಕರಿಗೆ ವೇತನ ಹಾಗೂ ಕಂಪನಿಯ ಖರ್ಚು -ವೆಚ್ಚಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಕಂಪನಿಯ ಆಡಳಿತಾಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.